ಶಾಲಾ ಕಾಲೇಜುಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಹೊರಡಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

0
252
Tap to know MORE!

ನವದೆಹಲಿ, (ಅ.05): ಅನ್​ಲಾಕ್​-5.0 ಹಂತದಲ್ಲಿ ಶಾಲಾ ಕಾಲೇಜು ಪ್ರಾರಂಭಕ್ಕೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಅದರ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಅದಕ್ಕೆ ಸಂಬಂಧಪಟ್ಟ ಕೆಲ ಮಾರ್ಗಸೂಚಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿದೆ.

  • ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬಗ್ಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೇ ಅವರ ಪಾಲಕರ ಲಿಖಿತ ಒಪ್ಪಿಗೆ ಇರಬೇಕು. (ಕಂಟೇನ್​ಮೆಂಟ್ ಝೋನ್​ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲೆಗೆ ಹಾಜರಾಗಲು ಅವಕಾಶ ಇಲ್ಲ)
  • ವಿದ್ಯಾರ್ಥಿಗಳು ಆನ್​ಲೈನ್​ ಕಲಿಕೆಯನ್ನೂ ಆರಿಸಿಕೊಳ್ಳಬಹುದು. ಇದನ್ನೂ ಹಾಜರಾತಿಗೆ ಮಾನ್ಯ ಮಾಡಲಾಗುವುದು. ಆನ್ಲೈನ್ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು.
  • ಶಾಲಾ-ಕಾಲೇಜುಗಳಲ್ಲಿ ಕಾರ್ಯಪಡೆಗಳು ರಚನೆಯಾಗಬೇಕು. ತುರ್ತು ಆರೈಕೆ ತಂಡ, ಪ್ರತಿಕ್ರಿಯೆ/ಸಹಾಯ ನೀಡುವ ಫೋರ್ಸ್​, ಸ್ವಚ್ಛತಾ ತಂಡಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ನೀಡಬೇಕು.
  • ಮಕ್ಕಳು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆಗೆ ಸೂಕ್ತ ಯೋಜನೆ ರೂಪಿಸಿಕೊಂಡು, ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.
  • ಸಾಧ್ಯವಾದರೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಪ್ರತ್ಯೇಕವಾಗಿಸಿ. ಅದರಲ್ಲೂ ವಿವಿಧ ತರಗತಿಗಳಿಗೆ ಪ್ರತ್ಯೇಕ ಸಮಯವನ್ನು ಅಳವಡಿಸುವುದು ಸೂಕ್ತ.
  • ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ, ಮಕ್ಕಳಿಗೆ ಬಡಿಸುವಾಗ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು.
  • ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿಯ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್​ ಪಾಲನೆ ಮಾಡಬೇಕು.
  • ಶಾಲೆ ಶುರುವಾಗಿ 2-3 ವಾರದವರೆಗೂ ಯಾವುದೇ ಪರೀಕ್ಷೆ/ಮೌಲ್ಯಮಾಪನ ಇರುವುದಿಲ್ಲ. ಐಸಿಟಿ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಮತ್ತು ಆನ್​ಲೈನ್​ ಕಲಿಕೆಯನ್ನೇ ಪ್ರೋತ್ಸಾಹಿಸಬೇಕು.

ಈ ಮಾರ್ಗಸೂಚಿಗಳನ್ನು ಆಧರಿಸಿ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಶಾಲೆಗಳ ಆರಂಭಕ್ಕೆ ತಮ್ಮದೇ ಆದ ನಿರ್ದಿಷ್ಟ ಎಸ್ಓಪಿಗಳನ್ನು ರೂಪಿಸಬೇಕು ಮತ್ತು ಶಾಲೆಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಸಂಬಂಧಪಟ್ಟವರಿಗೆ ಅಗತ್ಯ ತರಬೇತಿಗಳನ್ನು ನೀಡಬೇಕು.

