ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್ – “ಮರಳಿ ಬಂದ ಚಿರಂಜೀವಿ” ಎಂದ ಅಭಿಮಾನಿಗಳು

0
278
Tap to know MORE!

ನಟಿ ಮೇಘನಾ ರಾಜ್‌ ಅವರು ಮುದ್ದಾದ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಗುರುವಾರ ಈ ಶುಭ ಸಮಾಚಾರ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಮೇಘನಾಗೆ ಸ್ನೇಹಿತರು, ಅಭಿಮಾನಿಗಳು, ಚಿತ್ರರಂಗದ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಮಗು ಜನಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಎದುರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ‘ಚಿರು ಮತ್ತೆ ಹುಟ್ಟಿ ಬಂದಿದ್ದಾರೆ’ ಎಂದು ಎಲ್ಲರೂ ಖುಷಿಪಡುತ್ತಿದ್ದಾರೆ.

ಸುದ್ದಿವಾಣಿ, ಚಿರಂಜೀವಿ ಸರ್ಜಾ, ಮೇಘನಾ ರಾಜ್

ಮಂಗಳವಾರವೇ (ಅ.20) ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮೇಘನಾ ರಾಜ್‌ ಸರ್ಜಾ ಬಂದಿದ್ದರು. ಹೆರಿಗೆ ದಿನಾಂಕ ಹತ್ತಿರವಾಗಿದ್ದ ಕಾರಣ ಅವರನ್ನು ಜಯನಗರದ ಅಕ್ಷ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ರೆಗ್ಯುಲರ್‌ ತಪಾಸಣೆ ಬಳಿಕ ಮನೆಗೆ ತೆರಳಿದ್ದರು. ಆದರೆ, ಅ.21ರಂದು ಅವರು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾದರು.

ಪ್ರಮೀಳಾ ಜೋಷಾಯ್, ಸುಂದರ್‌ ರಾಜ್‌, ಧ್ರುವ ಸರ್ಜಾ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಮೇಘನಾರ ಜೊತೆಗಿದ್ದು ಕಾಳಜಿ ವಹಿಸುತ್ತಿದ್ದಾರೆ. ಅಣ್ಣನ ಮಗನಿಗಾಗಿ ಧ್ರುವ ಸರ್ಜಾ ಬೆಳ್ಳಿ ತೊಟ್ಟಿಲು ಖರೀದಿಸಿದ್ದು, ಅದರ ಫೋಟೋ ಈಗಾಗಲೇ ಎಲ್ಲೆಡೆ ವೈರಲ್‌ ಆಗಿದೆ.

ಪತಿ ಚಿರಂಜೀವಿ ಸರ್ಜಾ ನಿಧನರಾದಾಗ (ಜೂ.7) ಮೇಘನಾ 5 ತಿಂಗಳ ಗರ್ಭಿಣಿ ಆಗಿದ್ದರು. ಹೃದಯಾಘಾತದಿಂದ ಚಿರು ಮೃತಪಟ್ಟಾಗ ಮೇಘನಾ ನೋವಿನ ಕಡಲಲ್ಲಿ ಮುಳುಗುವಂತಾಗಿತ್ತು. ಇಡೀ ಸರ್ಜಾ ಕುಟುಂಬ ಕಣ್ಣೀರು ಹಾಕುತ್ತ ದಿನ ಕಳೆಯುತ್ತಿತ್ತು. ಈಗ ಮಗುವಿನ ಆಗಮನದಿಂದಾಗಿ ಸರ್ಜಾ ಫ್ಯಾಮಿಲಿಯಲ್ಲಿ ನಗುವಿನ ಅಲೆ ಮೂಡಿದೆ.

LEAVE A REPLY

Please enter your comment!
Please enter your name here