ಶಾಸ್ತ್ರ ಓದಿ, ಆಂಗ್ಲರ ವಿರುದ್ಧ ಶಸ್ತ್ರ ಹಿಡಿದ ಫಡಕೆ !

0
259
Tap to know MORE!

1857ರ ಪ್ರಥಮ ಸ್ವತಂತ್ರ್ಯ ಸಂಗ್ರಾಮದ ಬಳಿಕ ಭಾರತೀಯರು ಸ್ವಲ್ಪ ತಣ್ಣಗಾಗಿದ್ದಾರೆ. ಇನ್ನು ಮುಂದೆ ಭಾರತವನ್ನು ಬ್ರಿಟಿಷರ ಭದ್ರ ಬಾಹುಗಳಿಂದ ಬಿಡಿಸಲು ಸಾಧ್ಯವಿಲ್ಲವೆಂದು ತಿಳಿದಿದ್ದ ಜನರ ನಡುವೆ ಬಂಜೆಯಲ್ಲ ಭಾರತಮಾತೆ, ಸಾವಿರಾರು ಶೂರಸುತರಿರುವ ನೆಲ ಇದು ಎಂದು ತೋರಿಸಿದ ಅದಮ್ಯ ಚೇತನ ವಾಸುದೇವ ಬಲವಂತ ಫಡಕೆ. ಸಂಸ್ಕಾರವಂತ ಬ್ರಾಹ್ಮಣ ಮನೆಯಲ್ಲಿ ಹುಟ್ಟಿದ್ದರೂ, ಹೊರಟಿದ್ದು ಮಾತ್ರ ಶಸ್ತ್ರ ಹಿಡಿದು ಭಾರತ ಮಾತೆಯನ್ನು ಬಂಧಮುಕ್ತಗೊಳಿಸುವೆಡೆಗೆ.

ಮುಂಬೈ ಹತ್ತಿರದ ಶಿರಡೋಣ ಎಂಬಲ್ಲಿ 1845 ರ ನವೆಂಬರ್ 4 ರಂದು ಬಲವಂತರಾವ್ ಫಡಕೆ ಹಾಗೂ ಸರಸ್ವತಿ ಬಾಯಿ ದಂಪತಿಗೆ ಜನಿಸಿದ ವಾಸುದೇವ ಫಡಕೆ, ಬಾಲ್ಯದಿಂದಲೂ ಕ್ಷಿಪ್ರ ಕೋಪಿಷ್ಟ. ಅಜ್ಜನಿಂದ ದೇಶಭಕ್ತಿಯ ಕಥೆಯನ್ನು ಕೇಳುತ್ತಾ ಬೆಳೆದ ವಾಸುದೇವನಿಗೆ ಹೇಗಾದರೂ ಮಾಡಿ ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಬೇಕೆಂಬ ಹಂಬಲವಿತ್ತು. 1859ರಲ್ಲಿ ತನ್ನ ಕಾಲೇಜು ಶಿಕ್ಷಣದ ನಂತರ ಪುಣೆಯ ಮಿಲಿಟರಿ ಫೈನಾನ್ಸ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು .ಬ್ರಿಟಿಷರ ಕೆಲಸವಾದ್ದರಿಂದ ಆತನ ಮನಸ್ಸಲ್ಲಿ ಕೀಳರಿಮೆ ಉಂಟಾಗಿ ಪ್ರತಿ ಬಾರಿಯೂ ದಾಸ್ಯದ ವಿಮೋಚನೆಗಾಗಿ ಚಡಪಡಿಸುತ್ತಿತು.

ಇದನ್ನೂ ಓದಿ : ಕ್ರಾಂತಿಯ ಕಿಡಿ ಹಚ್ಚಿದ ರಾಜ್‌ಗುರು, ಬದುಕಿದ್ದು ಕೇವಲ 22 ವರ್ಷ!

ಇದೇ ಸಮಯಕ್ಕೆ ವಾಸುದೇವ ಫಡಕೆಯವರ ತಾಯಿಯ ಆರೋಗ್ಯ ತೀರ ಹದಗೆಟ್ಟಿತು. ತಾಯಿಯನ್ನು ನೋಡಲು ಕೆಲಸಕ್ಕೆ ರಜೆ ಕೇಳಿದ ಇವರು, ಬ್ರಿಟಿಷ್ ಅಧಿಕಾರಿಗಳ ದಯೆಯಿಂದ ರಜೆ ಸಿಗುವ ವೇಳೆಗಾಗಲೇ ವಾಸುದೇವನ ತಾಯಿ ತೀರಿಕೊಂಡಿದ್ದರು. ತನ್ನ ತಾಯಿಗೆ ಅಂತಿಮ ವಿದಾಯ ಸಲ್ಲಿಸದಂತೆ ಮಾಡಿದ್ದ ಬ್ರಿಟಿಷರ ವಿರುದ್ಧ ಅವರು ಘರ್ಜಿಸಿದ್ದರು. ‘ಇವರು ನನ್ನ ತಾಯಿ ಅಷ್ಟೇ ಅಲ್ಲ, ಭಾರತ ಮಾತೆಯಿಂದಲೂ ನಮ್ಮೆಲ್ಲರನ್ನು ದೂರ ಮಾಡುತ್ತಿದ್ದಾರೆ’ ಎಂದು ಬ್ರಿಟಿಷರ ವಿರುದ್ದ ಸಿಡಿದು ನಿಂತು ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದರು. ಭಾರತೀಯರ ಎಲ್ಲ ಸಂಕಷ್ಟಗಳಿಗೆ ಶಿಕ್ಷಣದ ಕೊರತೆಯೇ ಕಾರಣ ಎಂಬುದನ್ನರಿತು, “ಪೂಣಾ ನೇಟಿವ್ ಇಸ್ಟಿಟ್ಯೂಷನ್’” ಎಂಬ ವಿದ್ಯಾಕೇಂದ್ರವನ್ನು ಸ್ಥಾಪಿಸಿದರು. ಇದೇ ಮುಂದೆ ‘ಮಹಾರಾಷ್ಟ್ರ ಎಜುಕೇಶನ್ ಸೊಸೈಟಿʼ ಯಾಗಿ ಬೆಳೆಯಿತು.