ಸುರಕ್ಷತಾ ಕ್ರಮಗಳ ಉಲ್ಲೇಖ

ಶಾಲೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು, ಎಲ್ಲಾ ಪ್ರದೇಶಗಳಲ್ಲಿ, ಪೀಠೋಪಕರಣ, ಸಾಮಗ್ರಿ, ಬೋಧನಾ ಸಾಮಗ್ರಿ, ದಾಸ್ತಾನು ಪ್ರದೇಶ, ನೀರಿನ ತೊಟ್ಟಿಗಳು, ಅಡುಗೆ ಕೋಣೆ, ಕ್ಯಾಂಟಿನ್, ಶೌಚಾಲಯಗಳು, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಇಡೀ ಶಾಲಾ ಕ್ಯಾಂಪಸ್ ಆವರಣದಲ್ಲಿ ಸ್ವಚ್ಛತೆ ಮತ್ತು ಸೋಂಕು ನಿವಾರಕ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ವ್ಯವಸ್ಥೆ ಮಾಡಬೇಕು ಹಾಗೂ ಒಳಾಂಗಣದಲ್ಲಿ ಶುದ್ಧ ಗಾಳಿಯನ್ನು ಖಾತ್ರಿಪಡಿಸಬೇಕು.

ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
ಮಕ್ಕಳು ಶಾಲೆಯಲ್ಲಿ ಆಸನಗಳಲ್ಲಿ ಕುಳಿತುಕೊಳ್ಳುವ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ದೈಹಿಕ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಬೇಕು.

ಕಾರ್ಯಕ್ರಮಗಳು ಮತ್ತು ಸಮಾರಂಭಗಳನ್ನು ಆದಷ್ಟು ತಪ್ಪಿಸಬೇಕು. ಹಂತ ಹಂತವಾಗಿ ಪ್ರವೇಶ ಮತ್ತು ನಿರ್ಗಮನ ಸಮಯಗಳನ್ನು ಹಾಗೂ ಶಾಲಾ ಪ್ರವೇಶ ದ್ವಾರಗಳನ್ನು ನಿಗದಿಪಡಿಸಬೇಕು ಹಾಗೂ ಅದಕ್ಕೆ ತಕ್ಕಂತೆ ವೇಳಾಪಟ್ಟಿ ರೂಪಿಸಬೇಕು.

ಶಾಲೆಗೆ ಆಗಮಿಸುವ ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ತರಗತಿಯಲ್ಲಿದ್ದಾಗಲೂ ಅಥವಾ ಯಾವುದೇ ಗುಂಪು ಚಟುವಟಿಕೆಗಳಲ್ಲಿ ತೊಡಗಿದ್ದಾಗಲೂ ಅಂದರೆ ಮೆಸ್ ಗಳಲ್ಲಿ ತಿಂಡಿ ತಿನ್ನುವಾಗ, ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುವಾಗ ಮತ್ತು ಗ್ರಂಥಾಲಯಗಳಲ್ಲಿ ಓದುವಾಗಲೂ ಮಾಸ್ಕ್ ಧರಿಸಿರಬೇಕು.

ಪೋಷಕರ ಒಪ್ಪಿಗೆ ಕಡ್ಡಾಯ
ಪೋಷಕರ ಒಪ್ಪಿಗೆಯೊಂದಿಗೆ, ಯಾವ ವಿದ್ಯಾರ್ಥಿಗಳು ಮನೆಯಿಂದಲೇ ಅಧ್ಯಯನ ನಡೆಸಲು ಬಯಸುತ್ತಾರೋ ಅಂತಹವರಿಗೆ ಅದಕ್ಕೆ ಅವಕಾಶ ಮಾಡಿಕೊಡಬೇಕು. ಕೋವಿಡ್-19ಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಸಮುದಾಯದ ಸದಸ್ಯರು ಮತ್ತು ವಿದ್ಯಾರ್ಥಿನಿಲಯದ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕು ಮತ್ತು ಶಿಕ್ಷಣ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಅವರುಗಳು ಅವರವರ ಪಾತ್ರಗಳನ್ನು ನಿರ್ವಹಿಸುವಂತೆ ನೋಡಿಕೊಳ್ಳಬೇಕು.

