ಶಿಕ್ಷಣ ಸಂಘಟನೆ ಮತ್ತು ಹೋರಾಟದಿಂದ ಭಾರತ ಕಟ್ಟುವೆ

0
202

ಚಿಕ್ಕವಯಸ್ಸಿನಲ್ಲಿ ನನಗೆ ಯಾರಾದರೂ ನೀನು ಪ್ರಧಾನಮಂತ್ರಿ ಆದರೆ ಏನು ಮಾಡುತ್ತಿ…? ಎಂದು ಕೇಳಿದರೆ ಬಹುಶಃ ಆಗಿನ ಉತ್ತರವೇ ಬೇರೆ ಆಗಿರುತ್ತಿತ್ತೇನೋ.. ಆದರೆ ಸರಿಸುಮಾರು 26 ವರ್ಷಗಳ ಜೀವನಾನುಭವದ ನಂತರದಲ್ಲಿ ಈ ಪ್ರಶ್ನೆಗೆ ಉತ್ತರಿಸುವುದು ಸುಲಭದ ಕೆಲಸವಲ್ಲ.ಬಹುಶಃ ಉತ್ತರಗಳ ಒಂದು ದೊಡ್ಡ ಕಾದಂಬರಿಯೇ ನನ್ನಿಂದ ಬರಬಹುದೇನೋ ಆದರೂ ನನ್ನ ಆತ್ಮೀಯರ ಮಾತಿಗನುಗುಣವಾಗಿ ಕೇವಲ ಒಂದು ಬದಲಾವಣೆಯ ಕುರಿತಾಗಿ ನನ್ನ ಸಾವಿರ ಪದಗಳ ಮಿತಿಯಲ್ಲಿ ಉತ್ತರಿಸುವ ಪ್ರಯತ್ನ ಮಾಡುತ್ತಿದ್ದೇನೆ.

ರಾಜಕಾರಣಿಗಳನ್ನು ಟೀಕಿಸುವ ಅನೇಕರು ರಾಜಕೀಯಕ್ಕೆ ಬಂದ ನಂತರ ಅವರೇ ಟೀಕಿಸಿದ ಅಂಶಗಳನ್ನು ಮರೆತು ನಿಜವಾದ ರಾಜಕಾರಣಿ ಆಗಿಬಿಡುತ್ತಾರೆ. ನಿಜವಾಗಿಯೂ ನಾನು ಪ್ರಧಾನಿಯಾದರೆ ಆ ಸ್ಥಾನದ ಒತ್ತಡ,ಜವಾಬ್ದಾರಿ ಎಲ್ಲವೂ ಸೇರಿ ನಾನು ಏನು ಮಾಡಬೇಕು ಎಂಬ ಗೊಂದಲವನ್ನು ಸೃಷ್ಟಿಸಿಯೇ ಸೃಷ್ಟಿಸುತ್ತದೆ. ಆದರೂ ಈ ಕಲ್ಪನೆಯ ಪ್ರಧಾನ ಮಂತ್ರಿಯು ಬಯಸುವ ಬದಲಾವಣೆಗಳು ನನಗೆ ಅತಿಸುಲಭ ಎನಿಸಿದರೂ ನಿಜವಾದ ಪ್ರಧಾನಮಂತ್ರಿಗಳಿಗೆ ಅದು ಅಷ್ಟು ಸುಲಭವಾಗಿ ಇರುವುದಿಲ್ಲ ಎಂಬುದು ನನಗೂ ತಿಳಿದಿದೆ.

