“ಸೆ.21 ರಿಂದ ಶಾಲೆಗಳು ಓಪನ್ – ಆದರೆ ತರಗತಿಗಳು ನಡೆಯಲ್ಲ”

0
329
Tap to know MORE!

ಮೈಸೂರು(ಸೆ.18): ಸಾಂಸ್ಕೃತಿಕ ನಗರಿ ಮೈಸೂರಿನ ನಜರ್​​ಬಾದ್​​ನಲ್ಲಿ ಇಂದು ನಗರ ಕೇಂದ್ರ ಗ್ರಂಥಾಲಯವನ್ನು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಉದ್ಘಾಟನೆ ಮಾಡಿದರು.

ಲೈಬ್ರರಿ ಉದ್ಘಾಟನೆ ಬಳಿಕ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಶಾಲೆಗಳನ್ನು ಆರಂಭಿಸುವ ಬಗ್ಗೆ ಸ್ಪಷ್ಟನೆ ನೀಡಿದರು. ಇದೇ ಸೆಪ್ಟೆಂಬರ್ 21ರಿಂದ ಕೇವಲ ಶಾಲೆಗಳು ತೆರೆಯಲಿವೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ. ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಸಬೇಕು ಎಂದು ಹೇಳಿದರು.

“ಖಾಸಗಿ ಶಾಲೆಗಳು ಕೇವಲ ಒಂದು ಅವಧಿಯ ಶುಲ್ಕವನ್ನು​ ಮಾತ್ರ ಪೋಷಕರಿಂದ ಪಡೆಯಬೇಕು. ಆಗೊಮ್ಮೆ ಸಮಸ್ಯೆಯಾದರೆ ಡಿಡಿಪಿಐ, ಬಿಇಓ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಅವರಿಗೆ ಈಗಾಗಲೆ ನಾವು ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆಯಾದರೆ ಕೂಡಲೇ ಬಿಇಓ ಅವರನ್ನು ಸಂಪರ್ಕಿಸಿ” ಎಂದು ತಿಳಿಸಿದರು.

ಇದೇ ವೇಳೆ, ರಾಜ್ಯದಲ್ಲಿ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ ಎಂದು ಸುರೇಶ್​ ಕುಮಾರ್ ಸಂತಸ ವ್ಯಕ್ತಪಡಿಸಿದರು. ಎಷ್ಟೇ ಮಕ್ಕಳು ಬಂದರೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ದರೆ, ಬಿಇಓಯಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇನ್ನು, ಹೋದಲ್ಲೆಲ್ಲಾ ಶಾಲೆ ಯಾವಾಗ ಶುರುವಾಗುತ್ತೆ ಎಂದು ಮಕ್ಕಳು ಕೇಳುತ್ತಿದ್ದಾರೆ. ಆದರೆ ಪೋಷಕರು ಮಾತ್ರ ಇನ್ನೂ ಸಾಕಷ್ಟು ಆತಂಕದಲ್ಲಿ ಇದ್ದಾರೆ. ಇದನ್ನು ನಿವಾರಿಸುವ ಕೆಲಸ ನಮ್ಮ‌ ಇಲಾಖೆ ಮಾಡಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here