ಕ್ರಾಂತಿಯ ಕಿಡಿ ಹಚ್ಚಿದ ವೀರ ಸಂಗೊಳ್ಳಿ ರಾಯಣ್ಣ

0
248
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಿನುಗಿ ಮರೆಯಾದ ಅದೆಷ್ಟೋ ಕ್ರಾಂತಿಕಾರಿಗಳಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರದ್ದು ಅಚ್ಚಳಿಯದ ಹೆಸರು. ಸಾಯುವ ಕೊನೆಯ ಕ್ಷಣದವರೆಗೂ ತನ್ನ ಬಂಡಾಯಗಳ ಮೂಲಕ ಇಡೀ ಬ್ರಿಟಿಷ್ ಸೇನೆಗೆ ಸಿಂಹ ಸ್ವಪ್ನವಾಗಿ ಮೆರೆದವರು ಸಂಗೊಳ್ಳಿ ರಾಯಣ್ಣ.

ಸಂಗೊಳ್ಳಿ ರಾಯಣ್ಣ ಭರಮಪ್ಪ ಮತ್ತು ಕೆಂಚವ್ವ ದಂಪತಿಗಳ ಕಿರಿಯ ಮಗನಾಗಿ ಆಗಸ್ಟ್ 15, 1798 ರಂದು ಜನಿಸಿದರು. ರಾಯಣ್ಣರ ತಾತ ಗಿಡಮೂಲಿಕೆ ಔಷಧಿಗಳನ್ನು ತಯಾರಿಸಿ ಜನರ ರೋಗ ಗುಣಪಡಿಸುತ್ತಿದ್ದರು. ತಂದೆ ಬರಮಪ್ಪ ಜನರಿಗೆ ಕಾಡುತ್ತಿದ್ದ ಹುಲಿಯೊಂದನ್ನು ಕತ್ತಿಯಿಂದ ಇರಿದು ಕಿತ್ತೂರಿನ ರಾಜರ ಪ್ರೀತಿಗೆ ಪಾತ್ರವಾಗಿದ್ದರು. ಇದರಿಂದ ರಾಯಣ್ಣನ ಮನೆತನ ಕಿತ್ತೂರು ಸಂಸ್ಥಾನದಲ್ಲಿ ಹೆಸರುವಾಸಿಯಾಗಿತ್ತು. ಸಂಗೊಳ್ಳಿ ಗರಡಿಮನೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತುಂಬಾ ಹೆಸರುವಾಸಿಯಾಗಿತ್ತು. ನೆರೆಯ ಎಲ್ಲ ಹಳ್ಳಿಗಳ ಯುವಕರು ಸಂಗೊಳ್ಳಿಯ ಗರಡಿಮನೆಯಲ್ಲಿ ಬಂದು ಕತ್ತಿವರಸೆ, ಗುರಿಹೊಡೆತ, ಕವಣೆ ಎಸೆತ ಮತ್ತು ದೊಣ್ಣೆ ವರಸೆಗಳನ್ನು ಕಲಿಯುತ್ತಿದ್ದರು. ಯುದ್ದ ಮಾಡುವ ಜಾಣ್ಮೆ ಅರಿತ ಯುವಕರು ಮುಂದೆ ಕಿತ್ತೂರಿನ ಸೇನೆಗೆ ಸೇರುತ್ತಿದುದುಂಟು. ಕಿತ್ತೂರಿನ ಅರಸು ಮನೆತನಕ್ಕೂ ಸಂಗೊಳ್ಳಿಯ ವೀರ ಶೂರರನ್ನು ಕಂಡರೆ ಅಚ್ಚುಮೆಚ್ಚು. ಚಿಕ್ಕಂದಿನಿಂದಲೂ ರಾಯಣ್ಣ ಇದೇ ಗರಡಿಯಲ್ಲಿ ತನ್ನ ಹೊತ್ತು ಕಳೆದು ಪಳಗಿದ್ದರು.

