ʼವಂದೇ ಮಾತರಂʼ ಎಂಬ ಕ್ರಾಂತಿಕಾರಿಗಳ ಘೋಷವಾಕ್ಯ ಬರೆದವನೀತ!

0
221
Tap to know MORE!

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭರತ ಖಂಡದ ವೀರರ ಕೆಲವೊಂದು ಘೋಷಣೆಗಳು ಬ್ರಿಟಿಷರ ನಿದ್ದೆಗೆಡಿಸಿದ್ದವು. ಅವುಗಳಲ್ಲಿ ‘ ವಂದೇ ಮಾತರಂ’ ಕೂಡ ಒಂದು. ಈ ಘೋಷಣೆ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಬರೆದ ಕವಿತೆಯ ಸಾಲಾಗಿದೆ. ಹಲವಾರು ಕ್ರಾಂತಿಕಾರಿಗಳ ಪಾಲಿನ ವೇದಘೋಷವು ಹೌದು.

ಬಂಕಿಮಚಂದ್ರರು ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. 1838 ರ ಜೂನ್ 26 ರಂದು ಬಂಗಾಳದ ನೈಹಾತಿಯಲ್ಲಿನ ಕಾಂತಾಲ್ಪುರ ಗ್ರಾಮದಲ್ಲಿ ಜದಾಬ್ ಚಂದ್ರ ಚಟ್ಟೋಪಾಧ್ಯಾಯ ಮತ್ತು ದುರ್ಗಾದೇವಿ ದಂಪತಿಯ ಮಗನಾಗಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಜನಿಸಿದರು. ಸ್ಥಳೀಯ ಹೂಗ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅವರು ಖಾಸಗಿಯಾಗಿ ಸಂಸ್ಕ್ರತ ಕಲಿತರು. ಅವರಿಗೆ ತಮ್ಮ ಅಜ್ಜ ಹೇಳುವ ಕಥೆಗಳನ್ನು ಕೇಳುವುದೆಂದರೆ ಎಲ್ಲಿಲ್ಲದ ಇಷ್ಟ. ಅವರಿಗೆ ಇಬ್ಬರು ಅಣ್ಣಂದಿರು, ಒಬ್ಬ ತಮ್ಮ ಮತ್ತು ಓರ್ವ ತಂಗಿ ಇದ್ದರು.

ಇದನ್ನೂ ನೋಡಿ : ತನ್ನ ಹೆಸರಿನಲ್ಲಿಯೇ “ಆಜಾದ್” ಪದ ಸೇರಿಸಿಕೊಂಡ ಕ್ರಾಂತಿಕಾರಿ ಚಂದ್ರಶೇಖರ್

1857 ರಲ್ಲಿ ಬಿಎ ಪಾಸು ಮಾಡಿದ ಅವರಿಗೆ ಬ್ರಿಟಿಷ್ ಸೇವೆಯಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗುವಂತೆ ವೈಸರಾಯ್‌ ಆಹ್ವಾನ ನೀಡಿದರು. ಬಂಕಿಮಚಂದ್ರರಿಗೆ ಬ್ರಿಟಿಷರ ಪರ ದುಡಿಯುವುದು ಇಷ್ಟವಿರಲಿಲ್ಲವಾದರೂ, ತಂದೆಯ ಒತ್ತಾಯಕ್ಕೆ ಮಣಿದು ಕರ್ತವ್ಯಕ್ಕೆ ಸೇರ್ಪಡೆಗೊಂಡರು.

