ಶಿವಮೊಗ್ಗ : ಉಡುತಡಿ ಗ್ರಾಮದಲ್ಲಿ ಕ್ರಿ.ಶ.12 ನೇ ಶತಮಾನದ ಶಾಸನ ಪತ್ತೆ!

0
164
Tap to know MORE!

ಶಿವಮೊಗ್ಗ, ಡಿ.13: ಶಿಕಾರಿಪುರ ತಾಲೂಕಿನ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಗ್ರಾಮದ ಕೋಟೆಯ ಪ್ರದೇಶದಲ್ಲಿ ಕಸಪ್ಪಯ್ಯ ನಾಯಕನ ಕಾಲದ ಶಾಸನವೊಂದು ಪತ್ತೆಯಾಗಿದ್ದು, ಇದು ಐತಿಹಾಸಿಕ ಮಹತ್ವದ್ದಾಗಿದೆ.

ಉಡುತಡಿ ಕೋಟೆ ಪ್ರದೇಶದಲ್ಲಿ ಪುರಾತತ್ವ ಇಲಾಖೆ ವತಿಯಿಂದ ಕಾಮಗಾರಿ ನಡೆಯುವ ವೇಳೆ ಈ ಶಾಸನ ಪತ್ತೆಯಾಗಿದೆ. ಇದು ಕ್ರಿ.ಶ.12ನೇ ಶತಮಾನದ್ದಾಗಿದ್ದು, ಇಲ್ಲಿ ಗಜಲಕ್ಷ್ಮಿ ಪಟ್ಟಿಗೆ ಮಡಕೆ ಹಾಗೂ ಹೆಂಚುಗಳ ಚೂರುಗಳು ದೊರೆತಿವೆ. ಕೋಟೆಯ ಪೂರ್ವಭಾಗದ ಬಲಬುರುಜಿನ ಹತ್ತಿರ ಬಿಜ್ಜಳ ಅರಸನ ದಂಡ ನಾಯಕ ಕಸಪ್ಪಯ್ಯ ನಾಯಕನ ತೃಟಿತವಾದ ಶಾಸನ ಪತ್ತೆಯಾಗಿದೆ ಎಂದು ಪುರಾತತ್ವ ಸಂಗ್ರಹಾಯಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ ತಿಳಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಭಾರತದ ಗಾಂಧಿ ಎಂದೇ ಹೆಸರು ಪಡೆದ ಹೋರಾಟಗಾರ ಕಾರ್ನಾಡ್ ಸದಾಶಿವ ರಾವ್

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ವಿವರ ನೀಡಿರುವ ಅವರು, ಈ ಶಾಸನವು 114 ಸೆಂ.ಮೀಟರ್ ಉದ್ದ, 30 ಸೆಂ.ಮೀಟರ್ ಅಗಲವಾಗಿದ್ದು, ಮೇಲ್ಬಾಗದಲ್ಲಿ ಸ್ವಲ್ಪ ಭಾಗ ತುಂಡಾಗಿದೆ. ಕೆಳಭಾಗ ಹಾಗೂ ಎಡಭಾಗದಲ್ಲಿ ಅಕ್ಷರಗಳು ತೃಟಿತವಾಗಿರುವುದು ಕಂಡುಬರುತ್ತದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಶಾಸನವು ಕ್ರಿ.ಶ. 1150-68ರ ಅವಧಿಯ ಕಲಚೂರಿ ಬಿಜ್ಜಳ ಅರಸನ ಕಾಲದ್ದಾಗಿದೆ. ಇದರಲ್ಲಿ ದಂಡನಾಯಕ ಕಸಪ್ಪಯ್ಯ ನಾಯಕನ ಉಲ್ಲೇಖವಿದೆ. ಇವನು ಬಿಜ್ಜಳ ಅರಸನ ದಂಡನಾಯಕನಾಗಿ ಬನವಾಸಿ ನಾಡಿನ ಮಹಾದಂಡನಾಯಕನಾಗಿ ಬಳ್ಳಿಗಾವೆಯನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದಾನೆಂದು ಈಗಾಗಲೇ ಅನೇಕ ಶಾಸನಗಳಲ್ಲಿ ಉಲ್ಲೇಖವಿದೆ ಎಂದು ತಿಳಿಸಿದ್ದಾರೆ.

ಈ ಕಸಪ್ಪಯ್ಯ ನಾಯಕನೇ ಅಕ್ಕಮಹಾದೇವಿಯ ಪತಿ ಕೌಶಿಕ ಮಹಾರಾಜ ಇರಬಹುದು ಎಂದು ಸಂಶೋಧಕ ಚಿದಾನಂದ ಮೂರ್ತಿ ಹಾಗೂ ದೇವರ ಕೊಂಡರೆಡ್ಡಿ ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡುತಡಿ ಕೋಟೆಯಲ್ಲಿಯೇ ಕಸಪ್ಪಯ್ಯನಾಯಕನ ಶಾಸನ ದೊರೆತಿರುವುದರಿಂದ ಇವರೇ ಕೌಶಿಕ ಮಹಾರಾಜ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯ ಈ ಶಾಸನದಿಂದ ಸಿಗುತ್ತದೆ ಎಂದು ತಿಳಿಸಿದ್ದಾರೆ. ಕಸಪ್ಪಯ್ಯ ನಾಯಕನು ಬಲ್ಲೇಶ್ವರ ದೇವರ ಆರಾಧಕನಾಗಿದ್ದು, ಬ್ರಹ್ಮಪುರಿಗೆ ಅಂದರೆ ಬ್ರಾಹ್ಮಣ ಅಗ್ರಹಾರಕ್ಕೆ 8 ಗದ್ಯಾಣ ನಾಣ್ಯಗಳನ್ನು ದಾನ ಮಾಡಿರುವುದಾಗಿ ತಿಳಿದುಬರುತ್ತದೆ.

ಆರ್.ಶೇಜೇಶ್ವರ ಅವರ ನಿರ್ದೇಶನದಲ್ಲಿ ಸಹ್ಯಾದ್ರಿ ಪಾರಂಪರಿಕ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಜಿ.ಪೂರ್ಣಿಮಾ, ರಮೇಶ್ ಹಿರೇಜಂಬೂರು, ಬಿಚ್ಚುಗತ್ತಿ ಶ್ರೀಪಾದ, ಮಂಜುನಾಥ್ ಹೆಗಡೆ ಇವರುಗಳು ಕ್ಷೇತ್ರ ಕಾರ್ಯ ಕೈಗೊಂಡಾಗ ಈ ಶಾಸನ ಪತ್ತೆಯಾಗಿದೆ ಮತ್ತು ಈ ಶಾಸನವನ್ನು ವಿದ್ವಾಂಸ ಡಾ.ಜಗದೀಶ್ ಅವರು ಓದಿ ವಿವರಣೆ ನೀಡಿದ್ದಾರೆ.

ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಕ್ರಾಂತಿಕಾರಿ ರಾಮ್‌ಪ್ರಸಾದ್ ಬಿಸ್ಮಿಲ್

LEAVE A REPLY

Please enter your comment!
Please enter your name here