ಭಾರತ ಕೇಂದ್ರಿತ ಶಿಕ್ಷಣದತ್ತ ಹೊರಳುವುದೇ ನೂತನ ಶಿಕ್ಷಣ ನೀತಿ: ಪ್ರೊ. ಕಟ್ಟಿಮನಿ

0
187
Tap to know MORE!

ಮಂಗಳೂರು: ಇಂಡಿಯಾ ಶಿಕ್ಷಣದಿಂದ ಭಾರತ ಕೇಂದ್ರಿತ ಶಿಕ್ಷಣದತ್ತ ಹೊರಳುವುದೇ ರಾಷ್ಟ್ರೀಯ ಶಿಕ್ಷಣದ ಪ್ರಮುಖ ಉದ್ದೇಶ ಎಂದು ಆಂಧ್ರ ಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಪ್ರೊ. ಟಿ. ವಿ. ಕಟ್ಟಿಮನಿ ಅವರು ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಹಾಗೂ ಮಂಗಳೂರು ಮತ್ತು ಬೆಂಗಳೂರನ ಸೆಂಟರ್ ಫಾರ್ ಎಜುಕೇಶನಲ್ ಅಂಡ್ ಸೋಷಿಯಲ್ ಸ್ಟಡೀಸ್ ಸಹಯೋಗದಲ್ಲಿ ಸೋಮವಾರ, ವಿಶ್ವವಿದ್ಯಾನಿಲಯ ಕಾಲೇಜಿನ ನಡೆದ ರಾಷ್ಟ್ರೀಯ ಶಿಕ್ಷಣ ಪದ್ಧತಿ ಜಾರಿ ಕುರಿತಾದ ಕಾರ್ಯಾಗಾರದಲ್ಲಿ ಮಾತನಾಡಿದರು.

ಅಭಿವೃದ್ಧಿಯ ಜೊತೆ ಜೊತೆಗೆ ಇಡೀ ಸಮಾಜವನ್ನು ಉನ್ನತಿಯೆಡೆಗೆ ಕೊಂಡೊಯ್ಯುವಲ್ಲಿ ವಿಶ್ವವಿದ್ಯಾನಿಲಯಗಳು ಶ್ರಮಿಸಬೇಕಾಗುತ್ತದೆ. ಉಪನ್ಯಾಸಕ ವರ್ಗಕ್ಕೆ ಸಂಶೋಧನೆ ಕಡೆಗೆ ಪ್ರೋತ್ಸಾಹ ನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲೆ ಬಿಡುತ್ತಿರುವ ಮಕ್ಕಳು, ಮಹಿಳಾ ಶಿಕ್ಷಣ, ಗ್ರಾಮೀಣ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತದೆ. ಒಟ್ಟಾರೆ ಇದು ಬದುಕಿನ ಎಲ್ಲಾ ದೃಷ್ಟಿಕೋನಗಳ ಕುರಿತಾಗಿಯೂ ಮಾತನಾಡುತ್ತದೆ. ಮಕ್ಕಳಲ್ಲಿ ಕೌಶಲ್ಯಗಳನ್ನು ಬೆಳೆಸುವ ಜೊತೆ ಜೊತೆಗೆ ಉದ್ಯೋಗಾಧಾರಿತ, ತರಬೇತಿ ಕೇಂದ್ರಿತ ಬೋಧನೆ ವ್ಯವಸ್ಥೆಗೆ ಮಹತ್ವ ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಥಾವತ್ತಾಗಿ ಜಾರಿಗೊಳಿಸಿದ್ದೇ ಆದಲ್ಲಿ ಇಡೀ ಜಗತ್ತೇ ಭಾರತವನ್ನು ನೋಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಉನ್ನತ ಶಿಕ್ಷಣದಲ್ಲಿ ಬದಲಾವಣೆಯ ಮಾರ್ಗಸೂಚಿ ಎಂಬ ವಿಷಯದ ಕುರಿತು ಸಿಇಎಸ್ಎಸ್ ಕಾರ್ಯನಿರ್ವಾಹಕ ಮಂಡಳಿ ಸದಸ್ಯೆ ಡಾ. ಮಾನಸ ನಾಗಭೂಷಣ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ 12 ಸೂತ್ರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸಂಪೂರ್ಣವಾಗಿ ಕಲಿಕಾ ಕೇಂದ್ರಿತ ನೀತಿಯಾಗಿದ್ದು ಸಂಪೂರ್ಣವಾಗಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ನೀತಿಯನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.

ಮಕ್ಕಳು ಪ್ರತಿ ಹಂತದ ಶಿಕ್ಷಣದಲ್ಲೂ ಬಹುವಿಷಯಾಧಾರಿತವಾಗಿ ವೈಶಾಲ್ಯತೆಯಿಂದ ಕೂಡಿದ ಯಾವುದೇ ವಿಷಯವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲೂ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಶಿಕ್ಷಣದ ಹೇರಿಕೆ ಮತ್ತು ಬ್ಯಾಗ್ ತರುವ ಪದ್ಧತಿಗೆ ವಿರುದ್ಧವಾಗಿದ್ದು, ಮಕ್ಕಳು ಕೇವಲ ಚಟುವಟಿಕೆಗಳ ಮೂಲಕ ಕಲಿಕೆ ಪ್ರಾರಂಭಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಶಿಕ್ಷಣ ಹೊರೆಯಾಗಿ ಪರಿಣಮಿಸುವುದಿಲ್ಲ, ಎಂದು ವಿವರಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ಮಾತನಾಡಿ, ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ವಿಶ್ವವಿದ್ಯಾನಿಲಯ 9 ಸಮಿತಿಗಳನ್ನು ರಚಿಸಲಿದೆ. ಅದಕ್ಕೂ ಮೊದಲು ನೀತಿಯ ಕುರಿತು ಜಾಗೃತಿ ಮೂಡಿಸಲು ಸರಣಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು, ಕಾರ್ಯಸೂಚಿಯೊಂದಿಗೆ ಸವಾಲನ್ನು ಸಮರ್ಥವಾಗಿ ಎದುರಿಸಲು ಪೂರ್ವತಯಾರಿ ಮಾಡಿಕೊಳ್ಳಲಾಗುತ್ತಿದೆ, ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಪ್ರಭಾರ ಕುಲಸಚಿವ ಪ್ರೊ. ಪಿ.ಎಲ್. ಧರ್ಮ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರವಿ ಮಂಡ್ಯ, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಎ. ಉದಯ್ ಕುಮಾರ್, ಕಾರ್ಯಕ್ರಮದ ಪ್ರಧಾನ ಸಂಯೋಜಕ ಡಾ. ಗಣಪತಿ ಗೌಡ ಹಾಗೂ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.

LEAVE A REPLY

Please enter your comment!
Please enter your name here