ಸಣ್ಣ ಸಣ್ಣ ಖುಷಿ

0
174
Tap to know MORE!

ನಿಮ್ಮ ಬದುಕು ಸುಂದರವಾಗಲು ಏನು ಬೇಕು ಎಂಬ ಪ್ರಶ್ನೆಯನ್ನು ಯಾರಿಗೆ ಕೇಳಿದರೂ ಅವರೊಂದು ಉದ್ದನೆಯ ಪಟ್ಟಿಯನ್ನು ಕೊಟ್ಟಾರು! ತಿಂಗಳಿಗೆ ಮನೆಗೆ ಬೇಕಾದ ರೇಷನ್ನಿನ ಪಟ್ಟಿಯಂತಹ ಈ “ಬೇಕು” ಗಳನ್ನ ಪೂರೈಸುವುದರಲ್ಲಿಯೇ ಯಾರದ್ದಾದರೂ ಬದುಕು ಕಳೆದು ಹೋದೀತು, ನಿಜವಾಗಿ ಈ ಪಟ್ಟಿಯ ಯಾವುದೂ ನಮ್ಮ ಬದುಕನ್ನುಸಂತೋಷವಾಗಿಡಲಾರದು.ಕಾರಣ ಇವೆಲ್ಲವೂ ನಮ್ಮ”ಬೇಡಿಕೆಗಳೇ”ಹೊರತು ,ಇವಾವುವೂ ನಮ್ಮಸಂತೋಷದ ಮೂಲವಲ್ಲ.ಬದಲಿಗೆ ಈ ಪಟ್ಟಿಗಳು ನಮ್ಮ ಬದುಕಿನ ಆಯಾಸಕ್ಕೆ ಕಾರಣವಾದಾವು.

ಆನಂದ,ಸಂತೋಷಗಳು ಸಾಪೇಕ್ಷವೇ ಹೊರತು ನಿಶ್ಚಿತವಲ್ಲ.ಇವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆದರೂ ನಾವು ಇದನ್ನಒಂದು ಹದದಲ್ಲಿ ಇರಿಸಿಕೊಂಡರೆ ನಮ್ಮ ಬದುಕು ಗೊಣಗುವಿಕೆಯಿಂದ ಹೊರಬಂದು ಗುನುಗುವಿಕೆ ಆಗಬಹುದು,ಮಧುರವಾಗಿ ಸಹ್ಯವಾಗಬಹುದು.

ಈ ಆಶೆಯೆಂಬುದು ಅನಂತ,ಅಗಣಿತ,
“ಇಷ್ಟಿದ್ದರಷ್ಟಾಸೆ,ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ,ನಷ್ಟಸುಖದಾಸೆ” ದಾಸರು ಚನ್ನಾಗಿಯೇ ಗುರುತಿಸಿದ್ದಾರೆ. ನಮ್ಮಾಸೆಗೆ ಕೊನೆಯೇಯಿಲ್ಲ,ಇಲ್ಲಿನ ಪದ “ನಷ್ಟಸುಖದಾಸೆ ನೋಡಿ ” ಕಳೆದು ಹೋದದ್ದು ಹಿಂದಿರಗಬೇಕು,ಅದುಹಣ,ಒಡವೆ,ಅಧಿಕಾರಮಾತ್ರವಲ್ಲ ನಮ್ಮನ್ನಅಗಲಿದವರೂ(ಸತ್ತವರೂ)ಹಿಂದಿರುಗಬೇಕು.ಈ ಆಸೆಗೆ ದುರಾಸೆಯೆಂದು ಹೆಸರು.