ಇದನ್ನೂ ನೋಡಿ: ಸ್ವಾತಂತ್ರ್ಯ ಸಂಗ್ರಾಮದ ತೆರೆ ಮರೆಯ ಕೈಗಳು

ಕಿತ್ತೂರು ಸಂಸ್ಥಾನದ ದೊರೆಯ ಸಾವಿನ ನಂತರ ಮಕ್ಕಳಿಲ್ಲದೆ ರಾಣಿ ಚೆನ್ನಮ್ಮ ಕಿತ್ತೂರು ನಾಡನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಳು. ಇದೇ ಹೊತ್ತಿನಲ್ಲಿ ಬ್ರಿಟಿಶರು ಕಿತ್ತೂರನ್ನು ಕಬಳಿಸುವ ಹವಣಿಕೆಯಲ್ಲಿದ್ದರು. ತಮ್ಮ ನಾಡ ಮೇಲಿದ್ದ ಪ್ರೀತಿ, ನಾಡಭಕ್ತಿಯ ಕಾರಣಕ್ಕೋ ಏನೋ ಕಿತ್ತೂರಿನತ್ತ ಪಯಣ ಬೆಳೆಸಿದ್ದ ರಾಯಣ್ಣ, ಬಾಳಪ್ಪ ಮತ್ತು ಚನ್ನಬಸವಣ್ಣ ಅಲ್ಲಿನ ಸೇನೆಯ ಮುಂದಾಳುಗಳನ್ನು ಬೇಟಿಮಾಡಿ ತಮ್ಮ ಕಾಳಗ ಕಲೆಗಳನ್ನು ಅವರ ಮುಂದಿಟ್ಟರು. ಇದನ್ನು ಕಂಡು ಖಚಿತಪಡಿಸಿಕೊಂಡು ರಾಣಿ ಚೆನ್ನಮ್ಮಳೇ ಈ ಮೂವರಿಗೆ ತನ್ನ ಕಾವಲು ಪಡೆಯ ನೇತೃತ್ವ ವಹಿಸಿಕೊಟ್ಟಳು.

ಶಿವಲಿಂಗಪ್ಪ ಎಂಬ ಹುಡುಗನ ದತ್ತು ಪಡೆದು ರಾಣಿ ಚೆನ್ನಮ್ಮ ಆತನಿಗೆ ಪಟ್ಟಕಟ್ಟಿದಳು. ಇದೇ ಹೊತ್ತಿಗೆ ಬ್ರಿಟಿಷ್ ಸರ್ಕಾರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಟ್ಟುಪಾಡು ಜಾರಿಗೆ ತಂದು ಬಿಟ್ಟಿದ್ದರು. ಮಕ್ಕಳಿಲ್ಲದ ಅರಸು ಮನೆತನಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ಇದರ ಹಿಂದೆ ಅಡಗಿತ್ತು. ಇದರಿಂದಾಗಿ ಸಿಡಿದ್ದೆದ್ದ ರಾಯಣ್ಣ 1824 ನೇ ಇಸವಿಯಲ್ಲಿ ದೇಶವನ್ನು ಅಕ್ರಮಿಸಿಕೊಂಡಿದ್ದ ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದರು. ಕಿತ್ತೂರು ರಾಣಿ ಚೆನ್ನಮ್ಮರಿಗೆ ಬೆನ್ನೆಲುಬಾಗಿ ನಿಂತು ರಾಜ್ಯವನ್ನು ಬ್ರಿಟಿಷರಿಂದ ರಕ್ಷಣೆ ಮಾಡಲು ರಾಯಣ್ಣ ಹೋರಾಟ ನಡೆಸಿದರು.