ಕಾನೂನಾತ್ಮಕ ಹೋರಾಟದಿಂದ ಬ್ರಿಟಿಷರನ್ನು ಓಡಿಸುವುದು ಅಸಾಧ್ಯವೆಂಬುದನ್ನರಿತ ವಾಸುದೇವ ಬಲವಂತ ಫಡಕೆ ಸಶಸ್ತ್ರ ಕ್ರಾಂತಿಯ ದಾರಿಯನ್ನು ನಂಬಿದರು. ಅರಣ್ಯವಾಸಿಗಳಾದ ರಾಮೋಶಿ ಸಮುದಾಯವನ್ನು ಸಂಘಟಿಸಿ ಬ್ರಿಟಿಷರ ಮೇಲೆರಗಿದರು. ಫಡಕೆಯವರ ಸಶಸ್ತ್ರ ಬಂಡಾಯಕ್ಕೆ ನಲುಗಿದ ಬ್ರಿಟಿಷ್ ಸರ್ಕಾರ ಇವರ ಬಂಧನಕ್ಕೆ ಮುಂದಾಯಿತು. ಆದರೆ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡ ಫಡಕೆ ಕ್ರಾಂತಿಕಾರಿ ಚಟುವಟಿಕೆ ಮುಂದುವರಿಸಿದರು. ಇದರಿಂದ ಕಂಗೆಟ್ಟ ಸರ್ಕಾರ ವಾಸುದೇವ ಫಡಕೆಯನ್ನು ಹಿಡಿದು ಕೊಟ್ಟವರಿಗೆ ನಾಲ್ಕು ಸಾವಿರ ರೂಪಾಯಿಗಳ ಬಹುಮಾನ ಘೋಷಿಸಿತು. ಆದರೆ ತನ್ನ ಜೀವಕ್ಕೆ ಬೆಲೆ ಕಟ್ಟಿದ ಗವರ್ನರ್ ಮತ್ತು ಜಿಲ್ಲಾಧಿಕಾರಿಯನ್ನು ಕೊಂದವರಿಗೆ ದುಪ್ಪಟ್ಟು ಹಣ ಕೊಡುವುದಾಗಿ ಘೋಷಿಸಿದರು ಫಡಕೆ. ಈ ಘೋಷಣೆ ಮೂಲಕ ತಾನು ಎಂಟೆದೆ ಬಂಟನೆಂದು ವಿಶ್ವಕ್ಕೇ ತಿಳಿಯುವಂತೆ ಮಾಡಿದ್ದರು ವಾಸುದೇವ ಬಲವಂತ ಫಡಕೆ !