ನಾವು ಪ್ರತಿನಿತ್ಯ ಈ ದುರಾಸೆಯ ಪರಿಪೂರ್ಣತೆ ಗಾಗಿ ಒದ್ದಾಡುವವರು.”ಹಗಲು ಹಸಿವಿಂಗೆ ಕುದಿದು.ಇರುಳು ನಿದ್ರೆಗೆ ಕುದಿದು,ಉಳಿದ ಹೊತ್ತೆಲ್ಲಾ ಅಸನವ್ಯಸನಕ್ಕೆ ಕುದಿವ”ಕರ್ಮಿಗಳು ನಾವು.ಇಂತಹ ಮನೋಭಾವದಿಂದ ಏನೂ ಸಾಧಿತವಾಗುವುದಿಲ್ಲ , ಬದಲಿಗೆ ಆಶೆಯನ್ನಹಿಡಿತದಲ್ಲಿ ಇಟ್ಟುಕೊಳ್ಳಬೇಕು.”ಆಶೆಗೆ ಸತ್ತುದು ಕೋಟಿ,ಆಮಿಷಕ್ಕೆ ಸತ್ತುದು ಕೋಟಿ” ಹೀಗಾದರೆ ಪ್ರಯೋಜನವೇನು?
ನಮ್ಮ ಬದುಕಿನ ಸಾಫಲ್ಯತೆಗೆ ಮೂಲಕಾರಣ ಆಸೆಯ ನಿಯಂತ್ರಣ ಮತ್ತು ಸಣ್ಣಸಣ್ಣ ಸಂಗತಿಗಳಲ್ಲಿ ಸಂತೋಷವನ್ನು ಕಾಣುವ ಮನೋಭಾವ .ಇದನ್ನು ಬೆಳೆಸಿಕೊಂಡರೆ ಯಶಸ್ಸು ದೊರಕೀತು. ನಮಗೆ ಕಾಣುವ ಈ ಬದುಕಿನಲ್ಲಿ ಅತ್ಯಂತ ಕನಿಷ್ಟ, ಶ್ರೇಷ್ಟ ಎಂಬುದಿಲ್ಲ.ಅದು ನಮ್ಮ ಮನೋಭಾವವನ್ನ ಅವಲಂಬಿಸಿರುತ್ತದೆ”ಕೋರಿ ಹೊದ್ದರೇನ ,ಕೂಲಿ ಮಾಡಿದರೇನ ನನಗೆ ನನರಾಯ ಬಡವೇನ?”ಎನ್ನುವ ನಮ್ಮ ಹಳ್ಳಿಯ ಹೆಣ್ಣುಮಗಳ ಆತ್ಮವಿಶ್ವಾಸದ ಮುಂದೆ ಶ್ರೀಮಂತಿಕೆಯನ್ನ ನಿವಾಳಿಸಬೇಕು.ಕಾರಣ ಇವರು ಸಣ್ಣಸಣ್ಣ ಸಂಗತಿಗಳಲ್ಲಿ ಸುಖವನ್ನ ಕಾಣುತ್ತಾರೆ.ಪರಸ್ಪರ ಗೌರವ,ಪ್ರೀತಿ ಮತ್ತು ಜವಬ್ದಾರಿಯಿರುವಾಗ ಸುಖಕ್ಕೆ ಕೊರತೆಯಾಗದು. ಸುಖ ಬೇಕಿದ್ದರೆ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಬೇಕು,ಆಸೆಯನ್ನು ಮಿತವಾಗಿ ಇಟ್ಟುಕೊಳ್ಳಬೇಕು.ಮಹಡಿಯಮನೆ,ಆಳೂಕಾಳೂ, ಆಭರಣ, ವಾಹನಗಳು ಸುಖವಲ್ಲ.ಅದು ನೆರಮನೆಯ ಕಿಚ್ಚು.ಬದಲಿಗೆ ಕಷ್ಟಸುಖವನ್ನು ಸಮಾನವಾಗಿ ಕಾಣುವ ಮನಸ್ಸು ಮತ್ತು ತುಟಿಯ ಮೆಲರಳುವ ಮಂದಸ್ಮಿತ ಮಾತ್ರ ಸುಖ.
ನಾಗರಿಕತೆ ಮುಂದೊತ್ತುತ್ತಾ ಬರುತ್ತಿದ್ದಂತೆ ನಮಗೆ ದೊರಕುತ್ತಿರುವ ಸೌಲಭ್ಯಗಳು, ಸವಲತ್ತುಗಳು ನಮ್ಮನ್ನ ಅಯಾಸಗೊಳಿಸುತ್ತಿವೆ,ನಮ್ಮ ಬಾಲ್ಯದಲ್ಲಿ ಅಪ್ಪ ತರುತ್ತಿದ್ದ ಎಂಟಾಣೆ ಬಿಸ್ಕತ್ತು ನಮಗೆ ತುಂಬಾ ಸಿಹಿಯೆನಿಸುತ್ತಿತ್ತು. ಅನ್ನಕ್ಕೆ ಬೆಲ್ಲ ಹಾಕಿ ಮಗುಚಿ ಹುಗ್ಗಿಯೆಂದು ನೀಡಿದರೆ ಪರಮಾನ್ನವಾಗುತ್ತಿತ್ತು.ಎಲ್ಲಿಯಾದರೂನಮ್ಮ ಮನೆಗೆ ರೇಡಿಯೋ ತಂದರೆ ,ಸ್ವರ್ಗದಿಂದ ದೇವತೆಗಳೇ ಇಳಿದು ನಮ್ಮನೆಗೆ ಬಂದಂತಾಗುತ್ತಿತ್ತು ,ಅದರೊಗೆ ಕುಳಿತು ಮಾತನಾಡುವುದಾದರೂ ಹೇಗಪ್ಪಾ ಯೆಂದು ನಾವು ಚಿಂತಿಸಿ.ಚರ್ಚಿಸಿ ಆನಂದ ಪಡುತ್ತಿದ್ದೆವು.ಅಪ್ಪನ ವಿನಾ ಬೇರಾರು ಮುಟ್ಟಬಾರದ ಮತ್ತು ಮುಟ್ಟಲಾರದ ಎತ್ತರದಲ್ಲಿದ್ದ ಅದನ್ನು ಹೇಗೋ ಮುಟ್ಟಿ, ಆನ್ ಮಾಡಿ ಶಬ್ದ ಹೊರಡಿಸಿ ರೋಮಾಂಚನದ ಸುಂಟರಗಾಳಿಗೆ ಸಿಲುಕಿ ಸಂಭ್ರಮ ಪಡುತ್ತಿದ್ದ ದಿನಗಳೇ ನಿಜವಾಗಿಯೂ ಸುಂದರವಾಗಿದ್ದವು.

