ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನಡೆಯಲಿರುವ ಐಪಿಎಲ್ 2020 ರ ಋತುವಿನಿಂದ ಲಸಿತ್ ಮಾಲಿಂಗ ಹೊರಹೋಗಿದ್ದು, ಅವರ ಬದಲಿಯಾಗಿ ಆಸ್ಟ್ರೇಲಿಯಾದ ವೇಗಿ ಜೇಮ್ಸ್ ಪ್ಯಾಟಿನ್ಸನ್ನೊಂದಿಗೆ ಮುಂಬೈ ಇಂಡಿಯನ್ಸ್ ಸಹಿ ಹಾಕಿದೆ.
ಮಾಲಿಂಗ ಅವರು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಈ ಋತುವಿನಲ್ಲಿ ಪಾಲ್ಗೊಳ್ಳುತ್ತಿಲ್ಲ ಮತ್ತು ಶ್ರೀಲಂಕಾಗೆ ಮರಳಲಿದ್ದಾರೆ” ಎಂದು ಮುಂಬೈ ಇಂಡಿಯನ್ಸ್ ಬುಧವಾರ (ಸೆಪ್ಟೆಂಬರ್ 2) ಪ್ರಕಟಿಸಿದೆ.
“ಜೇಮ್ಸ್ ಪ್ಯಾಟಿನ್ಸನ್ ನಮ್ಮ ತಂಡಕ್ಕೆ ಸೂಕ್ತವಾಗಿದ್ದಾರೆ ಮತ್ತು ಈ ಋತುವಿನಲ್ಲಿ ನಮ್ಮೊಂದಿಗಿರುತ್ತಾರೆ. ನಮ್ಮ ತಂಡದ ವೇಗದ ಬೌಲರ್ಗಳ ಆಯ್ಕೆಗಳಲ್ಲಿ ಅವರೂ ಒಬ್ಬರಾಗಿರುತ್ತಾರೆ” ಎಂದು ತಂಡದ ಮಾಲೀಕ ಆಕಾಶ್ ಅಂಬಾನಿ ಹೇಳಿದರು. “ಮಾಲಿಂಗ ಒಬ್ಬ ದಂತಕಥೆ ಮತ್ತು ಮುಂಬೈ ಇಂಡಿಯನ್ಸ್ ತಂಡದ ಆಧಾರಸ್ತಂಭವಾಗಿದ್ದಾರೆ. ಈ ಋತುವಿನಲ್ಲಿ ನಾವು ಲಸಿತ್ ಅವರ ಕೊಡುಗೆಗಳನ್ನು ತಪ್ಪಿಸಿಕೊಳ್ಳಲಿದ್ದೇವೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ. ಆದರೂ, ಈ ಸಮಯದಲ್ಲಿ, ಅವರ ಕುಟುಂಬದೊಂದಿಗೆ ಮಾಲಿಂಗರವರು ಶ್ರೀಲಂಕಾದಲ್ಲಿ ಇರಬೇಕಾದ ಅಗತ್ಯವನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ” ಎಂದರು.
ಮಾಲಿಂಗ ಐಪಿಎಲ್ನಲ್ಲಿ ಗರಿಷ್ಟ ವಿಕೆಟ್ಗಳನ್ನು ಪಡೆದ ಬೌಲರ್ ಆಗಿದ್ದಾರೆ. 2009 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು.
ಐಪಿಎಲ್ ಪಂದ್ಯಾವಳಿಯ 13 ನೇ ಆವೃತ್ತಿಯು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ. ಹೀಗಿದ್ದರೂ, ಪಂದ್ಯಾವಳಿಯ ವೇಳಾಪಟ್ಟಿಯು ಇನ್ನೂ ಘೋಷಿಸಲಾಗಿಲ್ಲ.