ಬೆಂಗಳೂರು, ಅ 11: ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸದಿದ್ದರೆ ಮಂಗಳವಾರ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಅದಲ್ಲದೆ ಹಲವಾರು ಶಿಕ್ಷಕರಿಗೆ ಕೊರೋನಾ ಸೋಂಕು ತಗುಲಿದ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಾಲೆಗಳಿಗೆ, ಶಿಕ್ಷಕರಿಗೆ ಮಧ್ಯಂತರ ರಜೆ ಘೋಷಣೆ ಮಾಡಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು, ಅಕ್ಟೋಬರ್ 12 ರಿಂದ ಮೂರು ವಾರಗಳ ಕಾಲ ಅಂದರೆ 30/10/2020 ವರೆಗೆ ಮಧ್ಯಂತರ ರಜೆ ಘೋಷಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಮತ್ತು ವಿದ್ಯಾಗಮ ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಲಾಗಿದೆ.ಹಲವಾರು ಶಿಕ್ಷಕರು ಕೋವಿಡ್ ಸೋಂಕಿಗೆ ಒಳಗಾಗಿರುವುದರಿಂದ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ದಿನಾಂಕ 12-10-2020 ರಿಂದ 30-10-2020 ರವರೆಗೆ ಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಲು ಮುಖ್ಯಮಂತ್ರಿ @BSYBJP ಆದೇಶಿಸಿದ್ದಾರೆ pic.twitter.com/uigK7gHhQo
— CM of Karnataka (@CMofKarnataka) October 11, 2020
“ನನ್ನ ಪ್ರೀತಿಯ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವರ್ಗದವರಿಗೆ ಮುಂಚಿತವಾಗಿ ದಸರಾ ಹಬ್ಬದ ಶುಭಾಶಯಗಳು” ಎಂದು ಬಿ. ಎಸ್. ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಳೆಯಿಂದ(ಅ.12) ಮೂರು ವಾರಗಳ ರಜೆ ಆರಂಭವಾಗಲಿದೆ.
ಕೋವಿಡ್ 19 ಸೋಂಕಿನ ಹಿನ್ನಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಆರಂಭಿಸಲು ಮತ್ತು ವಿದ್ಯಾಗಮ ಕಾರ್ಯಕ್ರಮವನ್ನು ಸಹ ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಲಾಗಿದೆ ಎಂದು ಯಡಿಯೂರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರ ಶಾಲೆಗಳಿಗೆ ನೀಡಲಾಗುತ್ತಿದ್ದ ದಸರಾ ರಜೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಈಗ ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿಗುತ್ತಿರುವ ಹಿನ್ನಲೆಯಲ್ಲಿ ಮೂರು ವಾರಗಳ ರಜೆಯನ್ನು ನೀಡಲಾಗಿದೆ.