ದಣಿವರಿಯದ ಹೋರಾಟಗಾರನ ದುರಂತ ಅಂತ್ಯ

0
275
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಪಾಲಿನ ದ್ರೋಣಾಚಾರ್ಯರಂತಿದ್ದು, ಬ್ರಿಟಿಷರ ವಿರುದ್ಧ ಕಾನೂನಾತ್ಮಕ ಹೋರಾಟಗಳನ್ನು ನಡೆಸಿದ ಲಾಲಾ ಲಜಪತ್ ರಾಯ್ ಒಬ್ಬ ಧೀಮಂತ ನಾಯಕ.

ಲಾಲಾ ಲಜಪತ ರಾಯರು 1865 ಜನವರಿ 18 ರಂದು ರಾಧಾಕೃಷ್ಣನ್ ಮತ್ತು ಗುಲಾಬ್ ದೇವಿ ದಂಪತಿಯ ಹಿರಿಯ ಮಗನಾಗಿ ಪಂಜಾಬ್‌ನ ದೋಡಿಗ್ರಾಮ್ ನಲ್ಲಿ ಜನಿಸಿದರು. ರಾಯ್ ಚಿಕ್ಕ ಬಾಲಕನಾಗಿದ್ದಾಗಲೇ ಕುರಾನ್, ಶಾಹನಾಮಾ ಮತ್ತು ಹಿಂದೂ ಪೂರಣ ಕಾವ್ಯಗಳನ್ನು ಓದಿದ್ದರು. ಲಜಪತ್ ರಾಯ್ ಗೆ ಇನ್ನೂ ಐವರು ಒಡಹುಟ್ಟಿದವರಿದ್ದ ಕಾರಣ, ಅವರು ತಮ್ಮ ಉನ್ನತ ಶಿಕ್ಷಣದ ವೆಚ್ಚವನ್ನು ತಾವೇ ಭರಿಸಲು ಸಂಕಲ್ಪ ತೊಟ್ಟಿದ್ದರು. ಹಾಗಾಗಿ ಅವರು ವಕೀಲನಾಗಿ ಕೆಲಸ ಮಾಡುತ್ತಲೇ ಕಾನೂನು ಪದವಿ ಸಂಪಾದಿಸಿದರು.

ಇದನ್ನೂ ನೋಡಿ: ಸಾವಿಗೇ ಸವಾಲೆಸೆದ ವೀರ ಸಾವರ್ಕರ್

ಲಜಪತ್ ರಾಯ್ 1886 ರಲ್ಲಿ ಹಿಸಾರ್‌ನಲ್ಲಿ ಅಧಿಕೃತವಾಗಿ ವಕೀಲಿ ವೃತ್ತಿ ಪ್ರಾರಂಭಿಸಿದರು. ಯಶಸ್ವಿಯಾಗಿ ವಕೀಲಿ ವೃತ್ತಿ ನಡೆಸಿ ಕುಟುಂಬವನ್ನು ಬೆಂಬಲಿಸಲು ಸಾಕಷ್ಟು ಹಣ ಸಂಪಾದನೆ ಮಾಡಿದ ಬಳಿಕ ಅವರು ಹಂತಹಂತವಾಗಿ ಕಾನೂನು ಕೆಲಸದ ಜೊತೆಗೆ ಸಮಾಜ ಸುಧಾರಣೆ ಕಾರ್ಯದಲ್ಲಿ ತೊಡಗಿಸಿಕೊಂಡರು. ಬರಗಾಲದ ಸಂದರ್ಭದಲ್ಲಿ ಅವರು ಪರಿಹಾರ ಕಾರ್ಯಕ್ಕೆ ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಿದರು. ಓರ್ವ ಸುಧಾರಕರಾಗಿ ಅವರು ಪ್ರಭಾವಶಾಲಿ ಭಾಷಣ ಮಾಡುತ್ತಿದ್ದರು. ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಮತ್ತು ವಿದೇಶಿ ಆಡಳಿತಗಾರರನ್ನು ತೊಲಗಿಸಲು ಶಿಕ್ಷಣ ಬಹಳ ಮುಖ್ಯ ಎಂದು ಅರಿತಿದ್ದ ಅವರು ಆ ನಿಟ್ಟಿನಲ್ಲಿ ಗಮನ ಹರಿಸಿದ್ದರು.

