2021ರ ಜನವರಿವರೆಗೆ ಸಂಪುಟ ವಿಸ್ತರಣೆ ಅನುಮಾನ!

0
180
Tap to know MORE!

ಬೆಂಗಳೂರು ಡಿ.14: ಸಂಪುಟ ವಿಸ್ತರಣೆ ಸಂಬಂಧದಲ್ಲಿ ಬಿಜೆಪಿ ಹೈಕಮಾಂಡ್‌ನ ಬಿಗಿ ಧೋರಣೆ ಮುಂದುವರಿದಿದ್ದು, ಜನವರಿ ವರೆಗೂ ಈ ಪ್ರಕ್ರಿಯೆ ನಡೆಯುವುದು ಅನುಮಾನವಾಗಿದೆ.

ಕಳೆದ ವಾರ ರಾಜ್ಯಕ್ಕೆ ಆಗಮಿಸಿದ್ದ ರಾಜ್ಯ ಬಿಜೆಪಿ ನೂತನ ಉಸ್ತುವಾರಿ ಅರುಣ್‌ ಸಿಂಗ್‌ ಇಲ್ಲಿನ ಪರಿಸ್ಥಿತಿ ಅವಲೋಕಿಸಿದ್ದು, ವರಿಷ್ಠರಿಗೆ ವರದಿ ಸಲ್ಲಿಸಿದ್ದಾರೆ. ರಾಜ್ಯ ಭೇಟಿ ಸಂದರ್ಭದಲ್ಲೂ ಸಂಪುಟ ವಿಸ್ತರಣೆ ಸಂಬಂಧದಲ್ಲಿ ಅರುಣ್‌ ಸಿಂಗ್‌ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎನ್ನುವುದೇ ಹೈಕಮಾಂಡ್‌ ನಿಲುವಾಗಿದೆ. ಉಸ್ತುವಾರಿ ಸಿಂಗ್‌ ಕೂಡ ಇದೇ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಸಂಬಂಧದಲ್ಲಿ ಹೊಸ ವರ್ಷಾರಂಭದಲ್ಲಿ ಬಿಜೆಪಿ ವರಿಷ್ಠರು ಬೈಠಕ್‌ ನಡೆಸುವ ನಿರೀಕ್ಷೆಯಿದೆ. ಆ ಬಳಿಕವೇ ಸಂಪುಟ ವಿಸ್ತರಣೆಯೋ ಅಥವಾ ಪುನರ್‌ರಚನೆಯೋ ಎನ್ನುವುದರ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಇದರ ಹೊರತಾಗಿ ದಕ್ಷಿಣ ಭಾರತದಲ್ಲಿ ಪಕ್ಷದ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳಲು ಪ್ರಮುಖ ತೀರ್ಮಾನ ತೆಗೆದುಕೊಳ್ಳಬಹುದು.

ಬಹುತೇಕ ಜನವರಿ ತಿಂಗಳಲ್ಲಿ ಈ ಪ್ರಕ್ರಿಯೆಗೆ ಚಾಲನೆ ದೊರಕಬಹುದು. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾದರೆ ಈ ಪ್ರಕ್ರಿಯೆ ಪುನಃ ನನೆಗುದಿಗೆ ಬೀಳಬಹುದು ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಸಂಪುಟ ವಿಸ್ತರಣೆ ಆಗುವುದಿಲ್ಲವೆಂಬ ಖಚಿತ ಸುಳಿವು ಸಿಕ್ಕಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೂ ನಿರಾಸೆಯಾಗಿದೆ.

ಈ ನಿಟ್ಟಿನಲ್ಲಿ ನಡೆಸುತ್ತಿದ್ದ ಲಾಬಿಗೂ ಕಡಿವಾಣ ಬಿದ್ದಿದೆ. ಈ ನಡುವೆಯೂ ಕೆಲವರು ಸಿಎಂ ಅವರನ್ನು ಭೇಟಿಯಾಗಿ ಒತ್ತಡ ತರುತ್ತಿದ್ದಾರೆ. ಇದರ ಭಾಗವಾಗಿಯೇ ಸಿ.ಪಿ.ಯೋಗೇಶ್ವರ್‌ ಸಿಎಂ ಅವರನ್ನು ಭಾನುವಾರ ಭೇಟಿಯಾಗಿದ್ದರು. ಆದರೆ, ಬೇಸರದಿಂದಲೇ ನಿರ್ಗಮಿಸಿದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here