ಪೀಠಿಕೆ ಜಾಸ್ತಿ ಆಯ್ತು ಅಂತ ಗೊಣಗುವ ಮೊದಲು ವಿಷಯಕ್ಕೆ ಬಂದುಬಿಡುತ್ತೇನೆ ನಾನು ಪ್ರಧಾನಿ ಯಾದರೆ ನನ್ನ ಮೊದಲ ಪ್ರಾಶಸ್ತ್ಯ ಶಿಕ್ಷಣವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳ ಅಗತ್ಯ ಇದ್ದು ಸೂಕ್ಷ್ಮವಾಗಿ ಗಮನಿಸಿದಾಗ ಶಿಕ್ಷಣ ವ್ಯವಸ್ಥೆಯ ಲೋಪವೇ ಬೇರೆಲ್ಲ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ. ಬಾಲ್ಯದಿಂದಲೇ ತಂದೆ-ತಾಯಿಗಳು ಸಮಾಜ ತಮ್ಮ ಮಕ್ಕಳ ಮೇಲೆ ಒಳ್ಳೆಯ ಅಂಕ ಒಳ್ಳೆಯ ಕೆಲಸ ಒಳ್ಳೆಯ ಸಂಬಳ ಒಳ್ಳೆಯ ಜೀವನ ಎಂಬ ಒತ್ತಡವನ್ನು ಹಾಕುವುದರ ಮೂಲಕ ಅವರ ಸರ್ವತೋಮುಖ ಬೆಳವಣಿಗೆ ಆಗದಂತೆ ತಡೆಯಲಾಗುತ್ತಿದೆ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೇರಿದಂತೆ ಹಲವಾರು ವೃತ್ತಿಪರ ಕೋರ್ಸ್ ಗಳ ಶಿಕ್ಷಣ ಪಡೆಯಲು ಡೊನೇಶನ್ ಅಥವಾ ದಾನ ನೀಡುವುದು ಅತ್ಯಗತ್ಯವಾಗಿದ್ದು ಅದೇ ಮುಂದೆ ಮಕ್ಕಳು ಲಂಚ ಅಥವಾ ಇನ್ನಿತರ ಅನೈತಿಕ ಚಟುವಟಿಕೆಗಳನ್ನು ಮಾಡಲು ಪ್ರೇರೇಪಿಸುತ್ತಿದೆ. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದ್ದು ಅದರಲ್ಲಿ ಕೆಲವೊಂದು ಅಂಶಗಳನ್ನು ನಾನು ಈ ಕೆಳಗಿನಂತೆ ಪಟ್ಟಿ ಮಾಡುತ್ತೇನೆ..

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಗಾಗಿ ಓದು ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಂಡಿದ್ದು ಜ್ಞಾನಕ್ಕಾಗಿ ಓದು ಎಂಬುದು ತನ್ನ ಮಹತ್ವವನ್ನು ಕಳೆದುಕೊಂಡಿದೆ. ತಂದೆ-ತಾಯಿಗಳು ಶಿಕ್ಷಕರು ಹಾಗೂ ಸಮಾಜ ಎಲ್ಲರೂ ಒಂದುಗೂಡಿ ಕೇವಲ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮಾತ್ರ ನಿಜವಾದ ಬುದ್ಧಿವಂತರು ಎಂದು ಪರಿಗಣಿಸುವ ಮನೋಧರ್ಮವನ್ನು ಬೆಳೆಸಿಕೊಂಡಿದ್ದಾರೆ. ಈ ಪರಿಕಲ್ಪನೆಯು ಬದಲಾಗಬೇಕಾದರೆ ಕೇವಲ ಅಂಕಗಳಷ್ಟೇ ಅಲ್ಲದೆ ಪಠ್ಯ ಪಠ್ಯೇತರ ಹಾಗೂ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆಗೆ ಶಿಕ್ಷಣ ವ್ಯವಸ್ಥೆ ಮುಂದಾಗಬೇಕಿದೆ.

ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿರುವ ಭಾಷಾ ಹೇರಿಕೆಯು ಕೂಡ ನಿಲ್ಲಬೇಕಾಗಿದೆ ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಅಥವಾ ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಕಲಿಯುವ ಸೌಲಭ್ಯವನ್ನು ಕಲಿಸಿಕೊಡುವುದು ಅತ್ಯಗತ್ಯವಾಗಿದೆ. ಏಕೆಂದರೆ ಬಾಲ್ಯದಲ್ಲಿ ಮಕ್ಕಳಿಗೆ ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಕಲಿಸುವುದು ಅತ್ಯಂತ ಸೂಕ್ತ ಮಾರ್ಗವಾಗಿದ್ದು ವಿಷಯಗಳು ನೇರವಾಗಿ ಮಕ್ಕಳ ಮನಸ್ಸಿನೊಳಗೆ ಹೋಗುತ್ತವೆ. ಇಲ್ಲವಾದಲ್ಲಿ ಭಾಷೆಯ ಅರ್ಥವಾಗದಿರುವಿಕೆಯ ಸಮಸ್ಯೆಯಿಂದಾಗಿ ಮಕ್ಕಳು ಬಾಲ್ಯದಿಂದಲೇ ಶಿಕ್ಷಣದ ಕುರಿತಾಗಿ ಒಂದು ರೀತಿಯ ಅಸಡ್ಡೆ ಭಾವನೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳಿಗೆ ಅನುಕೂಲವಾಗುವಂತಹ ಭಾಷೆಯಲ್ಲಿ ಕಲಿಸುವ ಪ್ರಯತ್ನವನ್ನು ನಾವು ಮಾಡಬೇಕಾಗಿರುತ್ತದೆ.

ಜೀವನ ಕೌಶಲ್ಯಗಳ ಕುರಿತಾದ ಶಿಕ್ಷಣ ನೀಡುವುದು ಕೂಡ ಶಿಕ್ಷಣ ವ್ಯವಸ್ಥೆಯ ಅತಿಮುಖ್ಯ ಜವಾಬ್ದಾರಿಯಾಗಿರುತ್ತದೆ. ಹಲವಾರು ವಿಷಯಗಳ ಕುರಿತಾಗಿ ಕಲಿಸುವ ನಮ್ಮ ಶಿಕ್ಷಣ ವ್ಯವಸ್ಥೆ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ಕಲಿಸುವಲ್ಲಿ ಹಿಂದೆ ಬೀಳುತ್ತದೆ. ಮೌಲ್ಯಗಳು, ಆದರ್ಶಗಳು, ವ್ಯಕ್ತಿತ್ವವಿಕಸನ, ಆತ್ಮವಿಶ್ವಾಸದ ಅಭಿವೃದ್ಧಿ ಹಾಗೂ ಕೊರತೆಗಳನ್ನು ಮೀರಿ ಬೆಳೆಯುವ ಬಗ್ಗೆ ಮುಂತಾದವುಗಳನ್ನು ಕಲಿಸುವಲ್ಲಿ ವಿಫಲವಾಗುತ್ತದೆ. ಅಂತೆಯೇ ಕೇವಲ ಪಠ್ಯ ವಿಷಯಗಳಾದ ಗಣಿತ ಸಮಾಜ ವಿಜ್ಞಾನ ವಿಷಯಗಳಲ್ಲದೆ ಭಾರತದ ಮೂಲ ಕಸುಬಾದ ವ್ಯವಸಾಯದ ಕುರಿತಾಗಿಯೂ ಹಾಗೂ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನಿತರ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಏಕೆಂದರೆ ಓದಿನಲ್ಲಿ ಅಷ್ಟೊಂದು ಚುರುಕಿರದ ಎಷ್ಟೋ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತ್ಯಂತ ಪ್ರತಿಭಾವಂತರಾಗಿರುತ್ತಾರೆ. ಅವರಿಗೆ ಸೂಕ್ತ ಸೌಲಭ್ಯಗಳು ಹಾಗೂ ಅವಕಾಶಗಳು ದೊರೆತಲ್ಲಿ ಮುಂದೊಂದು ದಿನ ಭಾರತದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸುತ್ತಾರೆ. ಹಾಗಾಗಿ ಈ ಕ್ಷೇತ್ರಗಳ ವಿದ್ಯಾರ್ಥಿಗಳಿಗೂ ಕೂಡ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ಪೋಷಕರು ಹಾಗೂ ಶಿಕ್ಷಣ ವ್ಯವಸ್ಥೆ ಇಬ್ಬರಿಂದಲೂ ಸಿಗಬೇಕಾಗಿದೆ.

