ರಂಗು ರಂಗಿನ ರಂಗೋಲಿ

0
171
Tap to know MORE!

ದೇವಸ್ಥಾನಗಳಲ್ಲಿ, ಯಾವುದೇ ಶುಭ ಸಮಾರಂಭಗಳಲ್ಲಿ, ಇನ್ನೂ ಹೋಮ-ಹವನಗಳಲ್ಲಿ ಇದಿಲ್ಲದೇ ಪೂಜೆಯೇ ನಡೆಯಲ್ಲ ಅಂದ್ರೆ ತಪ್ಪಾಗಲಾರದು.ಅದುವೇ ಬಹುತೇಕ ಮನೆ ಅಂಗಳದಲ್ಲಿ ರಾರಾಜಿಸುತ್ತಿರುವ ರಂಗು ರಂಗಿನ “ರಂಗವಲ್ಲಿ”. ಹೆಸರೇ ಸೂಚಿಸುವಂತೆ ರಂಗ ಅಂದ್ರೆ ವಿಷ್ಣು ,ವಲ್ಲಿ ಎಂದರೆ ಜಗನ್ಮಾತೆಯಾದ ಶ್ರೀಶಕ್ತಿ. ಆಡುಭಾಷೆಯಲ್ಲಿ ಇದೇ ರಂಗೋಲಿ ಎಂದಾಯ್ತು.
ರಂಗೋಲಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ!!!.. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಗೊತ್ತು. ಶಾಲಾ ಕಾಲೇಜುಗಳಲ್ಲಿ ರಂಗೋಲಿ ಸ್ಪರ್ಧೆ ಇಟ್ಟಾಗ ನಮ್ಮ ಹೆಣ್ಮಕ್ಕಳ ಸಂಭ್ರಮ ಹೇಳತೀರದು.

ಇದು ಹೇಗೆ ವೈಜ್ಞಾನಿಕಕ್ಕೆ ಸಂಬಂಧಿಸಿದೆ ಅಂತ ಯೋಚನೆ ಮಾಡ್ತಾ ಇದ್ರೆ ಉತ್ತರ ಇಲ್ಲಿದೆ.
ಸಾಮಾನ್ಯವಾಗಿ ರಂಗೋಲಿಯಲ್ಲಿ ನಾವು ಚುಕ್ಕಿಯನ್ನಿಟ್ಟು, ರೇಖೆ(ಗೆರೆ)ಗಳನ್ನು X-Y ಕಕ್ಷೆ (Axis) ಎಳೆದು ವೃತ್ತಕಾರ, ವಜ್ರಾಕಾರ,ಆಯಾತಾಕಾರದ ಸುಂದರವಾದ ರಂಗೋಲಿಯನ್ನು ಹಾಕುತ್ತೇವೆ.ಈ ರೇಖೆಗಳು ಉಬ್ಬರ‌-ಇಳಿತವನ್ನು ಒಳಗೊಂಡಿದೆ. ಭೌತಶಾಸ್ತ್ರ(physics)ದಲ್ಲಿ ಇದನ್ನೇ crest and trough ಎನ್ನುತ್ತಾರೆ.
ಈ ರಂಗೋಲಿಯನ್ನು (ರೇಖಾ ಚಿಹ್ನೆಗಳನ್ನು) ನೋಡುವುದರಿಂದ ದೃಷ್ಠಿಪಟಲದಲ್ಲಿ ಕಂಪನ(Vibration) ಹಾಗೂ ಅಲೆಗಳು (waves) ಉತ್ಪತ್ತಿಯಾಗಿ ಮೆದುಳನ್ನು ಚುರುಕುಗೊಳಿಸಿ ಮನಸ್ಸಿಗೆ ಮುದ ಹಾಗೂ ನಿರಾಳವನ್ನು ಒದಗಿಸಿ ಕೊಡುತ್ತದೆ.ಇಂದಿನ ವೈಜ್ಞಾನಿಕ ವೈದ್ಯಕೀಯ ಯುಗದಲ್ಲಿ ಈ ಅಧ್ಯಯನಕ್ಕೆ ಒಂದು ವಿಭಾಗವಿದೆ. ಇದಕ್ಕೆ “ಕಂಪನ” ಅಥವಾ “ಅನುರಣನ” ಅಧ್ಯಯನ (cymatic) ಎನ್ನುತ್ತಾರೆ. ಅತಿಯಾದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಈ “ಸೈಮಾಥೆರಪಿ”(Cymatherapy) ಚಿಕಿತ್ಸೆಯನ್ನು ನೀಡುತ್ತಾರೆ.
ಹಿಂದೆ ಈ ರಂಗೋಲಿಯನ್ನು ಅಕ್ಕಿಯ ಹಿಟ್ಟಿನಿಂದ ಚಿನ್ಮುದ್ರೆ(ಹೆಬ್ಬೆರಳು ಹಾಗೂ ತೋರ್ಬೆರಳು)ಯಿಂದ ಹಾಕಬೇಕು ಎನ್ನುವ ಪ್ರತೀತಿಯಿತ್ತು. ಯಾಕೆಂದರೆ ಬೆರಳುಗಳಲ್ಲಿ ಒತ್ತಡ ಇರುವುದರಿಂದ ಅದು ಮೆದುಳನ್ನು ಚುರುಕುಗೊಳಿಸಿ ಏಕ್ರಾಗತೆಯನ್ನು ಹೆಚ್ಚಿಸುತ್ತದೆ, ಹಾಗೆಯೇ ಮನೆಗೆ ಅತಿಥಿಗಳು ಬಂದರೆ ಮನಸ್ಸಿಗೆ ಹಿತವನ್ನುಂಟು ಮಾಡಲಿ ಎನ್ನುವುದಾಗಿತ್ತು. ಅಕ್ಕಿಯ ಹಿಟ್ಟಿನಲ್ಲಿ ಹಾಕುವುದರಿಂದ ಅಂಗಳದಲ್ಲಿ ಬರುವ ಪಕ್ಷಿಗಳಿಗೆ ಆಹಾರವಾಗಲಿ ಎಂಬುವುದು ಹಿರೀಕರ ಉದ್ದೇಶವಾಗಿತ್ತು.ಈ ಒಂದು ಚಿಕ್ಕ ರಂಗೋಲಿಯಲ್ಲಿ ಎಷ್ಟೊಂದು ವಿಷಯ ಅಡಕವಾಗಿದೆಯಲ್ಲವೇ??.
ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ರಾಸಾಯನಿಕ ಫುಡಿಗಳು ಬಣ್ಣವಾಗಿ ಮಾರ್ಪಾಡುಗಳನ್ನು ಹೊಂದಿದೆ.ಹಾಗೆಯೇ ಯಾವುದೇ ಶ್ರಮ ಇಲ್ಲದೇ ಹಾಕಲು ಅಚ್ಚುಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದೆ.ಏನೇ ಆಗಲಿ ಮನಸ್ಸನ್ನು ಮುದಗೊಳಿಸುವುದರಲ್ಲಿ ರಂಗೋಲಿ ಇನ್ನೂ ಸೋತಿಲ್ಲ ಎನ್ನುವುದೇ ಸಂತಸದ ವಿಚಾರವಲ್ಲವೇ??..

ಜಪ
ಕುಂದಾಪುರ

LEAVE A REPLY

Please enter your comment!
Please enter your name here