ಶಿಕ್ಷಣ ಕ್ಷೇತ್ರದ ಲೋಪದಿಂದ ಜನರ ನಡುವೆ ಕಂದಕ: ಪ್ರೊ. ಚಿನ್ನಪ್ಪ ಗೌಡ

0
167
Tap to know MORE!

ಮಂಗಳೂರು: ಸೇವಾ ಕ್ಷೇತ್ರವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದಿಂದ ಸಮಾಜದಲ್ಲಿ ಜನರ ನಡುವೆ ಕಂದಕ ನಿರ್ಮಾಣವಾಗಿದೆ. ಮಾನವ ಸಂಪನ್ಮೂಲದ ಸದ್ವಿನಿಯೋಗವಾಗದೆ, ಅರಿವಿನ ಹಂಚಿಕೆಯಾಗದೆ, ವಿಜ್ಞಾನ ನಮ್ಮನ್ನು ಆಳಿದರೆ ಅದು ಒಳ್ಳೆಯ ಲಕ್ಷಣವಲ್ಲ ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಶನಿವಾರ ನಡೆದ 152 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಅಗತ್ಯ ಮತ್ತು ಆಧ್ಯತೆಗೆ ತಕ್ಕಂತೆ ಸಂಪನ್ಮೂಲದ ಬಳಕೆಯಾಗಬೇಕು. ಮಾನವಿಕ ವಿಭಾಗಕ್ಕೂ ಸೂಕ್ತ ಮಾನ್ಯತೆ ಸಿಗಬೇಕು, ಎಂದ ಅವರು ನೂತನ ಶಿಕ್ಷಣ ಪದ್ಧತಿ ಜಾರಿಯಾದರೆ ಮುಂದಿನ ಒಂದು ದಶಕದಲ್ಲಿ ದೇಶದ ಶಿಕ್ಷಣ ಪದ್ಧತಿಯಲ್ಲಿ ಧನಾತ್ಮಕ ಬದಲಾವಣೆಗಳಾಗುವ ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ನೂತನ ಶಿಕ್ಷಣ ಪದ್ಧತಿ ಜಾರಿಯಾಗುವುದರಲ್ಲಿ ಯಾರಿಗೂ ಸಂದೇಹ ಬೇಡ, ಎಂದರು. ಇದೇ ವೇಳೆ ಕಾಲೇಜಿನ 150 ನೇ ವರ್ಷದ ಅಂಗವಾಗಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ನಡಾವಳಿಯ ಗ್ರಂಥರೂಪವನ್ನು ಗಣ್ಯರು ಬಿಡುಗಡೆಗೊಳಿಸಿದರು. ಕಾಲೇಜಿನ ನೂತನ ಪ್ರವೇಶ ಧ್ವಾರವನ್ನು ಕುಲಪತಿಗಳು ಲೋಕಾರ್ಪಣೆಗೊಳಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್‌ ಶರತ್‌ ಭಂಡಾರಿ, ಮಂಗಳೂರು ವಿವಿಯ ಸಿಂಡಿಕೇಟ್‌ ಮಂಡಳಿ ಸದಸ್ಯ ರವಿಚಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಎ. ಹರೀಶ್‌ ಅತಿಥಿಗಳನ್ನು ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಲತಾ ಎ ಪಂಡಿತ್‌ ಮತ್ತು ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ . ಕುಮಾರ ಸುಬ್ರಹ್ಮಣ್ಯ ಭಟ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭಾ ಪುರಸ್ಕಾರ
ಸಂಸ್ಥಾಪನಾ ದಿನಾಚರಣೆಯ ಸಂಧರ್ಭದಲ್ಲೇ ಶೈಕ್ಷಣಿಕ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 2018-19 ನೇ ಸಾಲಿನ ಬಿ.ಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 10 ನೇ ರ‍್ಯಾಂಕ್‌ ಗಳಿಸಿದ ಕುಮಾರಿ ಶರಣ್ಯಾ ಡಿ.ಕೆ, ಅರ್ಥಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ಚಿನ್ನದ ಪದಕಕ್ಕೆ ಭಾಜನರಾಗಿರುವ ಪವನ್‌ ಕುಮಾರ್‌ ಆಚಾರ್ಯ, ಹಿಂದಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ವಿವಿ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಗಳಿಸಿದ ಕುಮಾರಿ ರಕ್ಷಿತಾ, ಯೋಗ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್‌ ಪಡೆದ ಡಾ. ವಿನಯ ಪೂರ್ಣಿಮಾ ಎಸ್‌ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here