ಅಂದಿನ “ಅಮೃತ ಬಜಾರ್” ಪತ್ರಿಕೆ ಫಡಕೆಯವರನ್ನು “ಹಿಮಾಲಯದ ಉತ್ತುಂಗ ಪುರುಷ” ಎಂದು ಗೌರವಿಸಿ ಬರೆದಿತ್ತು. ಇಂಗ್ಲೆಂಡಿನ ಪ್ರಸಿದ್ಧ ಪತ್ರಿಕೆ ‘ಲಂಡನ್ ಟೈಮ್ಸ್ʼ ನಲ್ಲೂ ಫಡಕೆಯ ಶೌರ್ಯದ ಬಗ್ಗೆ ವರ್ಣಿಸಲಾಗಿತ್ತು. ಇದನ್ನು ಸೂರ್ಯಮುಳುಗದ ಸಾಮ್ರಾಜ್ಯಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ. ಹೇಗಾದರೂ ಮಾಡಿ ಈತನನ್ನು ಹಿಡಿದು ಶಿಕ್ಷಿಸಲೇಬೇಕೆಂಬುವುದು ಬ್ರಿಟಿಷ್ ಸರ್ಕಾರದ ಕಟ್ಟಪ್ಪಣೆಯಾಯಿತು. 1800 ಸೈನಿಕರ ಅತ್ಯಂತ ಬಲಿಷ್ಠ ತಂಡ ಬ್ರಿಟಿಷ್ ಅಧಿಕಾರಿ ಡೇನಿಯಲ್ ಎಂಬಾತನ ನೇತೃತ್ವದಲ್ಲಿ ವಾಸುದೇವನ ಬೇಟೆಗೆ ಹೊರಡಿತ್ತು. ಡೇನಿಯಲ್ ಸೇನೆಗೆ ಸಿಂಹ ಸ್ವಪ್ನವಾಗಿದ್ದ ವಾಸುದೇವ, ಅವರಿಗೆ ಮಣ್ಣು ಮುಕ್ಕಿಸಿ ಹೋಗಿದ್ದ. ಆದರೆ ವಿಶ್ವಾಸಘಾತುಕರು ವಾಸುದೇವನ ಗುಪ್ತ ಸ್ಥಳದ ಮಾಹಿತಿಯನ್ನು ಬ್ರಿಟಿಷರಿಗೆ ನೀಡಿದ್ದರು. ನಿರಾಯುಧನಾಗಿದ್ದ ಫಡಕೆಯನ್ನು ಡೇನಿಯಲ್ ರಾತ್ರಿ ಸಮಯದಲ್ಲಿ ಮೋಸದಿಂದ ಹಿಡಿದು ತಮ್ಮ ನರಿ ಬುದ್ದಿಯನ್ನು ಪ್ರದರ್ಶಿಸಿದ್ದರು.

ಬ್ರಿಟಿಷರ ವಿರುದ್ಧ ಕ್ರಾಂತಿ ಸಮರ ಸಾರಿದ್ದ ಈ ಮಹಾನ್ ವೀರಪುರುಷನನ್ನು ನೋಡಲು ಜನರು ಪುಣೆಯಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದರು. ಜನರೆಲ್ಲ ವಾಸುದೇವ ಫಡಕೆಯವರ ಹೆಸರಿನಲ್ಲಿ ಘೋಷಣೆ ಕೂಗಲಾರಂಭಿಸಿದರು. ಒಬ್ಬನಿಂದ ಶುರುವಾದ ಘೋಷಣೆ ಬರುಬರುತ್ತಾ ಸಾಗರದ ತೆರೆಯಂತೆ ಇಡೀ ಪುಣೆಯಲ್ಲಿ ಪ್ರತಿಧ್ವನಿಸಿತು. ಈ ಕ್ರಾಂತಿಕಾರಿ ವೀರನ ಮೇಲೆ ಹಲವು ಮೊಕದ್ದಮೆ ಹೂಡಿ ಜೀವಾವಧಿ ಶಿಕ್ಷೆ ವಿಧಿಸಿ ದೂರದ ಈಡನ್ ಜೈಲಿಗೆ ಕಳುಹಿಸಲಾಯಿತು. ಜೈಲಿನಲ್ಲಿ ವಾಸುದೇವನಿಗೆ ಬ್ರಿಟಿಷರು ಚಿತ್ರಹಿಂಸೆ ನೀಡಿ ಅತ್ಯಂತ ಕೀಳಾಗಿ ನಡೆಸಿಕೊಂಡರು. ಕಾಲಕ್ರಮೇಣ ವಾಸುದೇವನ ಧೃಡಕಾಯ ಕೃಶವಾಯಿತು. ದೇಶಕಾರ್ಯದಲ್ಲಿ ದಣಿಯದ ಅಜಾನುಬಾಹು ನಿತ್ರಾಣವಾಗಿ ಅಸ್ತಿಪಂಜರವಾಯಿತು. 1883ರ ಫೆಬ್ರವರಿ 17 ರಂದು ವಾಸುದೇವ ಬಲವಂತ ಫಡಕೆಯೆಂಬ ಚೇತನವೊಂದು ಭಾರತಮಾತೆಯ ಮಡಿಲಿನಲ್ಲಿ ಕೊನೆಯುಸಿರೆಳೆಯಿತು

ಕೇವಲ 38 ವರ್ಷಕ್ಕೆ ದೇಶದ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಮರೆಯಾದ ಮಹಾನ್ ಚೇತನ ಫಡಕೆ. ಬಾಲಗಂಗಾಧರ್ ತಿಲಕ್ ಅವರಿಗೆ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಿದ ವೀರನ ಬದುಕನ್ನು ಇಂದಿನ ಯುವಜನತೆ ಆಧುನಿಕತೆಯ ಮೋಹಕ್ಕೆ ಮರುಳಾಗಿ ಮರೆತುಬಿಟ್ಟಿದೆ. ಮತ್ತೆ ನೆನೆಯೋಣ, ನೆನಪಿಸೋಣ ದೇಶಕ್ಕಾಗಿ ಬದುಕನ್ನೇ ಬಲಿಕೊಟ್ಟ ಇಂತಹ ಕ್ರಾಂತಿಯ ಕಿಡಿಗಳನ್ನ….

ಸುರೇಶ್ ರಾಜ್
ವಿವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here