ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ : ಯಡಿಯೂರಪ್ಪ

0
119
ಯಡಿಯೂರಪ್ಪ, ಲವ್‌ ಜಿಹಾದ್‌,
ಪ್ರಾತಿನಿಧಿಕ ಚಿತ್ರ

ಬೆಂಗಳೂರು, ಅ. ೩೦– ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಶೀಘ್ರದಲ್ಲೇ ಮುಹೂರ್ತ ಕೂಡಿಬರಲಿದೆ. ಉಪಚುನಾವಣೆ ಬಳಿಕ ದೆಹಲಿಗೆ ಹೋಗಿ ಪಕ್ಷದ ವರಿಷ್ಠರೊಡನೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಹೇಳಿದರು.

ಸಿರಾ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಮುಗಿದ ನಂತರ ದೆಹಲಿಗೆ ಹೋಗುತ್ತಿದ್ದೇನೆ. ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುತ್ತೇನೆ ಎಂದರು. ದೆಹಲಿಗೆ ಯಾವಾಗ ಹೋಗಬೇಕು ಎಂಬ ಬಗ್ಗೆ ಇನ್ನು ತೀರ್ಮಾನ ಆಗಿಲ್ಲ. ಉಪಚುನಾವಣೆಗಳು ಮುಗಿದ ನಂತರವೇ ದೆಹಲಿ ಭೇಟಿ ಎಂದು ಅವರು ಹೇಳಿದರು.

ಉಪಚುನಾವಣೆ ಮುಗಿದ ತಕ್ಷಣ ಸಂಪುಟ ವಿಸ್ತರಿಸಿಬೇಕೆಂದುಕೊಂಡಿದ್ದೇನೆ. ವರಿಷ್ಠರೊಡನೆ ಚರ್ಚಿಸಿ ಮುಹೂರ್ತ ನಿಗದಿ ಮಾಡುವುದಾಗಿ ಅವರು ಹೇಳಿದರು. ಕಳೆದ ತಿಂಗಳೇ ಸಂಪುಟ ವಿಸ್ತರಣೆ ಮಾಡಲು ಉದ್ದೇಶಿಸಿದ್ದೆ. ಆದರೆ ಉಪಚುನಾವಣೆಗಳ ಕಾರಣಗಳಿಂದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ. ಈ ಬಾರಿ ಉಪಚುನಾವಣೆ ಮುಗಿದ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಬಹುದಿನಗಳಿಂದ ಸಂಪುಟ ವಿಸ್ತರಿಸಲು ಬಯಸಿದ್ದರಾದರೂ ಒಂದಲ್ಲ ಒಂದು ಕಾರಣದಿಂದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿತ್ತು. ವಿಧಾನಮಂಡಲದ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರು ಕಳೆದ ಸೆಪ್ಟೆಂಬರ್‌ನಲ್ಲಿ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಡನೆ ಚರ್ಚಿಸಿದ್ದರಾದರೂ ವರಿಷ್ಠರು ಅಧಿವೇಶನದ ಕಾರಣ ಸಂಪುಟ ವಿಸ್ತರಣೆಗೆ ಒಪ್ಪಿರಲಿಲ್ಲ. ಅಧಿವೇಶನದ ನಂತರ ಸಂಪುಟ ವಿಸ್ತರಿಸಿ ಎಂದು ಹೇಳಿದ್ದರು. ಆದರೆ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಿರಾ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದರಿಂದ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗಿದೆ.

ಈಗ ನವೆಂಬರ್ ೩ ರಂದು ಈ ಎರಡೂ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಉಪಚುನಾವಣೆಯ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಂಟಿಬಿ ನಾಗರಾಜು, ಆರ್. ಶಂಕರ್ ಇವರುಗಳನ್ನು ಸೇರ್ಪಡೆ ಮಾಡಿಕೊಂಡು ಸಂಪುಟ ವಿಸ್ತರಿಸಲು ಮುಖ್ಯಮಂತ್ರಿಗಳು ಬಯಸಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಸದ್ಯಕ್ಕೆ ಆರು ಸ್ಥಾನಗಳು ಖಾಲಿ ಇದ್ದು, ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಬಯಸಿದ್ದಾರೆ.

ಒಂದು ವೇಳೆ ವರಿಷ್ಠರು ಸಂಪುಟ ಪುನಾರಚನೆಗೆ ಅನುಮತಿ ನೀಡಿದರೆ ನಾಲ್ಕೈದು ಸಚಿವರನ್ನು ಕೈಬಿಟ್ಟು ೭-೮ ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಸಂಪುಟ ವಿಸ್ತರಣೆ, ಪುನಾರಚನೆ ಎಲ್ಲವು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವರಿಷ್ಠರ ಭೇಟಿಯ ನಂತರವೇ ಅಂತಿಮಗೊಳ್ಳಲಿದೆ.

LEAVE A REPLY

Please enter your comment!
Please enter your name here