ಲೈಂಗಿಕ ಕಿರುಕುಳದ ಆರೋಪ – ಮಂಗಳೂರು ವಿವಿ ಪ್ರಾಧ್ಯಾಪಕ ಅಮಾನತು!

0
102

ಮಂಗಳೂರು, ಅ 31: 2018ರಲ್ಲಿ ನಡೆದಿದ್ದ, ಮಂಗಳೂರು ವಿವಿ ವಿದ್ಯಾರ್ಥಿನಿಯೊಬ್ಬರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ.ಅರಬಿ ಅವರನ್ನು ಅಮಾನತುಗೊಳಿಸಲಾಗಿದೆ.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನಾ ವಿದ್ಯಾರ್ಥಿನಿಯು ತನಗೆ ಪ್ರೊಫೆಸರ್ ಇಂದ ಲೈಂಗಿಕ ಕಿರುಕುಳವಾಗುತ್ತಿದೆ ಎಂದು 2018ರಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು.

ಆಗ ವಿವಿ ಆಡಳಿತ ಸಮಿತಿ ಈ ಪ್ರಕರಣದ ತನಿಖೆ ಕೈಗೊಂಡು ವರದಿಯನ್ನು ಆಗ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎ.ಎಂ. ಖಾನ್ ಅವರಿಗೆ ಸಲ್ಲಿಸಿತ್ತು. ಆದರೆ ವರದಿ ಸಲ್ಲಿಸಿದ್ದರೂ, ಈ ಪ್ರಕರಣವನ್ನು ಹೊರಗೆ ತರದೇ ಮುಚ್ಚಿಡಲಾಗಿತ್ತು. ಮತ್ತೆ ಈ ಪ್ರಕರಣವನ್ನು ಕೈಗೆತ್ತಿಕೊಂಡ ಮಹಿಳಾ ಆಯೋಗವು, ತನಿಖಾ ವರದಿಯನ್ನು ಕೇಳಿತ್ತು. ಇದೇ ಕಾರಣ ಸಿಂಡಿಕೇಟ್ ಎದುರು ವರದಿ ಕುರಿತು ಪ್ರಸ್ತಾಪ ಮಾಡಲಾಗಿತ್ತು. ವರದಿಯಲ್ಲಿ ಪ್ರೊ.ಅರಬಿ ಅವರು ತಪ್ಪಿತಸ್ಥ ಎಂಬುದು ಸಾಬೀತಾಗಿದ್ದು, ಈಗ, ಎರಡು ವರ್ಷಗಳ ನಂತರ ಅವರನ್ನು ಸೇವೆಯಿಂದ ಅಮಾನತುಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಆಗ ಕುಲಸಚಿವರಾಗಿದ್ದ ಎ.ಎಂ.ಖಾನ್ ಅವರ ವಿರುದ್ಧವೂ ಕ್ರಮ ಕೈಗೊಳ್ಳಲು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಸರ್ಕಾರಕ್ಕೆ ದೂರು ನೀಡಲು ತೀರ್ಮಾನಿಸಲಾಗಿದೆ.

LEAVE A REPLY

Please enter your comment!
Please enter your name here