ಕೋರೊನಾ ವೈರಸ್ ಎಂಬ ಮಹಾಮಾರಿ ರೋಗ ಜನರಿಗೆ ಕಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹೊಸ ಸುಗ್ರಿವಾಜ್ಞೆ ರೈತ ಸಮುದಾಯವನ್ನು ಕೆಂಗೆಡಿಸಿದೆ. ಕರ್ನಾಟಕ ಭೂಸುಧಾರಣಾ ಕಾಯ್ದೆ ಸೆಕ್ಷನ್ 79ಎ,ಬಿ,ಸಿ ಮತ್ತು 80 ಹಾಗೂ 63ರ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಿದ್ದ ಈ ಕಾಯ್ದೆಯು ಭೂಸುಧಾರಣೆಗೆ ಅಗತ್ಯವಾಗಿತ್ತು. ಆದರೆ ಈಗ ಕರ್ನಾಟಕ ಭೂಸುಧಾರಣಾ ಕಾಯ್ದೆ, ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದಂತೆ ಕೃಷಿ ಭೂಮಿ ಹೋಂದಿಲ್ಲದವರು ಕೂಡ ಕೃಷಿ ಭೂಮಿ ಖರೀದಿಸಬಹುದೆಂಬ ತಿದ್ದುಪಡಿಯನ್ನು ರಾಜ್ಯಪಾಲರಾದ ವಜುಭಾಯಿವಾಲಾ ಅವರು ಅಂಗೀಕಾರಗೊಳಿಸಿದರು.
1961ರ ಭೂ ಸುಧಾರಣಾ ಕಾಯ್ದೆಯನ್ನು ರೂಪಿಸುವಾಗ ಕೃಷಿ ಭೂಮಿಯನ್ನು ವಾಣೀಜ್ಯಕರಣಗೊಳಿಸಬಾರದು, ಭೂಮಿ ಮಾರಾಟದ ವಸ್ತುವಾಗಬಾರದು, ಈ ಕಾಯ್ದೆ ದೇಶದ ಎಲ್ಲ ಜನರ “ಅನ್ನದ ಬಟ್ಟಲು”. ಹೊಸ ಕಾಯ್ದೆಯ ಮೂಲಕ ರೈತರ ಜಮೀನನ್ನು ಹಣವುಳ್ಳವರಿಗೆ, ಬಂಡವಾಳಶಾಹಿಗಳಿಗೆ, ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಮುಂದಾಗಿದ್ದಾರೆ. ಇದರಿಂದ ಶೇ.75 ರಷ್ಟು ಭಾಗ ಕೃಷಿ ಭೂಮಿ ಕಂಪನಿಗಳು, ಅಕ್ರಮ ಹಣದ ದೊಡ್ಡ-ದೊಡ್ಡ ಕುಳಗಳ ಪಾಲಾಗುತ್ತದೆ. ಹಳ್ಳಿಗಳಲ್ಲಿ ಕಾರ್ಪೊರೇಟ್ ಒಡೆತನದ ಕೃಷಿ ಭೂಮಿಗಳು ಇವರ ಮೋಜು ಮಸ್ತಿಗಳಿಗೆ ರೆಸಾರ್ಟಗಳು, ಫಾರ್ಮಹೌಸ್ ಗಳ ಸಂಸ್ಕೃತಿ ತಲೆ ಎತ್ತುತ್ತವೆ. ಯಾವುದೋ ಉದ್ದಿಮೆದಾರರು, ನೌಕರಶಾಹಿಗಳು, ವ್ಯಾಪಾರಿಗಳು, ರಿಯ¯ ಎಸ್ಟೇಟಿಗರು, ಕಂಪನಿಯ ಭೂಮಿಯನ್ನು ಖರೀದಿ ಮಾಡುವ ಅಧಿಕಾರವಿಲ್ಲವೆಂದು ಸ್ಪಷ್ಟವಾಗಿ ಹೇಳಿತ್ತು. ಅದರ ತದ್ದವಿರುದ್ಧವಾಗಿ ಭೂಸುಧಾರಣಾ ಕಾಯ್ದೆ ತಲೆ ಎತ್ತಿದೆ. ಈ ಮೂಲಕ ಕಂಪನಿಯವರು ಹಳ್ಳಿಗೆ ಬರುತ್ತಿದ್ದಾರೆ. ಇವರಿಗೆ ದಾರಿ ಮಾಡಿಕೊಡಿ, ನಿಮ್ಮ ಭೂಮಿಯನ್ನು ಇವರಿಗೆ ಕೊಟ್ಟುಬಿಡಿ ಎಂದಂತಾಗಿದೆ. ರೈತರ ಪಾಡು, ಜೊತೆಗೆ ಕೆಲವೇ ಜನ ಶ್ರೀಮಂತರಿಗಾಗಿ ಇಡೀ ದೇಶದ ಜನರು ಜೀತ ಮಾಡುವ ಪರಿಸ್ಥಿತಿ ವ್ಯವಸ್ಥಿತವಾಗಿ ಬರಲಿದೆ.
ಕೃಷಿ ಭೂಮಿ ಒಡೆತನದ ರೈತನದ್ದಾಗಿರಲಿ, ಈ ಒಡೆತನ ರೈತರ ನಡುವೆ ಮಾತ್ರ ವಿನಿಮಯಗೊಳ್ಳಲಿ, ಒಂದು ವೇಳೆ ಭೂಮಿಯನ್ನು ಮಾರುವುದಾದರೆ ಅದರ ಒಡೆತನ ಇನ್ನೊಬ್ಬ ರೈತನಿಗೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ರೂಪಿಸಲಾಗಿತ್ತು. ಆಳುವ ಸರ್ಕಾರಗಳಿಗೆ ಭೂಮಿಯ ಸಂಬಂಧವಾಗಲಿ, ಗ್ರಾಮೀಣ ಬದುಕಿಗೆ ಸಂಭಂದಿಸಿದ ವಿಷಯವಾಗಲಿ ಎಳ್ಳಷ್ಟೂ ಗೊತ್ತಿಲ್ಲ. ರೈತರಿಗೆ ಇದುವರೆಗೂ ಯಾವುದೇ ರೀತಿಯ ಬೆಂಬಲ ಬೆಲೆಯನ್ನಾಗಲೀ, ವೈಜ್ಞಾನಿಕ ಬೆಲೆಯನ್ನಾಗಲೀ, ಮಾರುಕಟ್ಟೆ ಭದ್ರತೆಯನ್ನಾಗಲೀ ಮಾಡದ ಸರಕಾರ ಕಾಯ್ದೆಯ ಮೂಲಕ ರೈತರ ಬದುಕನ್ನೇ ನಾಶಮಾಡಲು ಹೊರಟಿದೆ. ರೈತರಲ್ಲದವರು ಕೃಷಿ ಭೂಮಿ ಖರೀದಿಸುವ ಹಾಗಿಲ್ಲ ಹಾಗೂ ಉಳುವವನೇ ಭೂಮಿಯ ಒಡೆಯ ಎಂಬೆರೆಡು ಅಂಶಗಳು ಸಣ್ಣ ಹಾಗೂ ಸಾಮಾನ್ಯ ರೈತರಿಗೆ ಶ್ರೀರಕ್ಷೆಯಂತಿತ್ತು. ಆದರೆ ಸರಕಾರ ಭೂಮಿ ಮಾರಾಟ ಮಾಡುವಂತೆ ಒತ್ತಡ ತರುವ ಈ ತಿದ್ದುಪಡಿ ಸುಗ್ರೀವಾಜ್ಞೆಯ ಮೂಲಕ ! ಪ್ರಕೃತಿಯ ಉಚಿತ ಕೊಡುಗೆಯಾಗಿರುವ ಭೂಮಿ ಸಮಾನವಾಗಿ “ಹಂಚಿಕೆ” ಆಗಬೇಕು ಎನ್ನುವ ಸಮಾನತೆಯ ತತ್ವ ಇಲ್ಲಡಿಗಿದೆ. ಭೂಮಾಲಿಕ ಸ್ವತಃ ಬೇಸಾಯ ಮಾಡದೇ ಭೂಮಿಯನ್ನು ಇತರರಿಗೆ ನೀಡಿ ಅತೀಯಾದ ಗೇಣಿ ವಸೂಲಿ ಮಾಡುವ “ಉಳಿಗಮಾನ್ಯ ಪದ್ದತಿ”ಯ ಶೋಷಣೆಯಿಂದ ಕೃಷಿಯನ್ನು ಮುಕ್ತಿಗೊಳಿಸುವುದು ಭೂ ಸುದಾರಣೆಯ ಮೂಲ ಉದ್ದೇಶವಾಗಿತ್ತು. ಹಾಗಾಗಿಯೇ ಭೂ ಸುಧಾರಣೆಯನ್ನು “ಸುಧಾರಣೆಗಳ ಮಹಾತಾಯಿ” ಎಂದು ಕರೆಯಲಾಗಿತ್ತು. 70%ಕ್ಕೂ ಹೆಚ್ಚು ರೈತರು ಅವಲಂಬಿಸಿರುವುದು ಮಳೆಯಾಶ್ರಿತ ಜಮೀನು.ಸರ್ಕಾರ ರಾಜಕಾರಣಿಗಳು, ಸಂಶೋಧಕರು, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನೆ ಕಾಲೇಜು, ವಿಶ್ವವಿದ್ಯಾಲಯಗಳು ರೈತರಿಂದ ಸಂಪೂರ್ಣ ಬೇರ್ಪಟ್ಟು ಹಾಯಾಗಿವೆ.