ಅವರಿಗೆ ಖುಲ್ನಾದಲ್ಲಿ ಹುದ್ದೆ ನೀಡಲಾಗಿತ್ತು. ಅಲ್ಲಿಗೆ ಅವರು ಪತ್ನಿ ರಾಜಲಕ್ಷ್ಮಿ ದೇವಿಯ ಜೊತೆ‌ ತೆರಳಿದರು. ಆ ದಿನಗಳಲ್ಲಿ ಇಂಡಿಗೋ (ನೀಲಿ ಶ್ರೀಫಲ) ಕಾಯ್ದೆ ರೈತರ ಪ್ರಾಣ ಹಿಂಡುತ್ತಿತ್ತು. ಈ ಪ್ರಕಾರ ಅವರು ಹಳ್ಳಿಗಳನ್ನು ಲೂಟಿ ಮಾಡಿ ಧ್ವಂಸಗೊಳಿಸುತ್ತಿದ್ದರು‌. ಕೊಳ್ಳೆ ಹೊಡೆದು ಬೆಂಕಿ ಹಚ್ಚಲಾಗಿದ್ದ ಬರ್ಖಾಲಿ ಸಹ ಬಂಕಿಮಚಂದ್ರರ ವ್ಯಾಪ್ತಿಗೆ ಸೇರಿದ್ದ ಅಂಥ ಒಂದು ಹಳ್ಳಿಯಾಗಿತ್ತು. ಬಂಕಿಮರು ನಿರ್ಭಯವಾಗಿ ತಪ್ಪಿತಸ್ಥ ಬ್ರಿಟಿಷರ ವಿರುದ್ಧ ವಾರೆಂಟ್ ಜಾರಿ ಮಾಡಿದರು. ಅವರು ಮೊದಲು ಲಂಚದ ಆಮಿಷ ಒಡ್ಡಿದರು.ಅದು ವಿಫಲವಾದಾಗ ಬೆದರಿಕೆ ಒಡ್ಡಿದರು.ಆದರೆ, ಬಂಕಿಮಚಂದ್ರರು ಜಗ್ಗಲಿಲ್ಲ , ಬದಲಿಗೆ ಅವರು ಪೊಲೀಸರನ್ನು ಕಳಿಸಿ ಆರೋಪಿಗಳನ್ನು ಹಿಡಿಸಿದರು. ಅವರ ವಿರುದ್ಧ ಸ್ವತಃ ತಾವೇ ಸಾಕ್ಷಿಯಾಗಿ ನಿಂತರು. ಬೇರೆ ಮ್ಯಾಜಿಸ್ಟ್ರೇಟ್ ಒಬ್ಬರು ಪ್ರಕರಣದ ವಿಚಾರಣೆ ನಡೆಸಿದರು.

ಬರುಯ್ ಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಬಂಕಿಮಚಂದ್ರರು ರೈತರನ್ನು ಶೋಷಣೆ ಮಾಡುತ್ತಿದ್ದ ಜಮೀನ್ದಾರನೊಬ್ಬನನ್ನು ಶಿಕ್ಷಿಸಿದರು. ಆತನ ಕಡೆಯ ಗೂಂಡಾಗಳು ಬಂಕಿಮರ ಮನೆಗೆ ಬಂದು ತೀರ್ಪು ಹಿಂದೆ ಪಡೆಯುವಂತೆ ಬೆದರಿಕೆ ಒಡ್ಡುತ್ತಿದ್ದರು .ಈ ಸಂದರ್ಭದಲ್ಲಿ ಮನೆಗೆಲಸದವನಂತೆ ವೇಷ ಮರೆಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡ ಬಂಕಿಮಚಂದ್ರರು ,ಪೋಲೀಸರನ್ನು ಕರೆಸಿ ಗೂಂಡಗಳ ಬಂಧನಕ್ಕೆ ಕಾರಣರಾದರು. ಈ ರೀತಿ ಅವರು ಜಟಿಲ ಸನ್ನಿವೇಶಗಳಿಂದ ಪಾರಾಗುತ್ತಿದ್ದರು.

ನ್ಯಾಯಸಮ್ಮತ ತೀರ್ಪುಗಳಿಂದಾಗಿ ಬಂಕಿಮಚಂದ್ರರ ಜನಪ್ರೀಯತೆ ಬೆಳೆಯಿತು.ಅವರು ಬ್ರಿಟಿಷರ ಕೈಗೊಂಬೆಯಾಗದೆ ದೇಶವಾಸಿಗಳಿಗೆ ಸಹಾಯ ಮಾಡಲು ತಮ್ಮ ಸರ್ಕಾರಿ ಉದ್ಯೋಗವನ್ನು ಬಳಸಿಕೊಂಡರು. ಅವರು ತಮ್ಮ ಕೃತಿಗಳಲ್ಲಿ ಸತಿ ಪದ್ದತಿ ಮತ್ತು ಬಾಲ್ಯ ವಿವಾಹ ನಿರ್ಮೂಲನೆ,ವಿಧವಾ ವಿವಾಹ ,ಮಹಿಳಾ ಶಿಕ್ಷಣದಂಥ ವಿಷಯಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ರಾಷ್ಟ್ರೀಯತಾವಾದಿ ಭಾವನೆಗಳನ್ನು ಪ್ರಚಾರ ಮಾಡಿದರು .ಇಂಗ್ಲೀಷ್ ಬದಲು ಸ್ಥಳೀಯ ಭಾಷೆಯನ್ನು ಬಳಸುವಂತೆ ಅವರು ಕರೆನೀಡಿದರು .

