“ಕಳೆದ 3-4 ತಿಂಗಳುಗಳಿಂದ ಸರ್ಕಾರವು ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನು ಸ್ಥಿರವಾಗಿ ಹೆಚ್ಚಿಸುತ್ತಿದೆ ಮತ್ತು ಇಂದು ನಾವು ರಾಜ್ಯದಾದ್ಯಂತ 79 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳನ್ನು ಹೊಂದಿದ್ದೇವೆ, ಇದರಲ್ಲಿ 44 ಸರ್ಕಾರಿ ಮತ್ತು 35 ಖಾಸಗಿ ಪ್ರಯೋಗಾಲಯಗಳು ಸೇರಿವೆ.” ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ|ಸುಧಾಕರ್ ಹೇಳಿದರು.
ಇಂದು ಗದಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ (ಗಿಮ್ಸ್) ಸ್ಥಾಪಿಸಲಾದ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರು ಉದ್ಘಾಟಿಸಿದರು.
“ಕಾಲೇಜು ಸ್ಥಾಪನೆಯಾದ ಕೇವಲ 5 ವರ್ಷದೊಳಗೆ ಪಿಜಿ ಕೋರ್ಸ್ಗಳನ್ನು ಪ್ರಾರಂಭಿಸಲು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆ ಪಡೆದ ಮೊದಲ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಗಿಮ್ಸ್ ಪಾತ್ರವಾಗಿದೆ. ಇದು ಇಡೀ ರಾಜ್ಯವನ್ನು ಹೆಮ್ಮೆಪಡಿಸಿದೆ” ಎಂದು ಅವರು ಹೇಳಿದರು.
ಅದಲ್ಲದೆ, ಇಂದು ರಾಜ್ಯದ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
“ಕೊರೋನಾ ರೋಗಿಗಳಿಗೆ ಹಾಸಿಗೆಗಳನ್ನು ಹಂಚುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಮತ್ತು ನಾಳೆಯೊಳಗೆ ಹೊಸ ಮಾರ್ಗಸೂಚಿಗಳು ಬಿಡುಗಡೆಗೊಳಿಸುತ್ತೇವೆ” ಎಂದು ಹೇಳಿದರು
“ಖಾಸಗಿ ಆಸ್ಪತ್ರೆಗಳು ಸಹ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಕಾಯ್ದಿರಿಸಲು ಒಪ್ಪಿಕೊಂಡಿವೆ” ಎಂದು ಡಾ.ಸುಧಾಕರ್ ಹೇಳಿದರು.