ಈಗ ಮನೆಯಲ್ಲಿ ಬೇಕಾದ ವಾಹನವಿದ್ದರೂ ಅದನ್ನುಮುಟ್ಟದ,ಅದರ ಕುರಿತು ಮಾತನಾಡದ,ಕದ್ದು ಓಡಿಸದ ಕೆಲವರ ಮನಸ್ಥಿತಿ ಕಳವಳ ಹುಟ್ಟಿಸುತ್ತದೆ.
ಆಹಾರ,ಮಾತು,ಸಂಬಂದ, ಉಡುಗೆತೊಡುಗೆ,ಆಚರಣೆ,,ಹೀಗೆ ಪ್ರತಿಯೊಂದರಲ್ಲಿಯೂ ಸುಸಂಬದ್ದತೆಯನ್ನು ಹುಡುಕುತ್ತಿದ್ದ ಕಾಲಮಾನದ ಬದುಕಲ್ಲಿ ಇಂತಹ ಸಣ್ಣಸಣ್ಣ ಸಂಗತಿಗಳು ಸಂತೋಷವನ್ನು ನೀಡುತ್ತಿದ್ದವು.ವರ್ಷಕ್ಕೊಮ್ಮೆ ತರುತ್ತಿದ್ದ ಗಂಜಿಹಾಕಿದ ಬಟ್ಟೆಗಳನ್ನು ಹಾಕಿಕೊಂಡು ಕನ್ನಡಿಯಲ್ಲಿ ನೋಡಿ ಮೆಚ್ಚಿ,ತಂದೆ ತಾಯಿಗೆ ನಮಿಸಿ ,ಏನೋ ಜಗತ್ತನ್ನ ಗೆದ್ದ ಗತ್ತಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳ ಸುಖ ಈಗಮರಳಿಬಂದೀತೇ?,ಶಾಲೆಯಲ್ಲಿ ನಮ್ಮ ಹೊಸಂಗಿಯನ್ನು ಗುರುತಿಸಿ “ಹೊಸಂಗಿಗೆ ಗುದ್ದು ” ಕೊಡುವ ಗೆಳೆಯರು ನಮಗೆ ನೀಡುತ್ತಿದ್ದ ಹೆಮ್ಮೆ!!ಅವರು ಗುರುತಿಸದಿದ್ದರೆ ನಾವೇ “ಹೊಸಂಗಿಗೆ ಗುದ್ದು ಕೊಡಬೇಡಿರೋ” ಯೆಂದು ಸೂಚನೆ ನೀಡಿ ಕೊಸರಾಡುವ ನಾಟಕ ಮಾಡುವ ಚಂದ!! ಬಡತನದ ಕಾರಣಕ್ಕೆ ಅಪರೂಪ ವಾಗಿರುತಿದ್ದ ಪಾಯಸವನ್ನ ಊರ ಜಾತ್ರೆಯಲ್ಲಿ ತಿನ್ನುವ ಖುಷಿ, ಯಾರೋ ನೀಡುವ ಚಾಕೋಲೇಟನ್ನು ಕರ್ಚಾಗದಂತೆ ಕಚ್ಚದೆ ಬರಿದೇ ಸೀಪುವ ಮತ್ತು ಕೈನಲ್ಲಿ ತಗೊಂಡು ಬಂಗಾರದಂತೆ ಹೊಳೆವ ಅದನ್ನು ನೋಡುವ ಸುಖ!!

