ಹೊರ ಬರಲಿದೆ “ಯಕ್ಷಗಾನ ವಿಶ್ವಕೋಶ” – ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ ಅಕಾಡೆಮಿ

0
187
Tap to know MORE!

ಬೆಂಗಳೂರು: ರಾಜ್ಯ ಯಕ್ಷಗಾನ ಅಕಾಡೆಮಿಯು ನೂತನ ‘ಯಕ್ಷಗಾನ ವಿಶ್ವಕೋಶ’ವನ್ನು ಹೊರತರಲು ಮುಂದಾಗಿದೆ. ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಮತ್ತು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅಕಾಡೆಮಿಯು ಈ ಕ್ರಮಕ್ಕೆ ಮುಂದಾಗಿದೆ.

ಈ ಕುರಿತಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ. ಎ. ಹೆಗಡೆ ನೇತೃತ್ವದಲ್ಲಿ ಅಕಾಡೆಮಿ ಸದಸ್ಯರು ಚರ್ಚಿಸಿದ್ದು, ವಿಶ್ವಕೋಶ ಹೊರತರುವ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ಈ ಸಂಬಂಧ ಅಕಾಡೆವಿಯು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದೆ. ಇದರಿಂದಾಗಿ ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ಚಿತ್ರಣ ಜನರಿಗೆ ದೊರೆಯಲಿದೆ.

ಅಕಾಡೆಮಿ ಸದಸ್ಯರಾದ ಮೈಸೂರಿನ ಜಿ. ಎಸ್‌. ಭಟ್‌ ಅವರಿಗೆ ಸಂಪಾದಕೀಯ ಮಂಡಳಿಯ ನೇತೃತ್ವವನ್ನು ವಹಿಸಲಾಗಿದೆ. ಈಗಾಗಲೇ ಅವರು ಹಲವು ವಿಶ್ವಕೋಶಗಳು ಹೊರಬರಲು ಸಹಾಯ ಮಾಡಿದ್ದು, ಅವರ ನೇತೃತ್ವದಲ್ಲಿ ಕೋಶವು ಉತ್ತಮವಾಗಿ ಹೊರಬರಲಿದೆ ಎಂಬ ವಿಶ್ವಾಸ ಅಕಾಡೆಮಿಯದ್ದಾಗಿದೆ.

ಇದರಲ್ಲಿ ಯಕ್ಷಗಾನ ಹುಟ್ಟು, ಬೆಳವಣಿಗೆ, ಅದಕ್ಕೆ ಸಂಬಂಧಿಸಿದ ವ್ಯಾಖ್ಯಾನ, ನೃತ್ಯವಿಧಾನ, ತಾಳಮದ್ದಳೆ, ಗೊಂಬೆಯಾಟ, ಮೂಡಲಪಾಯ, ಅರ್ಥಧಾರಿ, ಕೇಳಿಕೆ, ಪ್ರಸಾಧನ, ವಸ್ತ್ರಾಲಂಕಾರ ಸಹಿತ ಇನ್ನಿತರ ಪೂರಕ ಮಾಹಿತಿಗಳು ದೊರೆಯಲಿವೆ. ಹಿರಿಯ ಕಲಾವಿದರ ಪರಿಚಯವೂ ಇರಲಿವೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ| ಎಂ. ಎ. ಹೆಗಡೆ ತಿಳಿಸಿದ್ದಾರೆ.

ಈ ವಿಶ್ವಕೋಶ ಹೊರತರಲು ಸುಮಾರು ₹50 ಲಕ್ಷ ಖರ್ಚಾಗುವ ಸಾಧ್ಯತೆಯಿದೆ. ಅಕಾಡೆಮಿಯಲ್ಲಿ ಈಗ ಅನುದಾನದ ಕೊರತೆಯಿದ್ದರೂ, ಇರುವುದನ್ನೇ ಬಳಸಿ ವಿಶ್ವಕೋಶ ಹೊರತರಲಾಗುವುದು ಎಂದು ಅಕಾಡೆಮಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here