ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಶೇನ್ ವಾಟ್ಸನ್

0
31

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒಂದಲ್ಲ ಒಂದು ಆಘಾತಕ್ಕೆ ಒಳಗಾಗುತ್ತಾ ಸಾಗಿದ ಚೆನ್ನೈ ಸೂಪರ್ ಕಿಂಗ್ಸ್​, ಟೂರ್ನಿಯಿಂದ ಹೊರನಡೆದ ಬೆನ್ನಲ್ಲೇ ಮತ್ತೊಂದು ಶಾಕ್​ ಅನುಭವಿಸಿದೆ. ತಂಡದ ಸ್ಟಾರ್ ಆಟಗಾರ ಶೇನ್ ವಾಟ್ಸನ್ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ದದ ಪಂದ್ಯ ಅಂತ್ಯವಾದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮುಂದಿನ ಆವೃತ್ತಿಯಿಂದ ವಾಟ್ಸನ್ ಐಪಿಎಲ್​ನಲ್ಲಿ ಭಾಗವಹಿಸುತ್ತಿಲ್ಲ.

39 ವರ್ಷ ಪ್ರಾಯದ ವಾಟ್ಸನ್ 2106ರಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಆದರೆ, ದೇಶೀಯ ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 2018ರ ಐಪಿಎಲ್ ಹರಾಜಿನಲ್ಲಿ ಇವರನ್ನು ಚೆನ್ನೈ ಫ್ರಾಂಚೈಸಿ ಖರೀದಿ ಮಾಡಿತ್ತು. 2018 ಹಾಗೂ 2019 ಸೀಸನ್​ನಲ್ಲಿ ವಾಟ್ಸನ್ ಸಿಎಸ್​ಕೆ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಅಲ್ಲದೆ 2018ರಲ್ಲಿ ಧೋನಿ ತಂಡ ಚಾಂಪಿಯನ್ ಆಗಲು ವಾಟ್ಸನ್ ಕಾರಣವಾಗಿದ್ದರು. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಜೊತೆಗೆ 2019ರ ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್​ನಲ್ಲಿ ಇಂಜುರಿಯಿಂದ ಮೊಣಕಾಲಲ್ಲಿ ರಕ್ತ ಸೋರುತ್ತಿದ್ದರೂ ಬ್ಯಾಟ್ ಬೀಸಿ ತಂಡಕ್ಕೆ ನೆರವಾಗಿದ್ದನ್ನು ಕ್ರಿಕೆಟ್ ಜಗತ್ತು ಮರೆಯುವಂತಿಲ್ಲ.

ಪಂಜಾಬ್ ವಿರುದ್ಧದ ಪಂದ್ಯ ಮುಗಿದ ಬಳಿಕ ವಾಟ್ಸನ್ ಅವರು ಸಿಎಸ್​ಕೆ ಡ್ರೆಸ್ಸಿಂಗ್ ರೂಮ್​ನಲ್ಲಿ, ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ನೀಡುತ್ತೇನೆ ಎಂದು ಹೇಳಿದ್ದಾರೆ. ಸಿಎಸ್​ಕೆ ತಂಡಕ್ಕೆ ನಾನು ಆಭಾರಿ ಆಗಿರುತ್ತೇನೆ ಎಂದರು. ಈ ಸಂದರ್ಭ ಅವರು ತುಂಬಾ ಭಾವುಕರಾಗಿದ್ದರು ಎಂದು ಸಿಎಸ್​ಕೆ ಮೂಲಗಳು ತಿಳಿಸಿವೆ.

ವಾಟ್ಸನ್ ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ರಾಜಸ್ಥಾನ್ ತಂಡದ ಪರ ಆಡಿದ್ದರು. ಆದರೆ, ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಿಎಸ್​ಕೆ ಫ್ರಾಂಚೈಸಿ ಖರೀದಿ ಮಾಡಿದ ಬಳಿಕ ಧೋನಿ ನಾಯಕತ್ವದ ಅಡಿಯಲ್ಲಿ ವಾಟ್ಸನ್ ಅಬ್ಬರಿಸಿದ್ದರು. 2018 ರ ಐಪಿಎಲ್​ನಲ್ಲಿ 555 ರನ್ ಹಾಗೂ 2019 ರ ಐಪಿಎಲ್​ನಲ್ಲಿ 398 ರನ್ ಸಿಡಿಸಿದ್ದರು. ಆದರೆ, ಈ ಬಾರಿಯ ಸೀಸನ್​ ವಾಟ್ಸನ್ ಅವರಿಗೆ ಅಷ್ಟೊಂದು ಯಶಸ್ಸು ನೀಡಲಿಲ್ಲ. 11 ಪಂದ್ಯಗಳಲ್ಲಿ ಕೇವಲ 299 ರನ್ ಗಳಿಸಿದ್ದರಷ್ಟೆ.

ಐಪಿಎಲ್​ನಲ್ಲಿ ಒಟ್ಟು 145 ಪಂದ್ಯಗಳನ್ನು ಆಡಿದ ಶೇನ್ ವಾಟ್ಸನ್, 3874 ರನ್ ಕಲೆಹಾಕಿದ್ದಾರೆ. ಜೊತೆಗೆ 92 ವಿಕೆಟ್​ಗಳನ್ನೂ ಕಬಳಿಸಿದ್ದಾರೆ.

LEAVE A REPLY

Please enter your comment!
Please enter your name here