2020 ನೇ ಸಾಲಿನ ಐಪಿಎಲ್ ಪಂದ್ಯಾವಳಿಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ, ಯುಎಇಯಲ್ಲಿ ನಡೆಯಲಿದೆ. ಸರ್ಕಾರದ ಅನುಮತಿ ಪಡೆದು ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದು ಪ್ರಕಟಣೆ ತಿಳಿಸಿದೆ. ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಮುಂದೂಡುವುದಾಗಿ ಪ್ರಕಟಿಸಿದೆ.
ಶುಕ್ರವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೇ ಷಾ ಸದಸ್ಯರಿಗೆ ಈ ಕುರಿತಂತೆ ಮಾಹಿತಿ ನೀಡಿದರು.
ಅದೇ ಅವಧಿಯಲ್ಲಿ ನಡೆಯಬೇಕಿದ್ದ ಟಿ 20 ವಿಶ್ವಕಪ್ ಅನ್ನು ಐಸಿಸಿಯು ಅಧಿಕೃತವಾಗಿ ಮುಂದೂಡಿದ್ದರಿಂದ, ಬಿಸಿಸಿಐ ಭಾರತದಲ್ಲಿ ಐಪಿಎಲ್ ಆತಿಥ್ಯ ವಹಿಸುವ ಬಗ್ಗೆ ಪರಿಶೀಲಿಸಲು ಭಾರತ ಸರ್ಕಾರವನ್ನು ಸಂಪರ್ಕಿಸಲಿದೆ. ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ದೇಶದ ಪರಿಸ್ಥಿತಿಯು, ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲು ಅಸಮರ್ಥವಾಗಿದ್ದರೆ, ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಡಿಸೆಂಬರ್ ವರೆಗೆ ದೇಶೀಯ ಕ್ರಿಕೆಟ್ ಇಲ್ಲ
ಡಿಸೆಂಬರ್ ವರೆಗೆ ಯಾವುದೇ ದೇಶೀಯ ಕ್ರಿಕೆಟ್ ಪಂದ್ಯಾವಳಿಯು ನಡೆಯುವುದಿಲ್ಲ ಎಂದು ಮಂಡಳಿಯು ಅಪೆಕ್ಸ್ ಕೌನ್ಸಿಲ್ಗೆ ತಿಳಿಸಿದೆ. ದೇಶಾದ್ಯಂತ ಆಡುವ ವಿವಿಧ ದೇಶೀಯ ಮತ್ತು ವಯೋಮಾನದ ಪಂದ್ಯಾವಳಿಗಳಲ್ಲಿ ಸುಮಾರು ಮೂವತ್ತೆಂಟು ತಂಡಗಳು ಭಾಗವಹಿಸುತ್ತವೆ. ಆಟಗಾರರ ಚಲನಶೀಲತೆ ಒಂದು ದೊಡ್ಡ ಅಂಶವಾಗಿರುವುದರಿಂದ, ಮಂಡಳಿಯು ತನ್ನ ದೇಶೀಯ ಕ್ಯಾಲೆಂಡರ್ನಲ್ಲಿ ಈ ಕುರಿತು ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದಿದೆ.
ದುಲೀಪ್ ಟ್ರೋಫಿ, ದಿಯೋಧರ್ ಟ್ರೋಫಿ ಮತ್ತು ಚಾಲೆಂಜರ್ಸ್ ಸರಣಿಯಂತಹ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗುವುದು ಎಂದಿದ್ದಾರೆ. ದೇಶೀಯ ಕ್ರಿಕೆಟ್ ಮಾತ್ರವಲ್ಲ, ಈ ವರ್ಷ ಯಾವುದೇ ಅಂತರರಾಷ್ಟ್ರೀಯ ಆಟಗಳನ್ನು ಮನೆಯಲ್ಲಿ ಆಡುವ ಸಾಧ್ಯತೆ ಬಹಳ ಕಡಿಮೆ!