ಶಿಕ್ಷಣದಿಂದ ಸ್ವಾತಂತ್ರ್ಯ – ಎಂಬ ಗುರುಗಳ ಮಾತಿನ ಅಂತರಾರ್ಥ

0
188
Tap to know MORE!

“ಬದುಕು ನಿಂತ ನೀರಾಗಬಾರದು ನಿರಂತರ ಹರಿಯುತ್ತಿರಬೇಕು.ಮತ ಯಾವುದಾದರೇನಂತೆ ಮನುಷ್ಯ ಒಳ್ಳೆಯವನಾದರೆ ಸಾಕು.ವಿದ್ಯೆಯಿಂದ ಪ್ರಬುಧ್ದರಾಗಿ ಸಂಘಟನೆಯಿಂದ ಬಲಯುತರಾಗಿ” ಎನ್ನುವಂತಹ ಅಮೂಲ್ಯವಾದ ಮಾತುಗಳಿಂದ ಸಮಾಜದಲ್ಲಿನ ಅನಿಷ್ಟ ಪಧ್ಧತಿಗಳನ್ನು ತೊಡೆದುಹಾಕಲು ಮೌನಕ್ರಾಂತಿಯನ್ನು ಮಾಡಿ ಜನಮಾನಸದಲ್ಲಿ ಗುರುಗಳಾಗಿ ಉಳಿದ ನಾರಾಯಣ
ಗುರುಗಳು ವಿದ್ಯೆಗೆ ಮೊದಲ ಪ್ರಾಮುಖ್ಯತೆಯನ್ನು ನೀಡಿ ವಿದ್ಯೆಯಿಂದ ಸ್ವತಂತ್ರರಾಗಿ ಎಂದು ಶಿಕ್ಷಣದ ಮಹತ್ವವನ್ನು ಎಲ್ಲೆಡೆ ಸಾರಿ ಸರ್ವಶಿಕ್ಷಣಕ್ಕೆ ಒತ್ತು ನೀಡಿದವರು.ಚೆಂಬಳಂತಿಯೆಂಬ ಗ್ರಾಮದಲ್ಲಿ ಜನಿಸಿದ ಇವರು ಕೇರಳದೆಲ್ಲೆಡೆಯೂ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣೀಕರ್ತರಾದರು.ವಿದ್ಯೆಯೆಂಬುದು ಕೇವಲ ಜ್ಞಾನದ ಬಂಡಾರಲ್ಲ.ವಿದ್ಯೆಯಿಂದ ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುಧ್ಧಿಯಾಗುತ್ತದೆ ಎಂಬುದನ್ನು ಅವರು ಬಲವಾಗಿ ನಂಬಿದ್ದರು.ನಮ್ಮಂತೆಯೇ ಇತರರೂ ಎಂದು ತಿಳಿದು ನಡೆಯುವುದು,ಉತ್ತಮವಾದ ನೈತಿಕತೆ,ನಿಸ್ವಾರ್ಥತೆ,ಸಮಾನತೆ ಹೀಗೆ ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಎನ್ನುವುದು ಅವರ ಆಶಯವಾಗಿದೆ.

ಆದರೆ ಇಂದಿನ ಸಮಾಜದಲ್ಲಿ ವಿದ್ಯೆಯು ಗುರುಗಳು ಆಶಿಸಿದಂತೆ ಮಾನವೀಯ ಮೌಲ್ಯಗಳನ್ನು ಹೊಂದಿರದೆ ಕೇವಲ ಹಣ,ಹೆಸರು ಮಾಡುವ ವಸ್ತುವಾಗಿದೆ.ಮನುಷ್ಯತ್ವವನ್ನೇ ಮರೆತುಹೋದ ಆಧುನಿಕತೆಗೆ ಮರುಳಾಗಿ ಕೇವಲ ಅಂಕಗಳಿಗೆ ಸೀಮಿತವಾದ ವಿಷಯವಾಗಿದೆ.

ಹೌದು…!

ಸಮಾಜ ಬದಲಾಗುತ್ತಿರುವ ಜೊತೆಗೆ ಶಿಕ್ಷಣದ ವ್ಯವಸ್ಥೆಯೂ ಬದಾಲಾಗುತ್ತಿರುವುದು ಅಷ್ಟೇ ಸತ್ಯ.ಬೆಳವಣಿಗೆಯ ಹಾದಿಯತ್ತ ನಡೆಯುವಾಗ ಬದಲಾವಣೆ ಎಂಬುದು ಸಹಜ.ಆದರೆ ಕೇವಲ ಬದಲಾವಣೆಗೆ ಮಹತ್ವವನ್ನು ಕೊಟ್ಟು ನಾವು ಇಂದು ಮಾನವೀಯತೆ,ಜೀವನಶೈಲಿ,ಆಚಾರ,ಸಂಸ್ಕೃತಿಯನ್ನೆ ಹಾಳುಗೆಡುವುದು ಎಷ್ಟು ಸರಿ?

