ರೈತರ ಹಿತ ಕಾಪಾಡುವುದಾಗಿ ಭರವಸೆ ನೀಡಿದ ಕೇಂದ್ರ – ನಾಳೆ ಮುಂದಿನ ಮಾತುಕತೆ

0
42

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವ್ಯಾಪಕವಾಗಿ ವಿರೋಧಿಸುತ್ತಿರುವ ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರದ ಸಚಿವರು ಕೆಲವು ಸುತ್ತಿನ ಮಾತುಕತೆ ನಡೆಸಿದ್ದು, ಒಮ್ಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಡಿ. 5ರಂದು ಮಧ್ಯಾಹ್ನ 2.30ಕ್ಕೆ ಮುಂದಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.

ಸುಮಾರು 7 ಗಂಟೆ ನಡೆದ ಮಾತುಕತೆ ಬಿಕ್ಕಟ್ಟು ಶಮನಗೊಳಿಸುವ ಸುಳಿವನ್ನು ನೀಡಿದೆ ಎಂದು ಸರ್ಕಾರ ಮತ್ತು ರೈತ ಮುಖಂಡರು ಭಾವಿಸಿದ್ದಾರೆ. ರೈತರ ಹಿತ ಕಾಪಾಡುವುದಾಗಿ ಭರವಸೆ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕನಿಷ್ಠ ಬೆಂಬಲ ಬೆಲೆ ರದ್ದಾಗುವ ಪ್ರಶ್ನೆಯೇ ಇಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ರೈತರ ಹಿತಾಸಕ್ತಿಗೆ ಅಪಾಯಕಾರಿ ಎಂದು ವಾದಿಸಲಾಗುತ್ತಿರುವ ಅಂಶಗಳ ಬಗ್ಗೆ ಕೇಂದ್ರ ಪರಿಶೀಲನೆ ನಡೆಸಲಿದೆ ಎಂದಿದ್ದಾರೆ.

ಇದನ್ನೂ ಓದಿ: ರೈತರ ಪ್ರತಿಭಟನೆಗೆ ಬೆಂಬಲ – ಪದ್ಮವಿಭೂಷಣ ಪುರಸ್ಕಾರವನ್ನು ಹಿಂತಿರುಗಿಸಿದ ಮಾಜಿ ಮುಖ್ಯಮಂತ್ರಿ!

ಸಭೆ ಬಳಿಕ ಮಾಧ್ಯಮ ಜತೆ ಮಾತನಾಡಿದ ಸಚಿವ ತೋಮರ್, ನಾವು ಮುಕ್ತ ಮನಸ್ಸಿನಿಂದ ರೈತರೊಂದಿಗೆ ಸಂವಾದ ನಡೆಸಿದ್ದೇವೆ. ಸರ್ಕಾರಕ್ಕೆ ಯಾವುದೇ ಅಹಂ ಇಲ್ಲ. ಹೊಸ ಕಾನೂನು ಎಪಿಎಂಸಿಗಳನ್ನು ಕೊನೆಗೊಳಿಸುತ್ತವೆ ಎಂಬುದು ರೈತರ ಆತಂಕ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ಕೊಂಡೊಯ್ಯುವ ಅಧಿಕಾರವನ್ನು ರೈತರಿಗೆ ಈ ಕಾನೂನು ನೀಡಿದೆ. ಎಸ್​ಡಿಎಂಗಳು ಕೆಳ ನ್ಯಾಯಾಲಯಗಳಾಗಿರುವುದರಿಂದ ಮೇಲ್ಮಟ್ಟದ ನ್ಯಾಯಾಲಯ ಗಳಿಗೆ ಹೋಗುವ ಅವಕಾಶವೂ ಇರಬೇಕು ಎಂಬ ರೈತ ಸಂಘಗಳ ಬೇಡಿಕೆಯನ್ನು ಕೇಂದ್ರ ಪರಿಗಣಿಸಲಿದೆ ಎಂದು ತಿಳಿಸಿದ್ದಾರೆ.

ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹರಿಯಾಣ ರೈತರ ವಿರುದ್ಧ ದಾಖಲಾಗಿರುವ ಕೇಸುಗಳನ್ನು ವಾಪಸ್ ಪಡೆದುಕೊಳ್ಳಿ ಎಂದು ಮೈತ್ರಿಪಕ್ಷ ಜೆಜೆಪಿ ಒತ್ತಾಯಿಸಿದೆ. ರೈತರಲ್ಲಿ ಸರ್ಕಾರದ ಬಗ್ಗೆ ಅಪನಂಬಿಕೆ ಉಂಟಾಗಬಾರದು. ಹೀಗಾಗಿ ತಕ್ಷಣವೇ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಜೆಜೆಪಿ ನಾಯಕ ದಿಗ್ವಿಜಯ ಸಿಂಗ್ ಚೌಟಾಲಾ ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೃಷಿ ಮಂಡಿಯಿಂದ ಹೊರಗೆ ಖಾಸಗಿಯಾಗಿ ಕೃಷಿ ಉತ್ಪನ್ನಗಳ ವ್ಯಾಪಾರ ನಡೆಯುವುದಾದರೆ, ಅದು ಪ್ಯಾನ್​ಕಾರ್ಡ್​ನ್ನು ಆಧರಿಸಿ ನಡೆಯಲಿದೆ. ಈಗ ಯಾರೂ ಬೇಕಾದರೂ ಪ್ಯಾನ್​ಕಾರ್ಡ್ ಹೊಂದಬಹುದು. ಹೀಗಾಗಿ, ವ್ಯಾಪಾರಿಯನ್ನು ಅಧಿಕೃತವಾಗಿ ನೋಂದಾಯಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ. ಇದನ್ನೂ ನಾವು ಪರಿಗಣಿಸಲಿದ್ದೇವೆ ಎಂದು ತೋಮರ್ ಮಾಹಿತಿ ಹಂಚಿಕೊಂಡಿದ್ದಾರೆ. ಎಪಿಎಂಸಿಗಳ ಬಳಕೆ ಹಾಗೂ ಅವುಗಳ ಬಲ ಹಿಗ್ಗಿಸುವ ಬಗ್ಗೆ ಕೇಂದ್ರ ಚಿಂತನೆ ನಡೆಸಲಿದೆ. ಎಪಿಎಂಸಿ ಅಲ್ಲದೆ, ಖಾಸಗಿ ಮಂಡಿಗಳಲ್ಲಿ ಕೃಷಿ ಉತ್ಪನ್ನ ವ್ಯಾಪಾರ ವಹಿವಾಟಿಗೆ ಹೊಸ ಕಾನೂನು ಅವಕಾಶ ನೀಡಿದೆ. ಎಪಿಎಂಸಿ ಕಾಯ್ದೆ ಅಡಿಯಲ್ಲಿ ಖಾಸಗಿ ಮಂಡಿಗಳಿಗೂ ಸಮಾನ ತೆರಿಗೆ ವಿಧಿಸುವ ಬಗ್ಗೆಯೂ ನಾವು ಆಲೋಚಿಸಲಿದ್ದೇವೆ ಎಂದು ತೋಮರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here