ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ 38 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ, ವಿಭಾಗದ ಮುಖ್ಯಸ್ಥೆಯಾಗಿದ್ದ ಶ್ರೀಮತಿ ಮೀನಾ ಎಸ್. ಕಜಂಪಾಡಿಯವರನ್ನು ಇತ್ತೀಚೆಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರ ಸಹೋದ್ಯೋಗಿಗಳು ಪ್ರಾಧ್ಯಾಪಿಕೆಯ ಜೊತೆಗಿನ ತಮ್ಮ ಸ್ಮರಣೀಯ ಕ್ಷಣಗಳನ್ನು ಮೆಲುಕುಹಾಕಿದರು. ಆಂಗ್ಲ ಭಾಷೆಯಲ್ಲಿ ಶ್ರೀಮತಿ ಮೀನಾ ಕಜಂಪಾಡಿಯವರಿಗಿದ್ದ ಹಿಡಿತ, ಮಾಸದ ಮುಗುಳ್ನಗು, ಕಷ್ಟ ಸಹಿಸುವ ಗುಣ, ಸ್ನೇಹಪರತೆ, ಕಿರಿಯರಿಗೂ ಕಿವಿಯಾಗುವ ಗುಣಗಳನ್ನು ಹಿರಿಯ ಸಹೋದ್ಯೋಗಿಗಳಾದ ಶ್ರೀಮತಿ ಸುನಂದ ಯು, ಡಾ. ಸುಭಾಷಿಣಿ ಶ್ರೀವತ್ಸ, ಡಾ. ಯತೀಶ್ ಕುಮಾರ್, ಹೆಚ್. ಪಟ್ಟಾಭಿರಾಮ ಸೋಮಯಾಜಿ, ಡಾ. ರತ್ನಾವತಿ ಟಿ, ಡಾ. ಲತಾ ಎ. ಪಂಡಿತ್, ಡಾ. ನಾಗರತ್ನ ಎನ್ ರಾವ್, ಶ್ರೀಮತಿ ರಾಜೇಶ್ವರಿ, ಶ್ರೀಮತಿ ಅರುಣಾ ಕುಮಾರಿ, ಡಾ. ಕೆ ಎಂ ಉಷಾ, ಡಾ. ಭಾರತಿ ಪ್ರಕಾಶ್ ಮೊದಲಾದವರು ಕೊಂಡಾಡಿದರು.
ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ ಎ, ಪ್ರಾಧ್ಯಾಪಿಕೆಯ ತಾಳ್ಮೆ, ಸರಳತೆಗಳು ಎಲ್ಲರಿಗೂ ಮಾದರಿ. ಸಂಸ್ಥೆಯ ಏಳ್ಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಅವರ ಸಲಹೆ- ಸೂಚನೆಗಳು ಭವಿಷ್ಯದಲ್ಲೂ ಅಗತ್ಯ ಎಂದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಎ. ಕುಮಾರ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮೀನಾ ಎಸ್. ಕಜಂಪಾಡಿಯವರ ಪತಿ ಡಾ. ಶ್ರೀಪತಿ ಕಜಂಪಾಡಿ, ಮಗಳು ಮಂದಿರಾ ಉಪಸ್ಥಿತರಿದ್ದರು.