ಕೃಷಿ ಕಾಯ್ದೆಗಳ ಕುರಿತು ಮಾಹಿತಿ ನೀಡಲು ಬಿಜೆಪಿಯಿಂದ ದೇಶವ್ಯಾಪಿ “ರೈತ ಜಾಗೃತಿ ಯಾತ್ರೆ”

0
182
Tap to know MORE!

ಬೆಂಗಳೂರು: ರೈತರನ್ನು ಸಂಘಟಿಸಿ, ಅವರ ಬದುಕಿಗೆ ಭದ್ರ ನೆಲೆಯೊದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಸುಧಾರಣೆ ಕಾಯ್ದೆಗಳ ಕುರಿತು ಮಾಹಿತಿ ನೀಡಲು ದೇಶವ್ಯಾಪಿ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸದುದ್ದೇಶದಿಂದ ಅನುಷ್ಠಾನಕ್ಕೆ ತಂದಿರುವ ಕಾಯ್ದೆಗಳಲ್ಲಿ ನಿರ್ದಿಷ್ಟ ಲೋಪಗಳನ್ನು ಎತ್ತಿ ತೋರಿಸಿದರೆ ಮಾರ್ಪಡಿಸಲು ಸರ್ಕಾರ ಸಿದ್ಧವಿದೆ. ಆದರೆ ಆರ್ಥಿಕ ಹಾಗೂ ತಾಂತ್ರಿಕ ಸುಧಾರಣೆಯ ಲಾಭಗಳನ್ನು ರೈತರಿಗೆ ತಲುಪಿಸಬೇಕೆಂಬ ಪ್ರಾಮಾಣಿಕ ಕಾಳಜಿಗೆ ಅಡ್ಡಗಾಲು ಹಾಕುವುದು ಸರಿಯಲ್ಲ. ವಾಸ್ತವಾಂಶ ತಿಳಿದುಕೊಂಡ ರೈತರು ಬಿಜೆಪಿಯೊಂದಿಗೆ ಇದ್ದಾರೆ ಎಂದರು.

ಕನಿಷ್ಠ ಬೆಂಬಲ ಬೆಲೆ ಯೋಜನೆ ಕೈಬಿಡುವುದಿಲ್ಲ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮೂಲಕ ರೈತರು ತಾವು ಬೆಳೆದ ಬೆಳೆಗಳನ್ನು ತಮಗೆ ಗಿಟ್ಟಿದ ದರಕ್ಕೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗುತ್ತಿಗೆ ಕೃಷಿ ಒಪ್ಪಂದದ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ರೈತರ ಆದಾಯ ದುಪ್ಪಟ್ಟುಗೊಳಿಸುವ ಗುರಿಯಿದೆ. ಈ ಒಪ್ಪಂದ ದಿಂದ ರೈತರು ಯಾವಾಗ ಬೇಕಾದ ದಂಡರಹಿತವಾಗಿ ಹೊರ ಬರುವ ಮುಕ್ತ ಅವಕಾಶವಿದೆ ಎಂಬ ಅಂಶಗಳನ್ನು ಸ್ಪಷ್ಟಪಡಿಸಿಯಾಗಿದೆ. ರೈತರೊಂದಿಗೆ ಮುಕ್ತ ಮಾತುಕತೆಗೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ. ವಾಸ್ತವಿಕ ಅಂಶಗಳನ್ನು ತಿಳಿದುಕೊಂಡರೆ ಸಂದೇಹ ಹಾಗೂ ಆಕ್ಷೇಪಗಳು ನಿವಾರಣೆಯಾಗುತ್ತವೆ. ಅಪಪ್ರಚಾರಗಳ ಮೂಲಕ ದಿಕ್ಕು ತಪ್ಪಿಸುವ ಷಡ್ಯಂತ್ರಗಳಿಗೆ ಬಲಿಬೀಳಬಾರದು ಎಂದು ರೈತರಿಗೆ ರವಿ ಮನವಿ ಮಾಡಿಕೊಂಡರು.

ಬಿಜೆಪಿಯನ್ನು ಹೇಗಾದರೂ ಮಣಿಸಬೇಕೆಂಬ ಕುತ್ಸಿತ ಮತಿಗಳು ಪದೇಪದೆ ಪ್ರಯತ್ನಿಸಿ ವಿಫಲವಾಗಿವೆ. ಇದೀಗ ರೈತರ ಹೆಸರಿನಲ್ಲಿ ರಾಜಕೀಯ ದುರುದ್ದೇಶದ ಚಳವಳಿ ನಡೆಯುತ್ತಿದ್ದು, ದಲ್ಲಾಳಿಗಳ ಷಡ್ಯಂತ್ರವಿದೆ. ವೈಚಾರಿಕ ವಿರೋಧಿಗಳು, ಪ್ರತ್ಯೇಕತಾವಾದಿ ಶಕ್ತಿಗಳು ಕೈಜೋಡಿಸಿವೆ ಎಂದು ರವಿ ಆರೋಪಿಸಿದರು. ಗುತ್ತಿಗೆ ಒಪ್ಪಂದದ ಕೃಷಿ 2003ರಿಂದಲೇ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಜಾರಿಯಲ್ಲಿವೆ. ಈ ಮಸೂದೆಗಳ ಪರವಾಗಿ ವಕಾಲತ್ತುವಹಿಸಿದ್ದ ಕಾಂಗ್ರೆಸ್, ಎನ್​ಸಿಪಿ, ಡಿಎಂಕೆ ಇದೀಗ ವಿರೋಧಿಸಿ ದ್ವಂದ್ವ ನಿಲುವು ಬಹಿರಂಗಪಡಿಸಿವೆ. ಕೇರಳದಲ್ಲಿ ಎಪಿಎಂಸಿ ಕಾಯ್ದೆ ಇಲ್ಲದಿದ್ದರೂ ಹೋರಾಟಕ್ಕೆ ಸಿಪಿಎಂ ಬೆಂಬಲಿಸಿರುವುದು ಹಾಸ್ಯಾಸ್ಪದವೆಂದು ಗೇಲಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಶಾಸಕ ಬಸವರಾಜ ದಡೆಸುಗೂರು, ಎಂಎಲ್ಸಿ ಎನ್.ರವಿಕುಮಾರ್ ಇದ್ದರು.

LEAVE A REPLY

Please enter your comment!
Please enter your name here