ಪ್ರಧಾನಿ ಮೋದಿ ಅವರಲ್ಲಿ ನಾನು ದೇವರಾಜ ಅರಸು ಅವರನ್ನು ಕಾಣುತ್ತಿದ್ದೇನೆ. ಮೋದಿಗೂ, ದೇವರಾಜ ಅರಸು ಅವರಿಗೂ ಸಾಕಷ್ಟು ಸಾಮ್ಯತೆಯಿದೆ. ಮೋದಿಯವರನ್ನು ಟೀಕಿಸುವ ಮುನ್ನ ಯೋಚಿಸಿ ಮಾತನಾಡಿ. ಮೋದಿ ಈ ದೇಶ ಕಂಡ ಯಶಸ್ವಿ ನಾಯಕ. ದೇಶದ ಸಮಗ್ರತೆ, ಐಕ್ಯತೆ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ದೇಶ ಕಂಡ ಮೊದಲ ಅಹಿಂದ ಪ್ರಧಾನಿಯಾಗಿದ್ದಾರೆ. ಅಹಿಂದ ಎಂದುಕೊಳ್ಳುವ ಸಿದ್ದರಾಮಯ್ಯ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಿಂದ ಪ್ರಧಾನಿ ನರೇಂದ್ರ ಮೋದಿ ಟೀಕೆ ವಿಚಾರವಾಗಿ ಮಾತನಾಡಿ, ಎಳಸು ಮುಂಡೇದೇ ಸರಿಯಾಗಿ ಮಾತನಾಡು ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಪತ್ರ ಬರೆದು ರಾಹುಲ್ ಗಾಂಧಿಗೆ ಬುದ್ಧಿ ಹೇಳಿದ್ದಾರೆ. ದೇಶದ ಸಮಗ್ರತೆಯ ವಿಚಾರ ಬಂದಾಗ ಸರಿಯಾಗಿ ಮಾತನಾಡಬೇಕು. ನೀವು ನಿಮ್ಮ ಪಕ್ಷದ ಪ್ರಧಾನಿಗಳಿಗೆ ಸರಿಯಾದ ಗೌರವ ಕೊಟ್ಟಿಲ್ಲ. ಮನಮೋಹನ್ ಸಿಂಗ್, ನರಸಿಂಹರಾವ್ ಅವರನ್ನು ನೀವು ಹೇಗೆ ನಡೆಸಿಕೊಂಡಿರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು.