ಆಂಗ್ಲರ ವಿರುದ್ಧ ಹೋರಾಡಿ ರಾಜ್ಯ ಹಿಂಪಡೆದ ಧೀರೆ ವೇಲು ನಾಚಿಯಾರ್

0
345
Tap to know MORE!

ಸ್ವಾತಂತ್ರ್ಯ ಸಂಗ್ರಾಮ ಎಂದಾಕ್ಷಣ ನಮಗೆ ನೆನಪಾಗುವವರಲ್ಲಿ ಬಹುತೇಕರು ಪುರುಷರೇ. ಆದರೆ ಇಲ್ಲಿ ಸ್ತ್ರೀಯರು ಕೂಡ ಮಹತ್ತರ ಪಾತ್ರ ವಹಿಸಿದ್ದರು ಅಂತವರಲ್ಲಿ ವೇಲು ನಾಚಿಯಾರ್ ಒಬ್ಬರು. ಇವರು ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ದಿಟ್ಟ ಮಹಿಳೆ.

ವೇಲು ನಾಚಿಯಾರ್ ಅವರು ಚೆಲ್ಲಮುತ್ತು ವಿಜಯರಗುನಾಥ ಸೇತುಪತಿ ಮತ್ತು ಸಕಂಥಿಮಥಾಥಾಲ್ ದಂಪತಿಗಳ ಮಗಳಾಗಿ ಜನವರಿ 3, 1730ರಲ್ಲಿ ತಮಿಳುನಾಡಿನ ರಾಮನಾಥಪುರಂನಲ್ಲಿ ಜನಿಸಿದರು. ವೇಲು ನಾಚಿಯಾರ್ ಅವರು ತಮ್ಮ ಬಾಲ್ಯದಲ್ಲಿ ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆ ಮುಂತಾದ ಸಮರಕಲೆಗಳಲ್ಲಿ ಕಲಿತರು. ಅವರು ಅನೇಕ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು ಮತ್ತು ಫ್ರೆಂಚ್,ಇಂಗ್ಲಿಷ್ ಮತ್ತು ಉರ್ದು ಮುಂತಾದ ಭಾಷೆಗಳಲ್ಲಿ ಪಾಂಡಿತ್ಯ ಸಾಧಿಸಿದ್ದರು.

ಇದನ್ನೂ ಓದಿ : ತಾ ಮಡಿದರೂ, ಧ್ವಜ ಬಿಡದ ದೇಶಭಕ್ತ ತಿರುಪುರ್ ಕುಮಾರನ್

ವೇಲು ನಾಚಿಯಾರ್ ಶಿವಗಂಗೈನ ಅರಸ ಮುತ್ತುವಾಡುಗನಾಥಪೆರಿಯ ಉದಯ ಥೇವರ್ ಅವರನ್ನು ವಿವಾಹವಾಗುತ್ತಾರೆ. ಇವರಿಗೆ ಒಬ್ಬಳು ಮಗಳು ಜನಿಸುತ್ತಾಳೆ. ನಾಚಿಯಾರ್ ಅವರ ಪತಿ ಬ್ರಿಟಿಷರ ವಿರುದ್ಧ ಯುದ್ದದಲ್ಲಿ ಮಡಿಯುತ್ತಾರೆ. ಇವರ ಅರಮನೆಯನ್ನು ವಶಪಡಿಸಿಕೊಂಡಾಗ ಇವರು ತನ್ನ ಮಗಳೊಂದಿಗೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಮುಂದಕ್ಕೆ ಚದುರಿದ್ದ ತಮ್ಮ ಸೈನ್ಯವನ್ನು ಸೇರಿಸಿ ನಾಚಿಯಾರ್ ಬ್ರಿಟಿಷರ ವಿರುದ್ಧ ಯುದ್ದಕ್ಕೆ ಸಿದ್ದರಾಗುತ್ತಾರೆ. ವೇಲು ನಾಚಿಯಾರ್ ಹೈದರಾಲಿಯೊಂದಿಗೆ ಮೈತ್ರಿ ಮಾಡಿಕೊಂಡು ಬ್ರಿಟಿಷರ ವಿರುದ್ಧ ಯುದ್ದಮಾಡುತ್ತಾರೆ. ಬ್ರಿಟಿಷರ ಮದ್ದು ಗುಂಡು ಸಂಗ್ರಹಿಸಿದ ಸ್ಥಳವನ್ನು ಪತ್ತೆ ಹಚ್ಚಿ ಅದರ ಮೇಲೆ ದಾಳಿ ಮಾಡಿ ಬ್ರಿಟಿಷರನ್ನು ಸದೆಬಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ರಾಜ್ಯವನ್ನು ಮರಳಿ ಪಡೆದ ಕೆಲವೇ ಕೆಲವು ಆಡಳಿತಗಾರರಲ್ಲಿ ನಾಚಿಯಾರ್ ಒಬ್ಬಳು ಮತ್ತು ಅದನ್ನು ಮುಂದೆ ಹತ್ತು ವರ್ಷಗಳ ಕಾಲ ಆಳಿದರು .1790ರಲ್ಲಿ ನಾಚಿಯಾರ್ ಅವರು ತಮ್ಮ ಅಧಿಕಾರವನ್ನು ತಮ್ಮ ಮಗಳು ವೆಲ್ಲಾಕ್ಸಿಗೆ ನೀಡಿದರು. ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ನಾಚಿಯಾರ್ ಅವರು ಡಿಸೆಂಬರ್ 1796ರಂದು ನಿಧನರಾದರು‌. ಸ್ತ್ರೀಯೊಬ್ಬಳು ದೇಶದ ಸ್ವಾತಂತ್ರ್ಯಕ್ಕಾಗಿ ಖಡ್ಗ ಹಿಡಿದು ರಣರಂಗದಲ್ಲಿ ಹೋರಾಡಬಲ್ಲಳು ಎಂದು ತೋರಿಸಿದ್ದ ವೇಲು ನಾಚಿಯಾರ್ ತಮಿಳುನಾಡಿನ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಸುರೇಶ್‌ ರಾಜ್‌
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here