ಶಾಲೆಯ ಸಮೀಪ ಆರೋಗ್ಯ ಕಾರ್ಯಕರ್ತರು ಇರಬೇಕು
ಶಾಲೆಗಳಲ್ಲಿ ಅಥವಾ ಶಾಲೆಯ ಸಮೀಪದಲ್ಲೇ ಪೂರ್ಣ ಪ್ರಮಾಣದ ತರಬೇತಿ ಹೊಂದಿದ ಆರೋಗ್ಯ ರಕ್ಷಣಾ ಕಾರ್ಯಕರ್ತರು,ನರ್ಸ್,ವೈದ್ಯರು ಮತ್ತು ಸಮಾಲೋಚಕರು ಇರುವುದನ್ನು ಖಾತ್ರಿಪಡಿಸಬೇಕು ಹಾಗೂ ಅವರ ಮೂಲಕ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಗಾಗ್ಗೆ ಆಯೋಜಿಸಬೇಕು.

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಂದ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕು. ಸ್ಥಳೀಯ ಆಡಳಿತ, ರಾಜ್ಯ ಮತ್ತು ಜಿಲ್ಲಾ ಸಹಾಯವಾಣಿಗಳು ಹಾಗೂ ಸಮೀಪದ ಕೋವಿಡ್ ಕೇಂದ್ರ ಹಾಗೂ ಇತರೆ ತುರ್ತು ಸಂದರ್ಭಗಳಿಗಾಗಿ ಅಗತ್ಯ ಸಂಪರ್ಕ ವಿವರಗಳನ್ನು ಹೊಂದಿರಬೇಕು.

ಮಕ್ಕಳಿಗೆ ಆಹಾರ ಭತ್ಯೆ
ಮಕ್ಕಳ ಪೌಷ್ಠಿಕಾಂಶ ಅಗತ್ಯತೆಗಳನ್ನು ಪೂರೈಸಲು ಮತ್ತು ಕೋವಿಡ್-19 ವಿರುದ್ಧ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬೇಯಿಸಿದ ಮಧ್ಯಾಹ್ನದ ಬಿಸಿಯೂಟ ನೀಡುವುದು ಅಥವಾ ಬೇಸಿಗೆ ರಜೆಯಲ್ಲಿ ಶಾಲೆ ಮುಚ್ಚಿದ್ದ ವೇಳೆ ಮಕ್ಕಳಿಗೆ ನೀಡಿದ್ದಂತೆ ಈಗಲೂ ಅದಕ್ಕೆ ಸಮನಾದ ಆಹಾರ ಭದ್ರತಾ ಭತ್ಯೆಯನ್ನು ನೀಡುವುದು. ಅಲ್ಲದೆ ಆಹಾರ ಭದ್ರತೆ, ಆರೋಗ್ಯ ಮತ್ತು ಶುಚಿತ್ವದ ಜೊತೆಗೆ ದೈಹಿಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಅಗತ್ಯ ಒತ್ತು ನೀಡುವುದು.

ಪಠ್ಯದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ

ಪರಿಸರ ವಿಜ್ಞಾನ (ಇವಿಎಸ್) ಭಾಷೆಗಳು, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಹಾಗೂ ಕಲೆ ಮತ್ತಿತರ ವಿಷಯಗಳನ್ನು ಬೋಧಿಸುವಾಗ ಬೋಧನೆಯಲ್ಲಿ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವಿಷಯಗಳನ್ನು ಸೇರ್ಪಡೆ ಮಾಡಿಕೊಂಡು ಮಕ್ಕಳನ್ನು ಜಾಗೃತಗೊಳಿಸುವುದು.

 

LEAVE A REPLY

Please enter your comment!
Please enter your name here