ಎತ್ತರದ ನಿಲುವು , ಶ್ವೇತವರ್ಣ ,ಮೃದುಭಾಷಿತ್ವ ಅವರ ವರ್ಚಸ್ಸು ಹೆಚ್ಚಿಸಿತ್ತು. ಕಾಲಕ್ರಮೇಣ ಅವರು ಚಂದ್ರಶೇಖರ, ರಾಜ್ಸಿಂಘ ದೇವಿ ಚೌದುರಾಣಿ , ಸೀತಾರಾಮ್ ಮತ್ತು ಆನಂದಮಠ ಕಾದಂಬರಿಗಳನ್ನು ರಚಿಸಿದರು. ರಾಷ್ಟ್ರೀಯ ಗೀತೆಯೆಂದು ಮಾನ್ಯಗೊಂಡಿರುವ ಪ್ರಖ್ಯಾತ ಕವಿತೆ ʼವಂದೇ ಮಾತರಂʼ ಆನಂದಮಠದ ಭಾಗವಾಗಿತ್ತು.

1891ರಲ್ಲಿ ಬಂಕಿಮಚಂದ್ರರು ಅನಾರೋಗ್ಯದಿಂದಾಗಿ ಸರ್ಕಾರಿ ಸೇವೆಯಿಂದ ನಿವೃತ್ತರಾದರು.1894ರ ಆರಂಭದಲ್ಲಿ ಅವರು ಗಂಭೀರ ಕಾಯಿಲೆಗೆ ಸಿಲುಕಿದರು. ಹಿಂದೂ ತತ್ವಶಾಸ್ತ್ರ ಕುರಿತ ಗ್ರಂಥಗಳು ಅವರಿಗೆ ಕಾಲ ಯಾಪನೆಗೆ ಮಾರ್ಗವಾಗಿದ್ದವು.

ಇವರ ಸೇವೆಗೆ ಮೆಚ್ಚಿದ ಬ್ರಿಟಿಷರು ಬಂಕಿಮರಿಗೆ ಅನೇಕ ಗೌರವ ಪ್ರಶಸ್ತಿಗಳನ್ನು ನೀಡಿದರು.ಆದರೆ, ಅವರ ಪಾಲಿಗೆ ಅದು ದಾಸ್ಯದ ಸಂಕೇತಗಳೆನಿಸಿದ್ದವು. ಬದುಕಿನಿಂದ ಏನಾಗಬೇಕಿದೆ ? ಸತ್ಯವನ್ನು ಅರಿತುಕೊಳ್ಳಲು ಜ್ಞಾನ ಸಂಪಾದಿಸಬೇಕು .ಸತ್ಯವೆಂದು ನಂಬಿದ ಮಾರ್ಗದಲ್ಲಿ ಬದುಕು ಸಾಗಿಸಬೇಕು…ಎಂದು ಅವರು ಯಾವಾಗಲೂ ಯೋಚಿಸುತ್ತಿದ್ದರು.

ಬಂಕಿಮಚಂದ್ರರು 1894 ರ ಏಪ್ರಿಲ್ 8 ರಂದು ವಿಧಿವಶರಾದರು.ರವೀಂದ್ರನಾಥ ಟಾಗೋರ್ ವಂದೇ ಮಾತರಂ ಕವಿತೆಗೆ ರಾಗ ಸಂಯೋಜಿಸಿದರು.1896 ರ ಕಾಂಗ್ರೆಸ್ ಅಧಿವೇಶನದಲ್ಲಿ ಇದನ್ನು ಹಾಡಲಾಗಿತ್ತು.

ಸುರೇಶ್ ರಾಜ್
ವಿವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here