ಉದ್ದಿಮೆದಾರರು, ಕಾರ್ಪೋರೇಟ್ ವಲಯಕ್ಕೆ ನಗರ ಪ್ರದೇಶದಲ್ಲಿ ದುಡಿಯಲು ಅಗ್ಗದ ಕಾರ್ಮಿಕರು ಬೇಕಾಗಿದೆ ಹಾಗಾಗಿ ಭೂಹೀನರಾಗಿ ರೈತರು ನಗರಕ್ಕೆ ವಲಸೆ ಬರುವವರು ಈ ರೀತಿ ಕೃಷಿ ವಲಯವನ್ನು ಮಾಡುವುದು ಖಾಸಗೀಕರಣದ ಹುನ್ನಾರ. ಸರ್ಕಾರ ಖಾಸಗಿ ವಲಯಕ್ಕೆ ರತ್ನಗಂಬಳಿ ಹಾಸುತ್ತದೆ. ಒಬ್ಬ ಕಾರ್ಪೋರೇಟ್ ಕೃಷಿಕ ತಲೆಯತ್ತಲು ನೂರಾರು ರೈತರು ಭೂಹೀನರಾಗಲಿರುವರು. ವಿಶ್ವಬ್ಯಾಂಕು, ನವಉದಾರೀಕರಣ ನೀತಿಯ ಪ್ರತಿಪಾದಕರ ಒತ್ತಡಕ್ಕೆ ಮಣಿದಿರುವುದರಿಂದ ಕೃಷಿಭೂಮಿ ಬೇರೆ ಯಾವುದೇ ವಸ್ತುಗಳ ಹಾಗೆ ಸರಾಗವಾಗಿ ಮಾರಿಕೊಳ್ಳುವ ಮಾರುಕಟ್ಟೆ ಸರಕಾಗುತ್ತಿದೆ. ಕೆಐಎಡಿಬಿ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನು ಬಳಸಬೇಕೆಂದರೆ ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್ನೆಲೆ ಕಾಯಿದೆ-2013ರ ಕಟ್ಟುನಿಟ್ಟಿನ ಕಟ್ಟಳೆಗಳ ಒಳಗಾಗಬೇಕು. ತನ್ನ ಅಮೂಲ್ಯವಾದ ಭೂ ಕಳೆದುಕೊಳ್ಳುವವರ ಪಾಡೇನು ಎಂಬುದು ಪ್ರಶ್ನೆಗೆ ಯಾರಲ್ಲು ಉತ್ತರವಿಲ್ಲ.
