ನವದೆಹಲಿ, ಅ 13: ಮೊಬೈಲ್ ರೇಡಿಯೇಷನ್ ಕಡಿಮೆ ಮಾಡಬಲ್ಲ ಚಿಪ್ ಒಂದನ್ನು ರಾಷ್ಟ್ರೀಯ ಕಾಮಧೇನು ಆಯೋಗ ಬಿಡುಗಡೆ ಮಾಡಿದೆ. ಇದರ ವಿಶೇಷತೆ ಏನಂದರೆ ಈ ಚಿಪ್ ಸಗಣಿಯಿಂದ ತಯಾರಾಗಿರುವಂಥದ್ದಾಗಿದೆ. ಈ ಕುರಿತು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯ್ ತಿಳಿಸಿದ್ದಾರೆ.
“ಹಸುವಿನ ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ. ಇದರಿಂದ ಮೊಬೈಲ್ ರೇಡಿಯೇಷನ್ ಕಡಿಮೆ ಮಾಡಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ಸಗಣಿ ಚಿಪ್ ಆಗಿದ್ದು, ಮೊಬೈಲ್ ಫೋನ್ಗಳಲ್ಲಿ ವಿಕರಣವನ್ನು ಕಡಿಮೆ ಮಾಡಬಹುದು. ಹಾಗೆಯೇ ಇದರಿಂದ ಹಲವು ರೋಗಗಳನ್ನು ತಡೆಯುವ ಶಕ್ತಿಯೂ ಇದೆ” ಎಂದು ಅವರು ಮಾಹಿತಿ ನೀಡಿದರು.
ದೇಶದಾದ್ಯಂತ ಕಾಮಧೇನು ದೀಪಾವಳಿ ಅಭಿಯಾನವನ್ನು ಸಂಸ್ಥೆ ಹಮ್ಮಿಕೊಂಡಿದೆ. ಹಸುವಿನ ಸಗಣಿಯಿಂದ ಮಾಡಿದ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಈ ಅಭಿಯಾನದ ಆಶಯವಾಗಿದೆ.
ರಾಷ್ಟ್ರೀಯ ಕಾಮಧೇನು ಆಯೋಗವು ಸೋಮವಾರದಿಂದಲೇ ದೇಶದಾದ್ಯಂತ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದೆ. ಈ ಹಸುವನ್ನು ನಂಬಿಕೊಂಡು ಸುಮಾರು 73 ಮಿಲಿಯನ್ ಮಂದಿ ಬದುಕುತ್ತಿದ್ದಾರೆ. ಹಸುಗಳ ಸಂರಕ್ಷಣೆ, ರಕ್ಷಣೆ ಮತ್ತು ಅವುಗಳ ಸಂತತಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಈ ಟ್ರಸ್ಟ್ ರಚನೆಯಾಗಿದೆ.
ನೀತಿಯನ್ನು ರೂಪಿಸಲು ಮತ್ತು ಜಾನುವಾರುಗಳಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನಕ್ಕಾಗಿ ಟ್ರಸ್ಟ್ ರಚನೆಗೊಂಡಿದೆ.