ರಾಜ್ಯದಲ್ಲಿ ದಾಖಲೆಯ 1,502 ಸೋಂಕಿತರು ಪತ್ತೆ!

0
64

ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು, ಇಂದು ಒಂದೇ ದಿನ 1,502 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 18,016ಗೆ ಏರಿದೆ. ಇವುಗಳ ಪೈಕಿ, 9406 ಸಕ್ರಿಯ ಪ್ರಕರಣಗಳಿವೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದು 889 ಸೋಂಕಿತರ ವರದಿಯಾಗಿದ್ದು, ಇದರಿಂದಾಗಿ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,505 ಗೆ ಏರಿದೆ. ಬಳ್ಳಾರಿ (484), ದಕ್ಷಿಣ ಕನ್ನಡ (461) ಮತ್ತು ಕಲಬುರ್ಗಿ (343) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ. ರಾಜ್ಯದ ಇತರ ಯಾವುದೇ ಜಿಲ್ಲೆಗಳಲ್ಲೂ ಈಗ 300ಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇಲ್ಲ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 90 ಸೋಂಕಿತರು ಮತ್ತು ಮೈಸೂರು ಜಿಲ್ಲೆಯಲ್ಲಿ 68 ಸೋಂಕಿತರ ಪತ್ತೆಯಾಗಿ ನಂತರದ ಸ್ಥಾನದಲ್ಲಿದೆ.

ಅದಲ್ಲದೆ, ಇಂದು ರಾಜ್ಯದಲ್ಲಿ ಒಟ್ಟು 271 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 8,334 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನೂ ಮುಂದುವರೆಸಿದ್ದು, ಇಂದು 19 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಬಳ್ಳಾರಿಯಲ್ಲಿ 4, ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 3, ಗದಗ, ಹಾಸನ, ಮೈಸೂರು, ಉಡುಪಿ, ಕೊಪ್ಪಳ, ತುಮಕೂರು, ಕಲಬುರ್ಗಿ, ಬೆಳಗಾವಿ ಮತ್ತು ಉತ್ತರ ಕನ್ನಡದಲ್ಲಿ ತಲಾ 1 ಸೋಂಕಿತರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here