ಹೊಸದಾಗಿ ಅನುಷ್ಠಾನಗೊಂಡ ನೂತನ ಶಿಕ್ಷಣ ನೀತಿಯು ನಾನು ಹೇಳಿದ ಹಲವಾರು ಅಂಶಗಳನ್ನು ಒಳಗೊಂಡರೂ ಇನ್ನೂ ಹಲವಾರು ಅಂಶಗಳನ್ನು ಸೇರಿಸಿಕೊಳ್ಳಬೇಕಾಗಿದೆ. ಸರ್ಕಾರಿ ಶಾಲಾ ಕಾಲೇಜುಗಳ ಸರ್ವತೋಮುಖ ಬೆಳವಣಿಗೆಯ ಅಗತ್ಯತೆ ಇದೆ. ಯಾವುದೇ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಎದುರಾಗದಂತೆ ಸೂಕ್ತ ಕಾಲಕ್ಕೆ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುವ ಪ್ರಕ್ರಿಯೆ ಆಗಬೇಕಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಲುಪುವಂತೆ ಆಧುನಿಕ ತಂತ್ರಜ್ಞಾನವನ್ನು ಉಳ್ಳಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ತಲುಪಿಸುವ ಮಹತ್ತರ ಕೆಲಸ ಕೈಗೊಳ್ಳಬೇಕಾಗಿದೆ. ಯಾವುದೇ ಶಾಲಾ ಕಾಲೇಜುಗಳಲ್ಲಿಯೂ ಕೂಡ ಶಿಕ್ಷಕರ ಅಥವಾ ಪ್ರಾಧ್ಯಾಪಕರ ಕೊರತೆಯಾಗದಂತೆ ಕಾಲಕಾಲಕ್ಕೆ ಸೂಕ್ತ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಶಿಕ್ಷಕರಾಗಿ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳನ್ನು 21ನೇ ಶತಮಾನಕ್ಕೆ ಅನುಗುಣವಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಒಳಗೊಳ್ಳುವಂತೆ ಉನ್ನತೀಕರಿಸಬೇಕು. ಎಲ್ಲಾ ಸರ್ಕಾರಿ ನೌಕರರ ಮಕ್ಕಳು ಸೇರಿದಂತೆ ಮುಂದಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶವನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡುವಂತಹ ಸಾಮಾಜಿಕ ಹೊಣೆಗಾರಿಕೆ ನಮ್ಮ ಮೇಲಿರುತ್ತದೆ.

ಮೇಲೆ ನಾನು ಹೇಳಿದ ಎಲ್ಲಾ ಬೇಕುಗಳನ್ನು ಒಬ್ಬ ಪ್ರಧಾನಮಂತ್ರಿಯಾಗಿ ಮಾಡಲು ನಾನು ಬಯಸುತ್ತೇನೆ ಅಂಬೇಡ್ಕರರ ಮಂತ್ರದಂತೆ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕವೇ ಭಾರತವನ್ನು ಎಲ್ಲಾ ರೀತಿಯಿಂದಲೂ ವಿಶ್ವಗುರುವನ್ನಾಗಿ ಮಾಡಲು ಸಾಧ್ಯವಿದೆ ಹಾಗೂ ಆ ಪ್ರಯತ್ನವನ್ನು ಒಬ್ಬ ಪ್ರಾಮಾಣಿಕ ಪ್ರಧಾನಿಯಾಗಿ ನಾನು ಮಾಡಲು ಬಯಸುತ್ತೇನೆ . ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆಯದೇ ಆದಂತಹ ಕನಸುಗಳು ನನಗೆ ಇದೆ ಆದರೆ ಪದಗಳ ಮಿತಿಯಿರುವುದರಿಂದಾಗಿ ಇನ್ನೊಮ್ಮೆ ಯಾವಾಗಲಾದರೂ ಸಿಕ್ಕಾಗ ನಿಮ್ಮ ಬಳಿ ಹೇಳಿಕೊಳ್ಳುತ್ತೇನೆ.

ಪ್ರಮೋದ್ ತೀರ್ಥಹಳ್ಳಿ

LEAVE A REPLY

Please enter your comment!
Please enter your name here