ಹುಬ್ಬಳ್ಳಿ (ಅ.21): ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ಕೈಬಿಟ್ಟಿಲ್ಲ. ಅದು ಮುಂದುವರಿಯುತ್ತಲೇ ಇರುತ್ತದೆ. ಸದ್ಯ ಕಾನೂನಾತ್ಮಕ ಹೋರಾಟ ನಡೆಸಿದ್ದೇವೆ ಎಂದು ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಹೋರಾಟವನ್ನೂ ಕೈಬಿಟ್ಟಿಲ್ಲ. ಈಗಲೂ ನಮ್ಮ ಬೇಡಿಕೆ ಪ್ರತ್ಯೇಕ ಧರ್ಮವಾಗಬೇಕೆನ್ನುವುದೇ ಆಗಿದೆ ಎಂದರು.
ನಮ್ಮ ಹೋರಾಟದಿಂದಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆ ಪ್ರಸ್ತಾವನೆ ತಿರಸ್ಕಾರಗೊಂಡಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ ರಾಜ್ಯ ಸರ್ಕಾರದ ಪ್ರಸ್ತಾವನೆ ತಿರಸ್ಕಾರವಾಗಿಲ್ಲ. ಬದಲಾಗಿ, ಪರಿಶೀಲನೆಯ ಹಂತದಲ್ಲಿದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ. ಪ್ರತ್ಯೇಕ ಲಿಂಗಾಯತ ಹೋರಾಟ ನಿರಂತರವಾಗಿದ್ದು, ಶಿವಾನಂದ ಜಾಮಾದಾರ ಅವರ ತಂಡ ಕಾನೂನಾತ್ಮಕ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ ಹಿರೇಕೊಪ್ಪ, ನೀಲಕಂಠ ಅಸೂಟಿ, ಸೋಮಶೇಖರ ಅಲ್ಯಾಳ, ಬಸನಗೌಡ ಪಾಟೀಲ, ಕಲ್ಲಪ್ಪ ಯಲಿವಾಳ, ನಂದಕುಮಾರ ಪಾಟೀಲ ಇದ್ದರು.