ಕೆಚ್ಚೆದೆಯ ಯುವಕರ ಪಡೆಯನ್ನು ಕಟ್ಟಿ ಬ್ರಿಟಿಷ್ ಸೇನೆಯ ವಿರುದ್ಧ ಗೆರಿಲ್ಲಾ ಮಾದರಿಯಲ್ಲಿ ಹೊಂಚು ದಾಳಿ ನಡೆಸಿ ಭಾರೀ ಪ್ರಮಾಣದಲ್ಲಿ ಹೊಡೆತ ಕೊಟ್ಟ ವ್ಯಕ್ತಿ ಸಂಗೊಳ್ಳಿ ರಾಯಣ್ಣ. ಯುದ್ಧದಲ್ಲಿ ನೇರಾ ನೇರಾವಾಗಿ ರಾಯಣ್ಣನನ್ನು ಸೋಲಿಸಲು ಸಾಧ್ಯವಾಗದ ಬ್ರಿಟಿಷರು ಕೊನೆಗೆ ಏಪ್ರಿಲ್ 8, 1830ರಂದು ಡೋರಿ ಕೊಳ್ಳದಲ್ಲಿ ಈಜಾಡುತ್ತಿದ್ದ ರಾಯಣ್ಣನನ್ನು ಮೋಸದಿಂದ ಸೆರೆಹಿಡಿದರು. ರಾಯಣ್ಣನ ಸಂಗಡಿಗರು ಆಂಗ್ಲರ ಮೋಸದಿಂದ ಬಂದಿಸಲ್ಪಟ್ಟರು. ಬಿಚ್ಚುಗತ್ತಿ ಚೆನ್ನಬಸವಣ್ಣ ಮಾತ್ರ ಸಿಗದೇ ಮಾರುವೇಶದಲ್ಲಿ ಸನ್ಯಾಸಿಯಂತೆ ಉಳಿದುಕೊಂಡ. 1830ರ ಡಿಸೆಂಬರ್ ನಲ್ಲಿ ಆಂಗ್ಲರ ಕಮಿಷನರ್‌ ಆಂಡರ್ಸನ್‌ ನ್ಯಾಯಾಲಯದಲ್ಲಿ ರಾಯಣ್ಣನಿಗೆ ಗಲ್ಲು ಶಿಕ್ಶೆಯ ಆದೇಶ ನೀಡಿದ.
ತನ್ನನ್ನು ಹರಸಿ ಬೆಳೆಸಿದ ಉಳಿದುಕೊಂಡು ಹೋರಾಡಲು ಅನುವು ಮಾಡಿಕೊಟ್ಟ ನಂದಗಡದ ಮಂದಿಯ ಋಣ ತೀರಿಸಲು ನಂದಗಡದಲ್ಲಿಯೇ ತನ್ನನ್ನು ನೇಣಿಗೇರಿಸಿ ಎಂದ ರಾಯಣ್ಣನ ಕೊನೆಯಾಸೆಯಂತೆ, ಜನವರಿ 26, 1831ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ನಾಡಿಗಾಗಿ ಆಂಗ್ಲರ ವಿರುದ್ದ ಸಿಡಿದೆದ್ದ ವೀರನೊಬ್ಬ ಅಂದು ಮಣ್ಣು ಸೇರಿದ.
ಹಲವರಿಗೆ ಇಂದು ತಿಳಿಯದೇ ಇರುವ ಸಂಗತಿಯೆಂದರೇ ದೇಶದಲ್ಲಿ ಬ್ರಿಟಿಶರ ವಿರುದ್ದ ಹೋರಾಡಿದ ಮೊದಲ ಬಾರತೀಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ರಾಯಣ್ಣ ಹುಟ್ಟಿದ್ದು ಆಗಸ್ಟ್ 15, ಅದು ನಮ್ಮ ಬಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವಾದರೆ ಆತ ಗಲ್ಲಿಗೇರಿಸಲ್ಪಟ್ಟ ಜನವರಿ 26 ನಮ್ಮ ದೇಶ ಗಣರಾಜ್ಯವಾದ ದಿನ. ಅಂದು ರಾಯಣ್ಣ ಹಚ್ಚಿದ ನಾಡಿನ ಹೋರಾಟದ ಕಿಚ್ಚು ಎಲ್ಲರಿಗೂ ಮಾದರಿ

ಸುರೇಶ್ ರಾಜ್ ಪಕ್ಷಿಕೆರೆ
ವಿವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here