ಬೆಂಗಳೂರು ಜ.17: ತನ್ನ ಮಾನವೀಯ ಸಾಧನೆಯಿಂದಾಗಿ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿಯ ಕಟ್ಟಡ ಕಾರ್ಮಿಕ ರವಿ ಕಟಪಾಡಿ, ಸ್ಪರ್ಧೆಯಲ್ಲಿ 12.50 ಲಕ್ಷ ರು. ಗೆದ್ದಿದ್ದಾರೆ. ಈ ಹಣವನ್ನೂ ತಾನು ಇಟ್ಟುಕೊಳ್ಳದೆ ಬಡವರ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡುತ್ತೇನೆ ಎಂದು ಹೇಳುವ ಮೂಲಕ ರವಿ ಮತ್ತೊಮ್ಮೆ ತನ್ನ ಮಾನವೀಯ ಗುಣವನ್ನು ಮೆರೆದಿದ್ದಾರೆ.
ಕಳೆದ 10 ವರ್ಷಗಳಿಂದ ಉಡುಪಿಯ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ವೈವಿಧ್ಯಮಯ ಹಾಲಿವುಡ್ ಸಿನಿಮಾಗಳ ವೇಷಗಳನ್ನು ಧರಿಸಿ, ₹54.50 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿ ಬಡಕುಟುಂಬದ 28ಕ್ಕೂ ಅಧಿಕ ಮಕ್ಕಳ ಆರೋಗ್ಯ ಚಿಕಿತ್ಸೆಗೆ ದಾನ ಮಾಡಿರುವ ರವಿ ಅವರ ಮಾನವೀಯ ಮುಖವನ್ನು ಗುರುತಿಸಿ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಕರೆಸಲಾಗಿತ್ತು.
ಇದನ್ನೂ ಓದಿ: ₹2.5 ಕೋಟಿ ಗೆ ಹರಾಜು ಮಹಾತ್ಮಾ ಗಾಂಧೀಜಿಯವರ ಕನ್ನಡಕ!
ರಾಜಸ್ಥಾನದ ಬಾಬಿ ಬೆಹನ್ ಹಾಗೂ ಬಾಲಿವುಡ್ನ ಪೋಷಕ ನಟ ಅನುಪಮ್ ಖೇರ್ ಜೊತೆ ಭಾಗವಹಿಸಿದ ರವಿ
ರವಿ ಅವರೊಂದಿಗೆ ಬಟ್ಟೆಯ ಕಸೂತಿ ಚೀಲಗಳನ್ನು ಹೊಲಿದು ಮಾರಾಟ ಮಾಡುವ, ದೇಶವಿದೇಶಗಳಲ್ಲಿ ಬೇಡಿಕೆ ಇರುವ, ತನ್ನಂತಹ ನೂರಾರು ಮಂದಿಗೆ ಉದ್ಯೋಗ ನೀಡಿರುವ ರಾಜಸ್ಥಾನದ ಬಾಬಿ ಬೆಹನ್ ಕೂಡ ಭಾಗವಹಿಸಿದ್ದರು. ಅವರಿಬ್ಬರಿಗೆ ಅನುಪಮ್ ಖೇರ್ ಸಹಾಯಕರಾಗಿದ್ದರು. ಇಬ್ಬರು ಸಾಧಕರು ಸೇರಿ ಒಟ್ಟು ₹25 ಲಕ್ಷವನ್ನು ಗೆದ್ದಿದ್ದು, ಇಬ್ಬರಿಗೂ ತಲಾ 12.50 ಲಕ್ಷ ರು.ಗಳನ್ನು ಹಂಚಿ ನೀಡಲಾಗಿದೆ. ಈಗಾಗಲೇ ಹತ್ತಾರು ಅನಾರೋಗ್ಯ ಪೀಡಿತ ಮಕ್ಕಳು ಸಹಾಯ ಮಾಡುವಂತೆ ಕೇಳಿದ್ದಾರೆ. ಅವರಲ್ಲಿ ನಿಜವಾದ ಬಡವರ ಮನೆಯ ಮಕ್ಕಳನ್ನು ಗುರುತಿಸಿ ಈ 12.50 ಲಕ್ಷ ರು.ಗಳನ್ನು ವಿತರಿಸುತ್ತೇನೆ ಎಂದು ರವಿ ಹೇಳಿದ್ದಾರೆ.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಅಮಿತಾಬ್ ಬಚ್ಚನ್ ಬಾಯಿಯಿಂದ ತುಳು ಪದಗಳನ್ನು ಹೇಳಿಸಿದ ರವಿ!
ತುಳುನಾಡಿನ ಯುವಕ ರವಿ ಕಟಪಾಡಿ ಕಾರ್ಯಕ್ರಮದ ನಡುವೆ ಅಮಿತಾಬ್ ಬಚ್ಚನ್ ಅವರಿಗೆ ತುಳು ಭಾಷೆಯ ಕೆಲವು ಮಾತುಗಳನ್ನು ಕಲಿಸಿದರು. ಅಮಿತಾಬ್ ಅವರು ‘ಉಡುಪಿ ಬೊಕ್ಕ ಕುಡ್ಲದ ಮಾತ ಜನಕ್ಲೆಗ್ ಮೋಕದ ನಮಸ್ಕಾರಲು’ (ಉಡುಪಿ ಮತ್ತು ಮಂಗಳೂರಿನ ಎಲ್ಲ ಜನರಿಗೆ ಪ್ರೀತಿಯ ನಮಸ್ಕಾರ) ಎಂದು ಹೇಳಿದರು. ಅದನ್ನು ರವಿ ಕಟಪಾಡಿ ಅವರು ಅವರಿಗೆ ಹೇಳಿಕೊಟ್ಟರು. ಇದನ್ನು ಕೇಳಿ ಪಕ್ಕದಲ್ಲಿ ಕುಳಿತಿದ್ದ ಖ್ಯಾತ ನಟ ಅನುಪಮ್ ಖೇರ್ ಸಂತಸಪಟ್ಟರು.