ಬೆಂಗಳೂರು: ಆರಂಭದಲ್ಲಿ ಕರ್ನಾಟಕ ರಾಜ್ಯವು ಕೊರೋನಾ ಸಾಂಕ್ರಾಮಿಕ ರೋಗದ ಮೇಲೆ ಉತ್ತಮ ಹಿಡಿತವನ್ನು ಸಾಧಿಸಿತ್ತು. ಆದರೆ ಜೂನ್ ತಿಂಗಳಾಂತ್ಯದಿಂದ ರಾಜ್ಯದಲ್ಲಿ ಕೊರೊನಾವೈರಸ್ ಪರಿಸ್ಥಿತಿ ಹದಗೆಡುತ್ತಿದೆ. ಲಾಕ್ಡೌನ್ನಂತಹ ಕ್ರಮಗಳನ್ನು ಜಾರಿಗೊಳಿಸಿದರೂ, ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಾದರಿ ರಾಜ್ಯದಂತೆ ತೋರುತ್ತಿದ್ದ ಕರ್ನಾಟಕದಲ್ಲಿ ಈಗ ಕೊರೋನಾ ನಿಯಂತ್ರಣ ತಪ್ಪಿ ಹೋಗಿದೆ. ರಾಜ್ಯದ ರಾಜಧಾನಿಯೇ ಕೊರೋನಾದ ಹಾಟ್ಸ್ಪಾಟ್ ಆಗಿದೆಯಾ ಎಂಬ ಸಂಶಯವನ್ನೂ ಹುಟ್ಟುಹಾಕಿದೆ!
ಆದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಥವಾ ನಾಳೆ ಯಡಿಯೂರಪ್ಪ ಅವರೊಂದಿಗೆ, ಸೋಂಕಿನ ಪರಿಸ್ಥಿತಿ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗದ ಮೇಲೆ ನಿಯಂತ್ರಣ ಸಾಧಿಸುವ ಸಾಧನವಾಗಿ ಮತ್ತೆ ಲಾಕ್ಡೌನ್ ಅನ್ನು ಜಾರಿಗೊಳಿಸುವ ಬಗ್ಗೆಯೂ ಚರ್ಚೆ ನಡೆಸಬಹುದು ಎಂದು ಹೇಳಲಾಗುತ್ತದೆ.
ಬೇರೆ ಬೇರೆ ರಾಜ್ಯಗಳಲ್ಲಿನ ಕೊರೋನಾ ಪರಿಸ್ಥಿತಿಯನ್ನು ಸಮಾಲೋಚಿಸಲು ಪ್ರಧಾನಿಯವರು ಬಿಹಾರ, ತೆಲಂಗಾಣ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಅಸ್ಸಾಂ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಪ್ರವಾಹ ಪೀಡಿತ ಅಸ್ಸಾಂ ಮುಖ್ಯಮಂತ್ರಿಯೊಂದಿಗೆ, ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆಯೂ ಅವರು ಚರ್ಚೆ ನಡೆಸಿದರು. ಬಿಹಾರವೂ ಕೆಲವು ಪ್ರವಾಹಗಳಿಗೆ ಸಾಕ್ಷಿಯಾಗಿರುವುದರಿಂದ, ಅವರು ಪ್ರವಾಹ ಮತ್ತು ಕರೋನಾ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಇದರ ಜೊತೆಜೊತೆಗೆ , ರೋಗದ ಹರಡುವಿಕೆಯನ್ನು ನಿಯಂತ್ರಿಸುವ ಸಾಧನವಾಗಿ ಲಾಕ್ಡೌನ್ ಅನ್ನು ಬಳಸುವ ವಿಷಯವನ್ನು ಸಹ ಮಾತನಾಡಿದ್ದಾರೆ ಎನ್ನಲಾಗಿದೆ. ಲಾಕ್ಡೌನ್ ಕುರಿತು ಆಯಾ ರಾಜ್ಯದ ಮುಖ್ಯಮಂತ್ರಿಗಳ ಅಭಿಪ್ರಾಯದ ಬಗ್ಗೆ ಮೂರು ದಿನಗಳಲ್ಲಿ ಲಿಖಿತವಾಗಿ ತಿಳಿಸಲು ಅವರಿಗೆ ಹೇಳಲಾಗಿದೆ ಎಂದು ತಿಳಿದು ಬಂದಿದೆ.
ಇದರ ಮುಂದುವರೆದ ಭಾಗದಂತೆ, ಪ್ರಧಾನಿಯವರು ಇಂದು ಅಥವಾ ನಾಳೆ, ಇತರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಲಾಕ್ಡೌನ್ ಜಾರಿಗೊಳಿಸಲು ಅಥವಾ ಸೋಂಕಿನ ವಿರುದ್ಧ ಹೋರಾಡಲು ಇತರ ಮಾರ್ಗಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.