ಕರ್ನಾಟಕ ಕೃಷಿ ಬೆಲೆ ಆಯೋಗ ನಡೆಸಿರುವ ಅಧ್ಯಯನ ಪ್ರಕಾರ ರಾಜ್ಯಗಳಲ್ಲಿ ಈಗಾಗಲೇ 21 ಹೆಕ್ಟೇರ್ ಭೂಮಿ ಕೃಷಿಯನ್ನೇ ಮಾಡದೇ ಬೀಳುಬಿಟ್ಟಿರುತ್ತಾರೆ. ಅದರಲ್ಲಿ ಶೇ.61 ರಷ್ಟು ಅತೀ ಸಣ್ಣ ಹಾಗೂ ಸಣ್ಣ ಪ್ರಮಾಣದ ರೈತರಿದ್ದಾರೆ. ದೇವರಾಜ ಅರಸರು 1974ರಲ್ಲಿ “ಉಳುವವನಿಗೆ ಭೂಮಿ” ಎಂಬ ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತಂದರು. 1995ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ದೇವೆಗೌಡ ನೇತೃತ್ವದ ಜನತಾದಳ ಸರಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಕಲಂ 109ಕ್ಕೆ ತಿದ್ದುಪಡಿ ತಂದು ಪುಷ್ಪ ಕೃಷಿ ಮಾಡುವ ಯಾವುದೇ ವ್ಯಕ್ತಿ ಅಥವಾ ಕಂಪನಿಗೆ 20ಯುನಿಟ್ ಅಥವಾ 108 ಎಕರೆವರೆಗೆ ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟಿರುತ್ತಾರೆ. ಬೆಂಗಳೂರಿನ ಸುತ್ತಮುತ್ತ ರೈತರಿಂದ ನೂರಾರು ಎಕರೆ ಭೂಮಿಯನ್ನು ಖರೀದಿಸಿದ ಕಾರ್ಪೋರೇಟ ವಲಯ ಹೈಟೆಕ್ ಪುಷ್ಪಕೃಷಿಯಿಂದ ಮಾಡಿದ ರಫ್ತು, ಗಳಿಸಿದ ವಿದೇಶಿ ವಿನಿಮಯ ಅಷ್ಟಕಷ್ಟೆ, ಹೂ ಬೇಸಾಯದ ಹೆಸರಲ್ಲಿ ಲೇಔಟಗಳಾಗಿ ಹೆಮ್ಮರವಾಗಿವೆ ಕಟ್ಟಡಗಳು. 2014ರಲ್ಲಿ ಸಿದ್ಧರಾಮಯ್ಯ ಸರ್ಕಾರ, ಕೃಷಿ ಭೂಮಿಕೊಳ್ಳಲು ಇದ್ದ ಆದಾಯ ಮಿತಿಯನ್ನು ಎರಡು ಲಕ್ಷದಿಂದ ಇಪ್ಪತ್ತೈದು ಲಕ್ಷಕ್ಕೆ ಏರಿಸಲಾಯಿತು. ಅದರ ಫಲಶೃತಿಯಂತೆ, ಸೋಲಾರ್ ಫಲಕಗಳು ಹಾಕುವ ನೆಪದಲ್ಲಿ ರೈತರ ಜಮೀನನ್ನು ವ್ಯಾಪಕವಾಗಿ ಕಬಳಿಸುವ ಪ್ರಕ್ರಿಯೆ ಪ್ರಾರಂಭವಾದದ್ದು.
ವರ್ಷದಿಂದ ವರ್ಷಕ್ಕೆ ಕೃಷಿ ಕುಟುಂಬಗಳು ವಿಭಜನೆಯಾಗುತ್ತಾ ಕೃಷಿ ಭೂ ತುಂಡಾಗುತ್ತಿದೆ. ಈಗ ಪ್ರತಿಯೊಂದು ಕುಟುಂಬವು ತಮ್ಮ ಭೂಮಿಯ ಜೊತೆ ಇನ್ನೊಂದಿಷ್ಟು ಜಮೀನನ್ನು ಗುತ್ತಿಗೆ ಹಾಕಿಕೊಂಡು ಬೇಸಾಯ ಮಾಡಿ ಜೀವನ ಸಾಗಿಸುತ್ತಿರುವುದು. ಲಾಕಡೌನ್ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಕೊಡದೆ ಸುಗ್ರಿವಾಜ್ಞೆ ಮೂಲಕ ಈ ಎಲ್ಲ ಬದಲಾವಣೆ ಧಿಡೀರನೆ ತಂದಿರುವುದು ಸೂಕ್ತವಲ್ಲ. ಇವೆಲ್ಲವನ್ನು ಮರೆಮಾಚುವ ನಮ್ಮ ರೈತರು ಭೂಮಿ ಮಾರಾಟ ಮಾಡುವ ತುರ್ತಿನಲ್ಲಿದ್ದಾರೆ, ಎಂದು ಬಿಂಬಿಸುವ ಪ್ರಯತ್ನ ಆದರೆ ರೈತರು ಭೂಮಿ ಮಾರುವ ತುರ್ತಿನಲ್ಲಿಲ್ಲ, ಕೊಳ್ಳುವವರು ತುರ್ತಿನಲ್ಲಿದ್ದಾರೆ.
– ಸಿದ್ಧಾರ್ಥ್ ಸುಪಲಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