ನಾವು ಶಾಲೆಯಲ್ಲಿ‌ಹೇಳಿದ ಹಾಡು, ಬರೆದ ಉತ್ತರ,ಪಡೆದ ಅಂಕಗಳನ್ನ ಹೇಳಿ ಅಭಿಮಾನಪಡುವ ಅಪ್ಪಅಮ್ಮ.
ಈ ಮಗನೇ ಮುಂದೆ ನಮಗೆ ಆಸರೆಯಾಗುತ್ತಾನೆ, ಇವನಿಗೆ ಈ ವರ್ಷವಾದರೂ ಒಂದು ಪ್ಯಾಂಟ್ಹೊಲಿಸಬೇಕು.ಇವಳಿಗೊಂದು ಜರಿಲಂಗ ತರಬೇಕು, ಇವಳನ್ನು ಮದುವೆಯಾಗುವವನು ಯಾವ ರಾಜಕುಮಾರನೋ,ಇವನಿಗೆ ಹುಡುಗಿ ಎಲ್ಲಿ ಹುಟ್ಟಿದ್ದಾಳೋ, ಇವನು ನಾಳೆ ದೊಡ್ಡ ಜನವಾಗಿ ಕಾರಲ್ಲಿ ಓಡಾಡೊದು ನೋಡಬೇಕು……ಈ ಎಲ್ಲ ಸಂಗತಿಗಳನ್ನು ಇಂದು ನೆನೆದರೆ ರೋಮಾಂಚನವಾಗುತ್ತದೆ, ಈ ಸಂಗತಿಗಳೇ ನಮ್ಮ ಬದುಕನ್ನ ಸುಂದರವಾಗಿ ಕಾಪಿಟ್ಟು ಇಲ್ಲೀವರೆಗೆತಂದಿವೆ ಯೆಂದೆನಿಸುತ್ತದೆ.
ಇಲ್ಲದಿದ್ದರೇನಿದೆ?
ಅಂದು ನಮ್ಮನ್ನ ಉಳಿಸಿದ ