ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಕ್ರಾಂತಿಕಾರಿ ರಾಮ್‌ಪ್ರಸಾದ್ ಬಿಸ್ಮಿಲ್

0
218
Tap to know MORE!

‘ಸರ್ ಫರೋಶಿಕಿ ತಮನ್ನಾ ಅಬ್ ಹಮಾರೇ ದಿಲ್ ಮೇ ಹೈ’ ಎಂಬ ಕವಿತೆಯನ್ನು ಕ್ರಾಂತಿಕಾರಿ ಸಂಘಗಳ ಉದ್ಘೋಷವನ್ನಾಗಿಸಿ, ಒಬ್ಬ ಕ್ರಾಂತಿಕಾರಿಯಾಗಿ ಅಲ್ಲದೆ ಉತ್ತಮ ಕವಿಯಾಗಿ ಕವಿತೆಗಳನ್ನು ಬರೆದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕಾಗಿ ಪ್ರಾಣತೆತ್ತ ಒಬ್ಬ ಅಸಾಧಾರಣ ಹೋರಾಟಗಾರ ರಾಮ್‌ಪ್ರಸಾದ್ ಬಿಸ್ಮಿಲ್.

ರಾಮ್ ಪ್ರಸಾದ್ ಬಿಸ್ಮಿಲ್ 12 ಜೂನ್ 1897 ರಂದು ಈಗಿನ ಉತ್ತರ ಪ್ರದೇಶದ ಶಾಹಜಾನ್ಪುರದಲ್ಲಿ ಜನಿಸಿದರು. ಹಿಂದಿ ಪಾರಂಗತರಾದ ತನ್ನ ತಂದೆಯಿಂದ ಹಿಂದಿಯನ್ನು ಮತ್ತು ಮೌಲ್ವಿಯೊಬ್ಬರಿಂದ ಉರ್ದುವನ್ನು ಅಭ್ಯಾಸಿಸಿ ಪ್ರಾವಿಣ್ಯತೆ ಪಡೆದ ಇವರಿಗೆ ದೇಶಭಕ್ತಿ ಗೀತೆಗಳನ್ನು ಬರೆಯುವ ಆಸಕ್ತಿಯೂ ಇತ್ತು. ಅವರ ಕವಿತೆಗಳಿಂದಲೇ ಆಕರ್ಷಿತನಾದ ಅವರ ಪ್ರಾಣಮಿತ್ರ ಅಶ್ಫಕ್ ಉಲ್ಲಾ ಖಾನ್ ಮುಂದೆ ತನ್ನ ಗೆಳೆಯನೊಂದಿಗೆ ದೇಶಕ್ಕಾಗಿ ಗಲ್ಲಿಗೇರಿದ ಮತ್ತೊಬ್ಬ ಕ್ರಾಂತಿಕಾರಿ.

ಇದನ್ನೂ ಓದಿ: ನಗು ನಗುತ ನೇಣಿಗೆ ಕೊರಳೊಡ್ಡಿದ ಸತ್ಕ್ರಾಂತಿ ಹರಿಕಾರ ಭಗತ್ ಸಿಂಗ್

ಆರ್ಯ ಸಮಾಜದ ತತ್ವಗಳಿಂದ ಆಕರ್ಷಿತನಾದ ರಾಮ್ ಪ್ರಸಾದ್ ಬಿಸ್ಮಿಲ್ ಆರ್ಯ ಸಮಾಜವನ್ನು ಸೇರಿದ. ಮೊದಲು ಕಾಂಗ್ರೆಸ್ಸನ್ನು ಸೇರಿ ಬ್ರಿಟಿಷರ ವಿರುದ್ಧ ಚಳವಳಿಯನ್ನು ಮಾಡುತ್ತಿದ್ದ ರಾಮ್ ಪ್ರಸಾದ್ ಬಿಸ್ಮಿಲ್‌ನಿಗೆ ಕಾಂಗ್ರೆಸ್‍ನ ಮೃದು ಧೋರಣೆಗಳು ಸರಿಬರಲಿಲ್ಲ. ಮಹಾತ್ಮ ಗಾಂಧಿಯವರು ಚೌರಿಚೌರ ಕಾಂಡದ ನಂತರ ಕಾಂಗ್ರೆಸ್‍ನ ಅಸಹಕಾರ ಚಳವಳಿಯನ್ನು ಹಠಾತ್ತಾಗಿ ಹಿಂತೆಗೆದುಕೊಂಡಾಗ ಬಹಳ ಅಸಮಾಧಾನಗೊಂಡ ರಾಮ್ ಪ್ರಸಾದ್ ಬಿಸ್ಮಿಲ್, ಕಾಂಗ್ರೆಸ್ಸನ್ನು ತ್ಯಜಿಸಿ ತನ್ನ ಇತರ ಕ್ರಾಂತಿಕಾರಿ ಮಿತ್ರರಾದ ಚಂದ್ರಶೇಖರ್ ಆಜಾದ್, ಭಗತ್‍ಸಿಂಗ್ ಮುಂತಾದವರೊಡನೆ ತಮ್ಮದೇ ಆದ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಕ್ರಾಂತಿಕಾರಿ ಪಕ್ಷವನ್ನು ಸ್ಥಾಪಿಸಿದನು. ಕ್ರಾಂತಿಕಾರಿ ಚಟುವಟಿಕೆಗಳಿಂದ ದೇಶದ ಸ್ವಾತಂತ್ರ್ಯ ಗಳಿಸುವುದು ಈ ಪಕ್ಷದ ಗುರಿಯಾಗಿತ್ತು.

ಬ್ರಿಟಿಷರ ಆಡಳಿತದಲ್ಲಿ ಮರಣದಂಡನೆಗೆ ಒಳಗಾದ ಒಬ್ಬ ಕೈದಿಯನ್ನು ಹಿಡಿದುಕೊಂಡು ಪೊಲೀಸನೊಬ್ಬ ನ್ಯಾಯಾಲಯದಿಂದ ಜೈಲಿಗೆ ಬರುತ್ತಿದ್ದ. ಆಗ ಹಾದಿಯಲ್ಲಿ ಕುಸ್ತಿ ಪಂದ್ಯವೊಂದು ನಡೆಯುತ್ತಿತ್ತು. ಆಗ ಕೈದಿಯನ್ನು ಅಲ್ಲಿಯೇ ಬಿಟ್ಟು ಪೋಲಿಸ್, ಕುಸ್ತಿ ಪಂದ್ಯವನ್ನು ನೋಡುವುದರಲ್ಲಿ ಮಗ್ನನಾದ. ಆಗ ಸುತ್ತ ಮುತ್ತಲಿನವರು ಪೊಲೀಸನಿಗೆ ಕೈದಿಯನ್ನು ಬೇಡಿಯಿಂದ ಬಂಧಿಸಿಡಲು ಸಲಹೆ ನೀಡಿದರು. ಆದರೆ ಪೊಲೀಸಿನವ “ಇಲ್ಲ ನನಗೆ ಈ ಕೈದಿಯ ಮೇಲೆ ಭರವಸೆಯಿದೆ, ಆತನೆಂದೂ ಮೋಸ ಮಾಡಿ ಓಡಿ ಹೋಗುವುದಿಲ್ಲ” ಎಂದು ಹೇಳಿ ಕುಸ್ತಿ ನೋಡುವತ್ತ ನಿರತನಾದ. ಆಗ ಆ ಕೈದಿಗೆ ನಿಜವಾಗಿಯೂ ಅಲ್ಲಿಂದ ತಪ್ಪಿಸಿಕೊಳ್ಳುವ ಅವಕಾಶವಿತ್ತು. ಆದರೆ ಕೈದಿಗೆ ಪೊಲೀಸಿನವನ ಭರವಸೆಯನ್ನು ಮುರಿಯುವ ಮನಸ್ಸಾಗಲಿಲ್ಲ. ಆದುದರಿಂದ ಯಾವುದೇ ಬೇಡಿ ಸಲಾಖೆಗಳಿರದೆಯೂ ಕೈದಿ ಕುಸ್ತಿ ಪಂದ್ಯ ಮುಗಿಯುವವರೆಗೆ ಅಲ್ಲಿಯೇ ನಿಂತ. ಕುಸ್ತಿ ಪಂದ್ಯ ಮುಗಿದ ಮೇಲೆ ಆ ಪೊಲೀಸು ಕೈದಿಯನ್ನು ಕರೆದುಕೊಂಡು ಜೈಲು ಸೇರಿ ಕೈದಿಯನ್ನು ಮರಣ ದಂಡನೆಗೆ ಒಳಗಾಗುವ ಕೈದಿಗಳನ್ನು ಬಂಧಿಸಿಡುವ ಕೋಣೆಯಲ್ಲಿ ಬಂಧಿಸಿಟ್ಟ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ತಂಡದ ಅನೇಕ ಕ್ರಾಂತಿಕಾರಿ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ರಾಮ್ ಪ್ರಸಾದ್ ಬಿಸ್ಮಿಲ್ ಮುಂದಾಳು. ಮುಖ್ಯವಾಗಿ ಕಾಕೋರಿ ಎಂಬಲ್ಲಿ ಸರಕಾರದ ಖಜಾನೆಯನ್ನು ಸಾಗಿಸುವ ರೈಲನ್ನು ಲೂಟಿ ಮಾಡಲು ಯೋಜನೆ ತಯಾರಿಸಿ ಕಾರ್ಯಗತಗೊಳಿಸಿದನು. ಅದರೆ ಈ ಘಟನೆಯ ನಂತರ ಅಂದಿನ ಬ್ರಿಟಿಷ್ ಸರಕಾರ ಶತಾಯ ಗತಾಯ ಪ್ರಯತ್ನ ಮಾಡಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಆಶ್ಫಾಕ್ ಉಲ್ಲಾ ಖಾನ್ ಒಳಗೊಂಡಂತೆ ಅವನ ತಂಡದ ಕೆಲವು ಪ್ರಮುಖರನ್ನು ಬಂಧಿಸಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಿತು.

ಕೇವಲ ಮೂವತ್ತಾರನೇ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ನಗುತ ನೇಣುಗಂಬವೇರಿದ ವೀರ ರಾಮ್ ಪ್ರಸಾದ್ ಬಿಸ್ಮಿಲ್.

ಸುರೇಶ್ ರಾಜ್ ಪಕ್ಷಿಕೆರೆ
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here