ಶಿಕ್ಷಣ ನಮ್ಮ ಅಂತಃಶಕ್ತಿಯನ್ನು ಮುನ್ನಡೆಸುತ್ತದೆ: ಸ್ವಾಮಿ ಮಹಾಮೇಧಾನಂದಜಿ

0
197
????????????????????????????????????
Tap to know MORE!

ಮಂಗಳೂರು: ಜೀವನ ಮತ್ತು ಶಿಕ್ಷಣದ ಒಳನೋಟಗಳನ್ನು ಅರ್ಥಮಾಡಿಕೊಂಡರೆ ಮಾತ್ರ ಅವುಗಳ ಸದ್ಭಳಕೆ ಸಾಧ್ಯ. ನಾವು ವಿವೇಕಿಗಳಾದಾಗ ಮಾತ್ರ ರಾಕ್ಷಸತ್ವದಿಂದ, ಮನುಷ್ಯತ್ವ, ಬಳಿಕ ದೈವತ್ವದೆಡೆಗೆ ಸಾಗಲು ಸಾಧ್ಯ ಎಂದು ಚೆನ್ನೈನ ರಾಮಕೃಷ್ಣ ಮಠದ ‘ವೇದಾಂತ ಕೇಸರಿ’ ಮಾಸಪತ್ರಿಕೆಯ ಸಂಪಾದಕ ಸ್ವಾಮಿ ಮಹಾಮೇಧಾನಂದಜಿ ಹೇಳಿದರು.

ಸ್ವಾಮಿ ವಿವೇಕಾನಂದರ 159ನೇ ಜಯಂತಿಯ ಸಂದರ್ಭದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ರಾಮಕೃಷ್ಣ ಮಠ ಜಂಟಿಯಾಗಿ ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ನಮ್ಮ ಅಂತಃಶಕ್ತಿಯನ್ನು ಸರಿಯಾದ ದಿಕ್ಕಿಗೆ ಮುನ್ನಡೆಸುತ್ತದೆ, ಅಚಲ ನಿರ್ಧಾರಗಳನ್ನು ಸಾಧ್ಯವಾಗಿಸುತ್ತದೆ ಮತ್ತು ಅನುಭವದಿಂದ ಕಲಿಯುವಂತೆ ಮಾಡುತ್ತದೆ,” ಎಂದರು.

ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್‌, ಸ್ವಾಮಿ ವಿವೇಕಾನಂದರು ಆತ್ಮ ವಿಶ್ವಾಸ ಮತ್ತು ಯುವಶಕ್ತಿಯ ಪ್ರತೀಕ ಎಂದರು. ಮಂಗಳೂರು ಶಾಸಕ ಯು. ಟಿ ಖಾದರ್‌, ಇಂದಿನ ಅಗತ್ಯವಾದ ವಿವೇಕಾನಂದ ಅಧ್ಯಯನ ಕೇಂದ್ರ ಆರಂಭಿಸುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಮಾದರಿಯಾಗಿದೆ, ಎಂದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್‌, ಶಿಕ್ಷಣ ಆತ್ಮಸಾಕ್ಷಾತ್ಕಾರಕ್ಕೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ಭಾಷಣದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಪ್ರತಿ ವ್ಯಕ್ತಿಯ ಗುರಿಯನ್ನು ಆತನೇ ನಿರ್ಧರಿಸುತ್ತಾನೆ. ಯಶಸ್ಸಿಗೆ ನಮಗೆ ಪ್ರಾಪಂಚಿಕ ಜ್ಞಾನದ ಜೊತೆಗೆ, ತನ್ನ ಬಗ್ಗೆಯೂ ತಿಳಿದಿರಬೇಕು. ಶಿಕ್ಷಣ ವ್ಯಕ್ತಿಯ ಏಳಿಗೆಯೊಂದಿಗೆ ದೇಶದ ಅಭಿವೃದ್ಧಿಗೆ ನೆರವಾಗಬೇಕು, ಎಂದು ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯ ವಿವೇಕಾನಂದ ಪಣಿಯಾಲ, ವಿವೇಕಾನಂದರ ಬರಹಗಳನ್ನು ಓದಿಕೊಂಡರೆ ಮಾತ್ರ ನಮಗೆ ಪೂರ್ವಾಗ್ರಹಗಳಿಂದ ಹೊರಬರಲು ಸಾಧ್ಯ, ಎಂದರು.

ಕುಲಸಚಿವ ಕೆ. ರಾಜು ಮೊಗವೀರ (ಕೆ.ಎ.ಎಸ್‌), ಅಧ್ಯಯನ ಕೇಂದ್ರದ ಸ್ಥಾಪನಾ ಸಮಿತಿಯ ಸದಸ್ಯರಾದ ಕೆ. ರಮೇಶ್‌, ಪ್ರೊ. ಕೆ. ಕೃಷ್ಣ ಶರ್ಮ, ಪ್ರೊ. ಸೋಮಣ್ಣ ಹಾಗೂ ಡಾ. ಚಂದ್ರ ಹೆಗಡೆ, ಸಿಂಡಿಕೇಟ್‌ ಸದಸ್ಯರು ಉಪಸ್ಥಿತರಿದ್ದರು. ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್‌ ಧರ್ಮ ಅತಿಥಗಳನ್ನು ಸ್ವಾಗತಿಸಿದರು. ರಾಮಕೃಷ್ಣ ಮಠದ ರಂಜನ್‌ ಬೆಳ್ಳರ್ಪಾಡಿ ಧನ್ಯವಾದ ಸಮರ್ಪಿಸಿದರು. ಡಾ. ಪ್ರೀತಿ ಕೀರ್ತಿ ಡಿʼಸೋಜ ಮತ್ತು ಅಕ್ಷಯ್‌ ಹೆಗ್ಡೆ ನಿರೂಪಿಸಿದರು.

LEAVE A REPLY

Please enter your comment!
Please enter your name here