ನಾಳೆ ಬಂದ್| ಬೆಂಬಲ ಕೊಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

0
125
Tap to know MORE!

ಬೆಂಗಳೂರು, ಡಿ.4:_ ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ನಾಳೆ ಕರೆ ಕೊಟ್ಟಿರುವ ಕರ್ನಾಟಕ ಬಂದ್‍ಗೆ ರಾಜ್ಯದ ಜನತೆ ಬೆಂಬಲ ಕೊಡಬಾರದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನಾಳಿನ ಬಂದ್‍ಗೆ ಕನ್ನಡಿಗರು ಬೆಂಬಲ ನೀಡಬಾರದು. ಜನರಿಗೆ ತೊಂದರೆ ಕೊಟ್ಟು ಬಲವಂತವಾಗಿ ಬಂದ್ ಮಾಡಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಕನ್ನಡ ಮತ್ತು ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ. ಧರ್ಮ ಮತ್ತು ಜಾತಿ ಯಾವುದನ್ನೂ ನೋಡದೆ ಎಲ್ಲರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಕನ್ನಡದ ಅಭಿವೃದ್ಧಿಗೆ ಇನ್ನಷ್ಟು ಸಲಹೆಗಳನ್ನು ನೀಡಿ ಅದನ್ನು ಅನುಷ್ಠಾನ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಉಡುಪಿ : “ಕನ್ನಡ ಕಡೆಗಣಿಸುವ ಪ್ರಶ್ನೆಯೇ ಇಲ್ಲ” – ಸ್ಪಷ್ಟನೆ ನೀಡಿದ ಶ್ರೀ ಕೃಷ್ಣ ಮಠ

ಈಗಲೂ ಕೂಡ ನಾನು ಹಿರಿಯ ಹೋರಾಟಗಾರರಾದ ವಾಟಾಳ್ ನಾಗರಾಜ್ ಅವರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಬಂದ್ ಮಾಡುವುದು ಬೇಡ. ನಿಮ್ಮ ಏನೇ ಸಮಸ್ಯೆಗಳಿದ್ದರೂ ನನ್ನ ಬಳಿ ಬಂದು ಚರ್ಚೆ ಮಾಡಿ. ನಿಮಗೆ ಮನವರಿಕೆ ಮಾಡಿಕೊಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಬಂದ್ ಮಾಡುವುದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಇದರಿಂದಾಗಿ ಕೂಲಿ ಕಾರ್ಮಿಕರು, ಶ್ರಮಿಕರು, ದಿನಗೂಲಿ ನೌಕರರು ಸೇರಿದಂತೆ ಅನೇಕರಿಗೆ ತೊಂದರೆಯಾಗುತ್ತದೆ. ಅಷ್ಟಕ್ಕೂ ಬಂದ್ ಮಾಡುವುದರಿಂದ ನೀವು ಸಾಧಿಸುವುದಾದರೂ ಏನು ಎಂದು ಪ್ರಶ್ನಿಸಿದರು. ಎಲ್ಲರೂ ಒಗ್ಗೂಡಿ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯೋಣ. ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಬಂದ್ ಕೈ ಬಿಡಬೇಕು. ಒಂದು ವೇಳೆ ಬಲವಂತವಾಗಿ ಬಸ್‍ಗಳಿಗೆ ಹಾನಿ ಮಾಡುವುದು, ಕಚೇರಿಗಳಿಗೆ ಮುತ್ತಿಗೆ ಹಾಕುವುದು ಸೇರಿದಂತೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಬಿಎಸ್‍ವೈ ನೇರವಾಗಿ ಎಚ್ಚರಿಕೆ ಕೊಟ್ಟರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇಂದು ಸಂಜೆ ಬೆಳಗಾವಿಗೆ ತೆರಳುತ್ತಿದ್ದು, ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ನಾಳೆ ಬೆಂಗಳೂರಿಗೆ ಬರುತ್ತೇನೆಂದು ಬಿಎಸ್‍ವೈ ಹೇಳಿದರು. ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿವೆ.

LEAVE A REPLY

Please enter your comment!
Please enter your name here