ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಸೋಂಕಿತರು ಗುಣಮುಖ

0
59

ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು, ಬೆಂಗಳೂರಿನ 1,447 ಸೇರಿದಂತೆ, ರಾಜ್ಯದಲ್ಲಿ ಸತತ ಮೂರನೇ ದಿನ 2 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಇಂದಿನ 2,313 ಸೇರಿದಂತೆ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,418 ಗೆ ಏರಿಕೆಯಾಗಿದ್ದು, 19,035 ಸಕ್ರಿಯ ಪ್ರಕರಣಗಳಿವೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗುತ್ತಿದೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,687 ಗೆ ಏರಿದೆ. ದಕ್ಷಿಣ ಕನ್ನಡ (1075) ಮತ್ತು ಬಳ್ಳಾರಿ (775) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.

ಅದಲ್ಲದೆ ರಾಜ್ಯ ರಾಜಧಾನಿದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 15,000 ದಾಟಿದ್ದು, ಹಲವರ ಸೋಂಕಿನ ಮೂಲವೇ ಸಿಗದಿರುವುದು ಸರ್ಕಾರಕ್ಕೆ ತಲೆ ನೋವುಂಟುಮಾಡಿದೆ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ದಕ್ಷಿಣ ಕನ್ನಡದಲ್ಲಿ 139, ವಿಜಯಪುರ 89 ಮತ್ತು ಬಳ್ಳಾರಿಯಲ್ಲಿ 66 ಸೋಂಕಿತರ ಪತ್ತೆಯಾಗಿ ನಂತರದ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು ದಾಖಲೆಯ 1003 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಬೆಂಗಳೂರು ನಗರದ 601 ಸೋಂಕಿತರು ಸೇರಿದಂತೆ, ರಾಜ್ಯದಲ್ಲಿ ಇದುವರೆಗೆ, ಒಟ್ಟು 13,836 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನೂ ಮುಂದುವರೆಸಿದ್ದು, ಇಂದು ದಾಖಲೆಯ 57 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ರಾಜ್ಯದಲ್ಲಿ ಇದುವರೆಗೆ 543 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ಬೆಂಗಳೂರು ನಗರದಲ್ಲಿ 29, ದಕ್ಷಿಣ ಕನ್ನಡ 8, ಮೈಸೂರು 4, ಬೀದರ್ 3 ಚಿಕ್ಕಬಳ್ಳಾಪುರ, ಗದಗ, ಕಲಬುರ್ಗಿ , ಧಾರವಾಡ ತಲಾ 2, ಚಿಕ್ಕಮಗಳೂರು, ಹಾವೇರಿ, ಉತ್ತರ ಕನ್ನಡ , ರಾಯಚೂರು ತಲಾ 1 ಸೋಂಕಿತರು ಸೋಂಕಿನಿಂದ ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here