ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರೈತಪರ ಸಂಘಟನೆಯಿಂದ ಸೆ.25 ರ ಶುಕ್ರವಾರ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಲು ಮುಂದಾಗಿದ್ದವು. ಆದರೆ ಇದೀಗ ಶುಕ್ರವಾರ ಕರ್ನಾಟಕ ಬಂದ್ ಮಾಡುತ್ತಿಲ್ಲ; ಬದಲಾಗಿ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ.
ಸೆ. 25ರಂದು ಕರ್ನಾಟಕ ಬಂದ್ ಇಲ್ಲ. ಇದರ ಬದಲಾಗಿ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತವೆ ಎಂದು ರೈತ ಮುಖಂಡ ಕರುಬೂರು ಶಾಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಶುಕ್ರವಾರ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ರೈತರು ಬಂದ್ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚನೆಯಾಗುವ ಸಾಧ್ಯತೆ ಇದೆ.
ರಾಜ್ಯದಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ತಡೆ ಚಳುವಳಿಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ-ಕರ್ನಾಟಕದ ಕರೆ ನೀಡಿದೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ – ಕರ್ನಾಟಕ ದ ಆನ್ಲೈನ್ ಸಭೆಯು ನಿನ್ನೆ ಸಂಜೆ 6.30 ಕ್ಕೆ ನಡೆಯಿತು. ಈ ಸಭೆಯಲ್ಲಿ ರಾಜ್ಯ ರೈತ ಸಂಘಗಳು, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಮುಂತಾದ 09 ಸಂಘಟನೆಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.
ರಾಜ್ಯದ ಎಲ್ಲಾ ದಲಿತ ಹಾಗೂ ಬಹುತೇಕ ಕಾರ್ಮಿಕ ಸಂಘಗಳು ಈ ಸಭೆಯ ನಿರ್ಣಯಕ್ಕೆ ಬಧ್ಧ ಎಂದು ಸೂಚನೆ ನೀಡಿದ್ದವು. ಜೊತೆಗೆ ವರ್ತಕ ಸಮುದಾಯವು ಬೆಂಬಲಿಸಿದೆ.
ಕೇಂದ್ರ ಸರಕಾರದ ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್ಗಳನ್ನು ಕೂಡಲೇ ವಾಪಾಸು ಪಡೆಯಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಆಗ್ರಹಿಸಿದೆ.