ರಾಯರಿಗೆ ನಲವತ್ತು ವರ್ಷ ದಾಟಿತ್ತು. ಜನ ಹಳಬರಾದರೂ, ಆಧುನಿಕತೆಗೆ ಹೊಂಡಿಕೊಂಡು ಬರುತ್ತಿದ್ದರು ಅವರು. ಮೂರು ವರ್ಷಗಳ ಹಿಂದೆಯಷ್ಟೇ ಮಡದಿಯನ್ನು ಕಳಕೊಂಡು ಒಂಟಿಯಾಗಿದ್ದರು.
ಮಗ ರಾಘವೇಂದ್ರ, ಸೊಸೆ ಆರತಿ ಇಬ್ಬರೂ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದವರು, ಎಂಟು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಕಾರಣ ಆರತಿಯ ಗರ್ಭದಲ್ಲಿ ಮನೆ ಬೆಳಗುವ ಜೀವ ಚಿಗುರೊಡೆದಿತ್ತು.
ರಾಯರು ಮಗುವಿನ ಬರುವಿಕೆಯನ್ನು ಕಾಯುತ್ತಿದ್ದರು. ಊರಿನ ಪ್ರಮುಖರಿಂದ ಹಿಡಿದು, ಮನೆಯ ಆಳುಗಳವರೆಗೆ ಎಲ್ಲರಲ್ಲೂ ತಾನು ತಾತನಾಗುವದರ ಕುರಿತು ಮುಖ ಅರಳಿಸಿಕೊಂಡು ಹೇಳಿದ್ದುಂಟು. ರಾಘು ಹೆಂಡತಿಯೊಡನೆ ಆಸ್ಪತ್ರೆಗೆ ಹೋಗಿದ್ದ. ಇನ್ನೇನು ರಾಯರು ಅವನಿಗೆ ಫೋನು ಮಾಡಬೇಕು ಅನ್ನುವಷ್ಟರಲ್ಲಿ, ಅವರ ಮೊಬೈಲ್ ರಿಂಗಣಿಸಿತು. ಅತ್ತ ಕಡೆಯಿಂದ ಕರೆ ಬಂದಿತ್ತು.
ನಸುನಕ್ಕು ಕರೆ ಸ್ವೀಕರಿಸಿದ ರಾಯರು, ಅತ್ತ ಕಡೆಯಿಂದ ರಾಘು ಹೇಳಿದ್ದನನ್ನು ಕೇಳಿ ಗರಬಡಿದಂತಾದರು.
“ಏನಂದೆ?” ತುಸು ಜೋರಾಗಿಯೇ ಕೇಳಿದರು.
“ಅಪ್ಪಾ, ಮುದ್ದು ರಾಜಕುಮಾರಿ ಬರ್ತಾಳೆ” ರಾಘು ಮತ್ತೊಮ್ಮೆ ಹೇಳಿದ.
ರಾಯರ ಕೈಯಿಂದ ಫೋನ್ ಜಾರಿ ನೆಲಕ್ಕುರುಳಿತು. ಅತ್ತ ಕಡೆಯಿಂದ ರಾಘು, “ಅಪ್ಪಾ, ಏನಾಯ್ತು?” ಎಂದು ಕೇಳಿದ್ದು ಕೇಳಿಸಿತು. ನಂತರ ಏನಾಯ್ತೋ ಗೊತ್ತಿಲ್ಲ. ಅವರು ಎದ್ದಾಗ, ಲವಲವಿಕೆಯಿಂದ ತುಂಬಿ ತುಳುಕಬೇಕಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು.
ಎದ್ದು ಅತ್ತ ಇತ್ತ ನೋಡಿದರು. ತಮ್ಮ ಕೋಣೆಯಲ್ಲಿದ್ದರು. ಮೆಲ್ಲನೆ ಹೊರನಡೆದು ಬಂದರು. ಪಕ್ಕದ ಕೋಣೆಯ ಹೊರಗೆ ರಾಘು ಡಾಕ್ಟರ್ ಜೊತೆ ಮಾತನಾಡುತ್ತಿದ್ದ.
“ಏನಿಲ್ಲಿ, ಡಾಕ್ಟ್ರೇ?” ಎಂದು ಗಡುಸು ಧ್ವನಿಯಲ್ಲಿ ಕೇಳಿದರು.
“ಏನಿಲ್ಲ ರಾಯರೇ. ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ. ನಾನು ಹೊರಡ್ತೇನೆ, ರಾಘು,” ಎಂದು ಹೊರ ನಡೆದರು.
“ತುಂಬಾ ಥ್ಯಾಂಕ್ಸ್” ಎಂದ ರಾಘು ಅವರನ್ನು ಬೀಳ್ಕೊಡಲು ಮನೆ ಬಾಗಿಲಿನತ್ತ ಹೆಜ್ಜೆ ಹಾಕಿದ.
ಪಕ್ಕದ ಕೋಣೆಯಿಂದ ಯಾರೋ ಅಳುತ್ತಿರುವ ಶಬ್ದ ಬಂತು. ಅತ್ತ ಹೆಜ್ಜೆ ಹಾಕಿ, ಇಣುಕಿ ನೋಡಿದರೆ, ತೊಟ್ಟಿಲ್ಲಲ್ಲಿ ಮಗು ಅಳುತಿತ್ತು. ಮೊಮ್ಮಗುವನ್ನು ಎತ್ತಿ ಮುದ್ದಾಡಬೇಕು ಎನ್ನುವಷ್ಟರಲ್ಲಿ ರಾಘು ಫೋನಿನಲ್ಲಿ ಹೇಳಿದ ಮಾತು ನೆನಪಾಗಿತ್ತು.
ಹೆಣ್ಣು ಮಗುವೇ? ಅಯ್ಯೋ ಶಿವನೇ! ಅಂದುಕೊಂಡರು. ಮಗುವನ್ನು ಮುದ್ದಾಡುವ ಆಸೆಯಿಂದ ಮುಖದಲ್ಲಿ ಮೂಡಿದ್ದ ಮೆಲುನಗೆ, ಕಣ್ಣುಗಳಲ್ಲಿದ್ದ ಮಿಂಚು ಮಾಸತೊಡಗಿತು.
“ಹೀಗಾಗಬಾರದಿತ್ತು. ಇದು ಸರಿಯಲ್ಲ,” ಎಂದರು. ಆರತಿಗೆ ನಿದ್ದೆ ಬಂದಿತ್ತು ಹಾಗಾಗಿ ಅವಳಿಗೆ ಈ ಮಾತು ಕೇಳಿಸಿರಲಿಕ್ಕಿಲ್ಲ. ಆದರೆ ವೈದ್ಯರನ್ನು ಕಳುಹಿಸಿಕೊಟ್ಟು ಬಂದಿದ್ದ ರಾಘುವಿಗೆ ಇದು ಕೇಳಿಸಿತ್ತು.
ಆದರೆ ಅರ್ಥವಾಗಲಿಲ್ಲ. ಮುಂದಿನ ದಿನಗಳಲ್ಲಿ ಅವನು ರಾಯರ ವರ್ತನೆಗಳನ್ನು ಗಮನಿಸದೇ ಇದ್ದರೆ, ಅವನು ರಾಯರಿಗೆ ಮೊಮ್ಮಗಳಲ್ಲ ಮೊಮ್ಮಗ ಬೇಕಿತ್ತು ಎಂಬುದನ್ನು ಅರಿಯುತ್ತಲೂ ಇರಲಿಲ್ಲ.
(ಮುಂದುವರೆಯುವುದು…)
ಶ್ರೀಲಕ್ಷ್ಮಿ ಘಾಟೆ