ರಾಜ್ಯದಲ್ಲಿ ಸತತ ಎರಡನೇ ದಿನ 1,000ಕ್ಕೂ ಅಧಿಕ ಸೋಂಕಿತರ ದಾಖಲು!

0
82

ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು, ಇಂದು ಒಂದೇ ದಿನ 1,105 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸತತ ಎರಡನೇ ದಿನ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಇದರಿಂದಾಗಿ ಒಟ್ಟು ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 6,382 ಏರಿದಂತಾಗಿದೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ, ಇದೀಗ ಒಟ್ಟು 3,427 ಸಕ್ರಿಯ ಪ್ರಕರಣಗಳಿದ್ದು, ಬಳ್ಳಾರಿ (437) ಮತ್ತು ಕಲಬುರ್ಗಿ (355) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ. ರಾಜ್ಯದ ಇತರ ಯಾವುದೇ ಜಿಲ್ಲೆಗಳಲ್ಲೂ ಈಗ 300ಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇಲ್ಲ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ಬಳ್ಳಾರಿಯಲ್ಲಿ 76 ಸೋಂಕಿತರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 32 ಸೋಂಕಿತರ ಪತ್ತೆಯಾಗಿ ನಂತರದ ಸ್ಥಾನದಲ್ಲಿದೆ. ಈ ಮೂರು ಜಿಲ್ಲೆಗಳ ಹೊರತು, ಇತರ ಯಾವುದೇ ಜಿಲ್ಲೆಯಲ್ಲೂ, 30ಕ್ಕೂ ಅಧಿಕ ಸೋಂಕಿತರು ಪತ್ತೆ ಆಗಲಿಲ್ಲ. ಬೀದರ್(28) ಮತ್ತು ಉತ್ತರ ಕನ್ನಡ (24) ನಂತರದ ಸ್ಥಾನದಲ್ಲಿದೆ.

ಅದಲ್ಲದೆ, ಇಂದು ರಾಜ್ಯದಲ್ಲಿ ಒಟ್ಟು 176 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 7,683 ಸೋಂಕಿತರು ಗುಣಮುಖರಾಗಿದ್ದಾರೆ. ಉಡುಪಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿರುತ್ತಾರೆ.

ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನೂ ಮುಂದುವರೆಸಿದ್ದು, ಸತತ ಮೂರನೇ ದಿನ 10ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇಂದು ಒಂದೇ ದಿನ 19 ಸೋಂಕಿತರು ಇಂದು ಕೊರೋನಾಗೆ ಬಲಿಯಾಗಿದ್ದಾರೆ. ಇದು ರಾಜ್ಯದ ಮಟ್ಟಿಗೆ ದಾಖಲೆಯಾಗಿದ್ದು, ಇದುವರೆಗೆ ಒಂದು ದಿನದಲ್ಲಿ 16 ಮಂದಿ ಸಾವನ್ನಪ್ಪಿದ್ದು ದಾಖಲೆಯಾಗಿತ್ತು. ಬಳ್ಳಾರಿ ಜಿಲ್ಲೆಯೊಂದರಲ್ಲೇ 12 ಮಂದಿ ಬಲಿಯಾಗಿದ್ದು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೆಂಗಳೂರು ನಗರದಲ್ಲಿ 3, ಬಾಗಲಕೋಟೆ, ದಕ್ಷಿಣ ಕನ್ನಡ, ಹಾಸನ ಮತ್ತು ರಾಮನಗರದಲ್ಲಿ ತಲಾ 1 ಸೋಂಕಿತರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here