ನಾವಿಂದು ಯೋಚಿಸಬೇಕಾಗಿದೆ.ಸಮಾಜದಲ್ಲಿ ಮನುಷ್ಯ- ಮನುಷ್ಯರ ಸಂಬಂಧ ಹಳಸುತ್ತಿದೆ,ಗೆಳೆಯರ ಒಡನಾಟ ಇಲ್ಲವಾಗಿದೆ,ಹೆತ್ತವರ ಪ್ರೀತಿಯನ್ನು ಕಡೆಗಣಿಸುತ್ತಿರುವುದು,ಇಲ್ಲದ ಪ್ರೀತಿಯ ನೆಪದಲ್ಲಿ ಪ್ರೀತಿ – ಪ್ರೇಮ ಎಂದು ಪ್ರಾಣ ಕಳೆದುಕೊಳ್ಳುವ ಸ್ಥಿತಿ,ಮೋಸ-ವಂಚನೆಯು ಹೆಚ್ಚುತ್ತಿದೆ,ಎಲ್ಲೆಡೆಯೂ ಅತ್ಯಾಚಾರದ ಸದ್ದು,ಮತೀಯ ಗಲಭೆ,ಸಂಪ್ರದಾಯ ಆಚರಣೆಗಳನ್ನು ಮರೆಯುತ್ತಿರುವ ಇಂದಿನ ಆಧುನಿಕತೆ,ಇದಕ್ಕೆಲ್ಲಾ ಕಾರಣ ನಾವಿರುವ ಪರಿಸರವೆ?ಅತೀ ನಾಗರಿಕತೆಯಾದ ಅಂತರ್ಜಾಲದ ದುರ್ಬಳಕೆಯೆ?ಶಿಕ್ಷಣ ಕ್ಷೇತ್ರವೆ?ಆಧುನಿಕ ಜೀವನಶೈಲಿಯೆ?ಸಾಮಜಿಕ ಜಾಲತಾಣಗಳ ಪ್ರಭಾವವೆ?ಎಂದು ಯೋಚಿಸಿದಾಗ ಎಂಬಿತ್ಯಾದಿ ಪ್ರಶ್ನೆಗಳು ಪುಟಿದೇಳುತ್ತವೆ.

ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣವೆಂದರೆ ನಮ್ಮಲ್ಲಿ ಸೃಜನಶೀಲತೆ,ವೈಚಾರಿಕತೆ,ಹಿರಿಯರನ್ನು ಗೌರವಿಸುವುದು,ಎಲ್ಲರೊಡನೆ ಬೆರೆಯುವುದು,ಸಹಾಯ ಮಾಡುವ ಗುಣ,ನಾಯಕತ್ವ,ಸ್ವಾವಲಂಬಿ ಜೀವನ ನಡೆಸಲು ಆತ್ಮವಿಶ್ವಾಸ,ಸ್ಪರ್ಧಾತ್ಮಕವಾಗಿ ಕೌಶಲ್ಯಗಳನ್ನು ಕರಗತಗೊಳಿಸುವ ಜ್ಞಾನ,ವೃತ್ತಿಯಲ್ಲಿ ಪ್ರೀತಿ ಮುಂತಾದ ಗುಣಗಳನ್ನು ಮೈಗೂಡಿಸಿಕೊಳ್ಳುವ ಶಿಕ್ಷಣದ ಅಗತ್ಯತೆ ನಮಗಿಂದು ಬೇಕಾಗಿದೆ.
ಬದಲಾವಣೆ ಆಧುನಿಕತೆ ಎಂಬುದರ ನಡುವೆ ಇಂದಿಗೂ ಕೂಡ ನಮ್ಮೆಡೆಯಲ್ಲಿಯೇ ನಡೆಯುತ್ತಿರುವ ಭೇದ – ಭಾವ,ಮೇಲು – ಕೀಳೆಂಬ ಭಾವನೆಗಳು,ಅದೆಲ್ಲೋ ಹಸಿವಿಗಾಗಿ ತನ್ನ ವ್ಯವಹಾರದ ಊಟವನ್ನೇ ಉಂಡಾಗ ಮನುಷ್ಯತ್ವವನ್ನೂ ಮರೆತು ಆ ವ್ಯಕ್ತಿಯನ್ನು ಕೊಲ್ಲುವ ನೀಚ ಸಮಾಜ,ಜವಾಬ್ದಾರಿಯೊತ್ತ ತಂದೆ ತನ್ನ ಮಗನಿಗೆ ಜಾಸ್ತಿ ಮೊಬೈಲ್ ಬಳಕೆ ಮಾಡಬೇಡ ಮಗಾ ಎಂದು ಬುದ್ದಿ ಹೇಳ ಹೋದರೆ ಚಾಕುವಿನಲ್ಲಿ ಹೊಟ್ಟೆ ಸೀಳಿ,ಕತ್ತು ಇರಿಯುವ ಮಗ,ತಾಯಿಯನ್ನೇ‌ ಬೀದಿಬದಿ ತಳ್ಳುವ ಆಚಾರವಿಲ್ಲದ ಮಕ್ಕಳು,ವಂಚನೆ,ಮೋಸ,ನಂಬಿಕೆದ್ರೋಹ,ಗಾಂಜಾ ಡ್ರಗ್ಸ್ ಕುಡಿತದ ದಾಸರಾಗಿ ಕೇವಲ ಹಣಕ್ಕಾಗಿ ಕೊಲೆ ಮಾಡುವುದು,ಅತ್ಯಾಚಾರ ಮಾಡಿ ಸುಟ್ಟು ಹಾಕುವ ಕಾಮುಕರು,ಎಲ್ಲೆಂದರಲ್ಲಿ ದರೋಡೆ,ಮೂಕಪ್ರಾಣಿ ಆನೆಗೆ ಹಣ್ಣಿನಲ್ಲಿ ಬಾಂಬ್ ಇಟ್ಟು ತಿನ್ನಲು ಕೊಡುವ ಮಾನವ ರೂಪಿ ರಾಕ್ಷಸರು,ಹಲವು ರೀತಿಯ ಮನಸ್ಥಿತಿಗಳು ರಾರಾಜಿಸುತ್ತಿದೆ.ಇವೆಲ್ಲ ನಡೆಯುತ್ತಿರುವುದು ಅತೀಯಾದ ಶಿಕ್ಷಣವನ್ನು ಪಡೆಯುತ್ತಿರುವ ನಮ್ಮೀ ಸಮಾಜದಲ್ಲಿಯೇ.ಈ ರೀತಿಯ ನಡತೆಗಳು ಬದಾಲಾಗಬೇಕಾಗಿದೆ.ಸೌಲಭ್ಯಗಳು ಹೆಚ್ಚಿದಂತೆಲ್ಲಾ ಮಾನವ ಯಂತ್ರದಂತಾಗುತ್ತಾನೆ.ಮಾನವೀಯತೆಯನ್ನೇ ಮರೆತ ಸಮಾಜ ಸೃಷ್ಟಿಯಾಗಿದೆ.