1895-98 ರ ಅವಧಿಯಲ್ಲಿ ಅವರು ʼದಿ ಗ್ರೇಟ್ ಹೀರೋಸ್ ಆಫ್ ದಿ ವರ್ಲ್ಡ್ʼ ಶ್ರೇಣಿಯಲ್ಲಿ ವಿಶ್ವ ನಾಯಕರ ಪುಸ್ತಕಗಳ ಸರಣಿಯನ್ನೇ ಹೊರತಂದರು. ಈ ಮೂಲಕ ಅವರು ಯುವಪೀಳಿಗೆಯಲ್ಲಿ ದೇಶಭಕ್ತಿ ಜಾಗೃತಗೊಳಿಸಿದರು. ಹಿಂದೂ ನಿರಾಶ್ರಿತರ ಸಹಾಯವಾಣಿಯನ್ನು ಅವರು ಆರಂಭಿಸಿದರು ಮತ್ತು 1904 ರಲ್ಲಿ ಪಂಜಾಬಿ ದಿನಪತ್ರಿಕೆ- ‘ಪಂಜಾಬ್‌ ಕೇಸರಿʼ ಶುರು ಮಾಡಿದರು.

1905, ಜೂನ್‌ನಲ್ಲಿ ಅವರು ಭಾರತದಲ್ಲಿ ಸ್ವಯಮಾಡಳಿತಕ್ಕೆ ಒತ್ತಾಯಿಸಿ ಕಾಂಗ್ರೆಸ್ಸಿನ ಪ್ರತಿನಿಧಿಯಾಗಿ ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿ ಅವರು ಅನೇಕ ಸಭೆಗಳಲ್ಲಿ ಭಾಷಣ ಮಾಡಿದರು ಮತ್ತು ಬ್ರಿಟಿಷರು ಭಾರತವನ್ನು ಕೊಳ್ಳೆ ಹೊಡೆಯುತ್ತಿರುವುದರ ವಿರುದ್ಧ ಮಾತನಾಡಿದರು.1905 ಅಕ್ಟೋಬರ್‌ನಲ್ಲಿ ಅವರು ದೇಶಕ್ಕೆ ಮರಳಿದರು.

1907, ಮೇನಲ್ಲಿ ಬ್ರಿಟಿಷ್ ಸರ್ಕಾರ ರಾಜದ್ರೋಹದ ಆರೋಪದ ಮೇಲೆ ಅವರನ್ನು ಬಂಧಿಸಿತು. ವಿಚಾರಣೆಗೂ ಅವಕಾಶ ನೀಡದೆ ಮ್ಯಾಂಡ್ಲೆ ಜೈಲಿಗೆ ಗಡಿಪಾರು ಮಾಡಿತು. ಆದರೆ, ಗೋಖಲೆ, ಕೈರ್ ಹಾರ್ಡಿ (ಬ್ರಿಟಿಷ್ ಎಂಪಿ) ಮತ್ತು ಕೆಲವು ಮುಖಂಡರ ಒತ್ತಡಕ್ಕೆ ಮಣಿದು 1907 ನವೆಂಬರ್‌ನಲ್ಲಿ ಅವರನ್ನು ಬಿಡುಗಡೆ ಮಾಡಿತು. ಜೈಲಿನಲ್ಲಿರುವಾಗ ಲಜಪತ ರಾಯ್ ನನ್ನ ಗಡಿಪಾರಿನ ಕಥೆ ಕೃತಿ ಬರೆಯಲು ಶುರು ಮಾಡಿದ್ದರು.

1908 ರಲ್ಲಿ ಅವರು ಮತ್ತೆ ಇಂಗ್ಲೆಂಡ್‌ಗೆ ಭೇಟಿ ನೀಡಿದರು. ಸುಮಾರು ಆರು ತಿಂಗಳ ಕಾಲ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲ ಸಂಗ್ರಹಿಸಿದ ಅವರು 1909 ರಲ್ಲಿ ಮರಳಿದರು. ಬ್ರಿಟಿಷ್ ಪರ ಮಾಧ್ಯಮಗಳು ಅವರ ವಿರುದ್ಧ ಮಾನಹಾನಿಕರ ಲೇಖನ ಪ್ರಕಟಿಸಿದವು‌. ಅದಕ್ಕೆ ಪ್ರತಿಯಾಗಿ ಲಜಪತ್ ರಾಯ್ ಅವುಗಳ ವಿರುದ್ಧ ಮೊಕದ್ದಮೆ ಹೂಡಿ ಅವುಗಳ ಕ್ಷಮೆಯಾಚನೆ ಮತ್ತು ಪರಿಹಾರ ಗೆದ್ದರು.

