ರಾಷ್ಟ್ರೀಯ ಶಿಕ್ಷಣ ನೀತಿ – 2020ನ್ನು ಜಾರಿಗೊಳಿಸುವ ಮೊದಲ ರಾಜ್ಯವಾಗಲಿದೆ ಕರ್ನಾಟಕ : ಸಿಎಂ ಯಡಿಯೂರಪ್ಪ

0
136
Tap to know MORE!

ಬೆಂಗಳೂರು : ಕೇಂದ್ರ ಸರ್ಕಾರದ ಉದ್ದೇಶಿತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕವೇ ಜಾರಿ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವ ಕುರಿತಂತೆ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ನೀಡಿರುವ ವರದಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.

ಈ ವರದಿಯನ್ನು ಸಂಪುಟದಲ್ಲಿ ಚರ್ಚೆ ಮಾಡಿ ನಂತರ ದೇಶದಲ್ಲೇ ಕರ್ನಾಟಕ ರಾಜ್ಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿದ ಮೊದಲ ರಾಜ್ಯವಾಗಲಿದೆ ಎಂದು ಹೇಳಿದರು. ಮೆಕಾಲೆ ಶಿಕ್ಷಣ ನೀತಿ ಬದಲಿಗೆ ನಮ್ಮದೇ ಆದ ಶಿಕ್ಷಣ ನೀತಿಯನ್ನು ದೇಶದಾದ್ಯಂತ ಅಳವಡಿಸಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಾಗಿದೆ. ಹೀಗಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಇದನ್ನು ಕರ್ನಾಟಕದಲ್ಲೂ ಆದಷ್ಟು ಶೀಘ್ರ ಜಾರಿ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಮುಂದಿನ ವರ್ಷದಿಂದ ಪ್ರತಿ ಗ್ರಾಮ ಪಂಚಾಯಿತಿಗೂ 1.5 ಕೋಟಿ ನೀಡಲು ಯೋಜನೆ : ನಳಿನ್ ಕುಮಾರ್

ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವುದರಿಂದ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಐದಾರು ಸಚಿವರ ತಂಡವನ್ನು ರಚನೆ ಮಾಡಲಾಗಿದ್ದು, ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದೇವೆ ಎಂದರು. ಗ್ರಾಪಂ ಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆ ಮೇಲೆ ನಡೆಯದೇ ಇದ್ದರೂ ಗೆದ್ದ ನಂತರ ಯಾರು ಯಾವ ಕಡೆ ಗುರುತಿಸಿಕೊಳ್ಳುತ್ತಾರೆ.

ಅಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಎಲ್ಲರಿಗೂ ತಿಳಿಯಲಿದೆ. ಜತೆಗೆ ಈ ಚುನಾವಣೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಂತೆ ಅತ್ಯಂತ ಮಹತ್ವದ್ದು. ನಮ್ಮ ಪಕ್ಷವನ್ನು ಬೇರುಮಟ್ಟದಿಂದ ಸಂಘಟನೆ ಮಾಡಲು ಅನುಕೂಲವಾಗಲಿದೆ. ಹೀಗಾಗಿ ಚುನಾವಣೆಗೆ ನಾನೂ ಕೂಡ ಹೆಚ್ಚು ಗಮನ ನೀಡಲಿದ್ದೇನೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡು ದಿನ ಕಾದುನೋಡಿ ಎಂದು ಕುತೂಹಲ ಕೆರಳಿಸಿದರು. ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಂಪುಟ ವಿಸ್ತರಣೆ ಆಗಲಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಎರಡು ದಿನ ಕಾದು ನೋಡಿ ಎಂದು ಹೇಳಿದರು

LEAVE A REPLY

Please enter your comment!
Please enter your name here