ಶಿಕ್ಷಣವೆಂಬುದು ಕೇವಲ ಜ್ಞಾನವಲ್ಲ;ಅದು ಮನಸ್ಸು ತುಂಬುವ ಸಾಧನವಾಗಬೇಕು.ಶಿಕ್ಷಣದಿಂದ ಅತೀ ಬುಧ್ದಿವಂತರೂ ಆಗಬಹುದು,ಅತೀದಡ್ಡರೂ ಆಗಬಹುದು,ಅದಕ್ಕೇ ವ್ಯಾಟನ್ನವರು ಅಂದಿರುವುದು, “ನಾವು ಕೊಡುವ ಶಿಕ್ಷಣದಿಂದ ಮೂರು ವರ್ಷದ ಮಗುವನ್ನು ದೇಶಭಕ್ತನನ್ನಾಗಿಯೂ ಮಾಡಬಹುದು,ದರೋಡೆಕೋರನನ್ನಾಗಿಯೂ ಮಾಡಬಹುದು” ಎಂದು.ಇಂದಿನ ಬದಲಾಗುತ್ತಿರುವ ಸಮಾಜದಲ್ಲಿ ಕೇವಲ ಬದಲಾವಣೆಗೆ ಒತ್ತುಕೊಟ್ಟು ಆಧುನಿಕತೆಗೆ ಮರುಳಾಗಿ ಮೇಲೆ ಇಲ್ಲದ ಸ್ವರ್ಗಕ್ಕೆ ಹಾರುವ ಅವಿವೇಕಿಗಳಾಗದೆ, ನಮ್ಮತನವನ್ನು,ಮನುಷ್ಯತ್ವವನ್ನು ಉಳಿಸಿಕೊಳ್ಳುವ ಬಗೆಗೆ ಜಾಗರತರಾಗುವುದು ಅಗತ್ಯವಾಗಿದೆ.ಆಗ ಮಾತ್ರ ಎರಡು ಕಾಲಿನ ಪ್ರಾಣಿಯನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವುದೇ ಶಿಕ್ಷಣ ಎಂಬ ಗುರುಗಳ ಸಂದೇಶ ಅರ್ಥಪೂರ್ಣವಾಗುತ್ತದೆ.ಆಗ ಮಾತ್ರ ಶಿಕ್ಷಣದಿಂದ ಸ್ವತಂತ್ರರಾಗಬಹುದಾಗಿದೆ.
     

ಬರಹ :- ✒  ರಾಜಶ್ರೀ ಜೆ ಪೂಜಾರಿ

LEAVE A REPLY

Please enter your comment!
Please enter your name here