1920 ರಲ್ಲಿ ಕೋಲ್ಕತ್ತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಬಳಿಕ ಲಜಪತ್ ರಾಯ್ ಅಸಹಕಾರ ಚಳವಳಿ, ಪ್ರವಾಸ, ಭಾಷಣಗಳು ಹಾಗೂ ದೇಣಿಗೆ ಸಂಗ್ರಹ ಕಾರ್ಯದಲ್ಲಿ ಮುಳುಗಿದರು. ಅವರನ್ನು ಬಂಧಿಸಿ 1921 ರಿಂದ 1923 ರವರೆಗೆ ಜೈಲಿನಲ್ಲಿಡಲಾಯಿತು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಸದನದಲ್ಲಿ ಅನುಮೋದನೆಗೊಳ್ಳುವಲ್ಲಿ ಅವರ ಹೋರಾಟ ಮಹತ್ವದ್ದಾಗಿತ್ತು.

1928 ಅಕ್ಟೋಬರ್‌ನಲ್ಲಿ ಜಾನ್ ಸೈಮನ್ ಲಾಹೋರ್‌ಗೆ ಆಗಮಿಸಿದ. ಆತ ಸೈಮನ್ ಕಮಿಷನ್ ಅಧ್ಯಕ್ಷನಾಗಿದ್ದ. ಅದು 1919 ರ ಸುಧಾರಣೆಗಳ ಬಗ್ಗೆ ವರದಿ ಮಾಡಲು ರಚನೆಗೊಂಡ ಸಮಿತಿಯಾಗಿತ್ತು. ಆದರೆ ಅದರಲ್ಲಿ ಒಬ್ಬನೇ ಒಬ್ಬ ಭಾರತೀಯ ಸದಸ್ಯನೂ ಇಲ್ಲದ ಕಾರಣ ಕಾಂಗ್ರೆಸ್ ಅದನ್ನು ಬಾಯ್ಕಾಟ್ ಮಾಡಲು ನಿರ್ಧರಿಸಿತ್ತು. ಲಾಲಾಜಿ ಇಂಥ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಆದರೆ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠೀ ಪ್ರಹಾರ ಮಾಡಲು ಬ್ರಿಟಿಷ್ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ ಸ್ಯಾಂಡರ್ಸ್ ಆದೇಶಿಸಿದ. ಪೋಲೀಸರು ಲಾಲಾಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಬೆತ್ತದ ದಾಳಿಗೆ ಸಿಲುಕಿದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ 1928 ನವೆಂಬರ್ 17 ರಂದು ನಿಧನರಾದರು .

“ಸ್ಯಾಂಡರ್ಸ್‌ನಂತಹ ಕ್ಷುಲ್ಲಕ ಅಧಿಕಾರಿಯ ಕೊಳಕು ಕೈಗಳು ಕೋಟ್ಯಂತರ ಜನರ ಗೌರವ ಸಂಪಾದಿಸಿದ್ದ ಜನನಾಯಕರೊಬ್ಬರ ಜೀವವನ್ನು ಯಾವ ರೀತಿ ತೆಗೆಯಿತೆಂಬುದನ್ನು ಯೋಚಿಸಿದರೇ ನನಗೆ ನೋವಾಗುತ್ತದೆ”, ಎಂದು ಭಗತ್ ಸಿಂಗ್ ಕಂಬನಿ ಮಿಡಿದರು.

ಇದರೊಂದಿಗೆ ವಾಗ್ಮಿ, ದಿಟ್ಟ, ದಣಿವರಿಯದ, ನಿಸ್ವಾರ್ಥಿ, ಗೌರವಾನ್ವಿತ ಮುಖಂಡರೊಬ್ಬರ ಅಂತ್ಯವಾಯಿತು. ಲಾಲಾ ಲಜಪತ್ ರಾಯ್ ಅವರ ಅಂತಿಮ ಯಾತ್ರೆಯಲ್ಲಿ ಒಂದೂವರೆ ಲಕ್ಷ ಜನ ಭಾಗವಹಿಸಿದ್ದರು. ಅವರು ತಮ್ಮ ಸುಧಾರಣೆಗಳು ಮತ್ತು ರಾಜಕೀಯ ಚಟುವಟಿಕೆಗಳಿಗೆ ಅಗತ್ಯ ನಿಧಿಯನ್ನು ಸ್ವತಃ ಸಂಗ್ರಹಿಸುತ್ತಿದ್ದ ರೀತಿ ಎಂದಿಗೂ ಸ್ತುತ್ಯರ್ಹ.

ಸುರೇಶ್ ರಾಜ್, ಪಕ್ಷಿಕೆರೆ
ವಿವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here