ಶೈಕ್ಷಣಿಕ ವರ್ಷದ ಶೇ.45ರಷ್ಟು ಪಠ್ಯ ಕಡಿತಕ್ಕೆ ಚಿಂತನೆ?

0
74
Tap to know MORE!

ಬೆಂಗಳೂರು: ಈ ಸಾಲಿನ ಶೈಕ್ಷಣಿಕ ವರ್ಷದ ಆರಂಭ ಇನ್ನೂ ಅನಿಶ್ಚಿತತೆಯಿಂದ ಕೂಡಿರುವುದರಿಂದ ಶೇ.30 ಪಠ್ಯ ಕಡಿತ ಮಾಡಲು ಮುಂದಾಗಿದ್ದ ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಶೇ.15 ಸೇರಿಸಿ ಒಟ್ಟಾರೆ ಶೇ.45 ಪ್ರಮಾಣದ ಪಠ್ಯ ಕಡಿತ ಮಾಡಲು ನಿರ್ಧರಿಸಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಮತ್ತು ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘ (ಕೆಟಿಬಿಎಸ್) ಜಂಟಿಯಾಗಿ ಈ ಮೊದಲು ಆರು ತಿಂಗಳಿಗೆ ಲೆಕ್ಕ ಹಾಕಿ ಶೇ.30 ಪಠ್ಯ ಕಡಿತ ಮಾಡಿ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು.

ಆದರೆ, 2020-21ನೇ ಸಾಲಿನಲ್ಲಿ ಶೈಕ್ಷಣಿಕ ಅವಧಿಗಳು ಎಷ್ಟು ದೊರೆಯುತ್ತವೆ ಎಂಬುದು ಇನ್ನೂ ಖಚಿತವಾಗಿಲ್ಲದೇ ಇರುವುದರಿಂದ ಒಂದು ವೇಳೆ ಜನವರಿಯಲ್ಲಿ ಆರಂಭವಾದರೂ ದೊರೆಯಬಹುದಾದ ಶೈಕ್ಷಣಿಕ ಅವಧಿಗೆ ಲೆಕ್ಕಚಾರ ಮಾಡಿ ಶೇ.45 ಪಠ್ಯಕ್ರಮ ಕಡಿತ ಮಾಡುವುದು ಸೂಕ್ತ ಎಂದು ಡಿಎಸ್​ಇಆರ್​ಟಿ ಮತ್ತು ಕೆಟಿಬಿಎಸ್ ಆಲೋಚಿಸಿವೆ.

ಸದ್ಯಕ್ಕೆ ರಾಜ್ಯ ಸರ್ಕಾರ ಪ್ರೌಢ ಶಾಲೆ ಮತ್ತು ಪಿಯು ತರಗತಿಗಳನ್ನು ಆರಂಭಿಸುವ ಕಡೆ ಆಲೋಚನೆ ನಡೆಸುತ್ತಿದೆ. ಸಾಧ್ಯವಾದಷ್ಟು ಬೇಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮುಖ್ಯಮಂತ್ರಿ ಬಳಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಈಗಾಗಲೆ ತಿಳಿಸಿದ್ದಾರೆ. ಡಿಎಸ್​ಇಆರ್​ಟಿ ಮತ್ತು ಕೆಟಿಬಿಎಸ್ ಪಠ್ಯ ಕಡಿತ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಅನುಮೋದನೆ ಸಿಕ್ಕಿಲ್ಲ. ಅನುಮೋದನೆ ಸಿಕ್ಕ ಬಳಿಕ ಶಿಕ್ಷಕರು ಬೋಧಿಸಬೇಕಾದ ಪಠ್ಯವನ್ನು ತಿಳಿಸಲಾಗುವುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಖಾಸಗಿ ಶಾಲೆಗಳು ಈಗಾಗಲೆ ಆನ್​ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಮಧ್ಯವಾರ್ಷಿಕ ಪರೀಕ್ಷೆಯನ್ನು ಸಹ ಮಾಡಿ ಮುಗಿಸಿದ್ದಾರೆ. ಸರ್ಕಾರಿ ಮಕ್ಕಳಿಗೆ ಯಾವುದೇ ಪರೀಕ್ಷೆ ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇಗ ಪಠ್ಯಕಡಿತ ಮಾಡಿ ಬೋಧನೆ ಮಾಡಬೇಕಾದ ಪಠ್ಯಕ್ರಮವನ್ನು ತಿಳಿಸಿದರೆ ಮಕ್ಕಳು ಅಭ್ಯಾಸ ನಡೆಸಲು ಅನುಕೂಲವಾಗುತ್ತದೆ. ಸರ್ಕಾರ ಈ ವಿಚಾರದ ಬಗ್ಗೆ ಚರ್ಚಿಸಿ ಬೇಗ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಖಾಸಗಿ ಶಾಲೆಗಳು ಸರ್ಕಾರವನ್ನು ಒತ್ತಾಯಿಸಿವೆ.

LEAVE A REPLY

Please enter your comment!
Please enter your name here