ಮಂಗಳೂರು: ಗಂಜಿಮಠದ ಮುತ್ತೂರಿನ ವ್ಯಕ್ತಿಯೋರ್ವರು ಎರಡು ರೀತಿಯ ಕೊರೊನಾ ವರದಿಯಿಂದ ಗೊಂದಲಕ್ಕೀಡಾದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ವ್ಯಕ್ತಿಯು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ವೆನ್ಲಾಕ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದಾಗ ಎರಡು ವರದಿಗಳು ಬೇರೆ ಬೇರೆಯಾಗಿ ಬಂದಿದೆ ಎಂದಿದ್ದಾರೆ.
ವ್ಯಕ್ತಿಗೆ ತೀವ್ರವಾದ ತಲೆನೋವು ಇದ್ದ ಕಾರಣ ಖಾಸಗಿ ಆಸ್ಪತ್ರೆಗೆ ಹೋಗಿದ್ದರು. ವ್ಯಕ್ತಿಯು ಸ್ವ ಇಚ್ಛೆಯಿಂದ ಕೋವಿಡ್ ಪರೀಕ್ಷೆ ಮಾಡಲು ಹೇಳಿದಾಗ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿ ವ್ಯಕ್ತಿಯ ಕೊರೊನಾ ವರದಿಯು ಪಾಸಿಟಿವ್ ಬಂದಿತ್ತು.
ವರದಿ ಬಂದ ಬಳಿಕ ದೃಢೀಕರಣಕ್ಕಾಗಿ ಮತ್ತೊಮ್ಮೆ ಕೊರೊನಾ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆಯಲ್ಲೂ ಮಾಡಿಸಿದ್ದರು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಅವರ ವರದಿ ನೆಗೆಟಿವ್ ಬಂದಿರುತ್ತದೆ. ಇದರಿಂದ ಗೊಂಡಲಕ್ಕೊಳಗಾದ ವ್ಯಕ್ತಿ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಮೂರನೇ ಬಾರಿ ಪರೀಕ್ಷೆ ಮಾಡುತ್ತಾರೆ. ಆ ವರದಿಯು ಕೂಡ ನೆಗೆಟಿವ್ ಎಂದೇ ಬರುತ್ತದೆ. ಇದಾದ ಬಳಿಕ ವ್ಯಕ್ತಿ ತಲೆನೋವಿನ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ.
ವೆನ್ಲಾಕ್ ವರದಿಯಲ್ಲಿ ಪಾಸಿಟಿವ್ ಬಂದ ಕಾರಣ ಜಿಲ್ಲಾಡಳಿತ ವ್ಯಕ್ತಿಯ ಮನೆಯ ಪರಿಸರವನ್ನು ಸೀಲ್ ಡೌನ್ ಮಾಡುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್ ವರದಿ ಬಂದಿರುವ ವಿಷಯ ತಿಳಿಸಿದರು ಜಿಲ್ಲಾಡಳಿತ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ವೆನ್ಲಾಕ್ ಆಸ್ಪತ್ರೆಯನ್ನು ಸಂಪರ್ಕಿಸಿದಾಗಲೂ ನನಗೆ ಯಾವುದೇ ಉತ್ತರ ದೊರೆಯಲಿಲ್ಲ ಎಂದು ವ್ಯಕ್ತಿ ಹೇಳಿದರು.
ಹೀಗಾಗಿ ವ್ಯಕ್ತಿ ಹೇಳುವಂತೆ ವೆನ್ಲಾಕ್ ಅಸ್ಪತ್ರೆಯಲ್ಲಿ ಹೆಸರಿಗಷ್ಟೇ ಪರೀಕ್ಷೆ ಮಾಡುವಂತಾಗಿದೆ. ನಿಜವಾಗಿಯೂ ಇಂತಹ ಗಂಭೀರ ತಪ್ಪುಗಳು ಯಾಕೆ ಆಗುತ್ತಿವೆ ಎಂಬುದು ತಿಳಿದಿಲ್ಲ. ವೆನ್ಲಾಕ್ ನಲ್ಲಿ ನೀಡುತ್ತಿರುವ ವರದಿ ಎಷ್ಟರ ಮಟ್ಟಿಗೆ ಸತ್ಯ ಎಂದು ಅನುಮಾನ ಮೂಡುತ್ತದೆ ಎಂದರು. ನಾನು ಈ ಕುರಿತು ಶಾಸಕರಿಗೂ ಹೇಳಿದ್ದೆ. ನನ್ನ ಮನೆಯವರು ಮಾತ್ರವಲ್ಲದೆ ನೆರೆಹೊರೆಯವರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಡವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದರು.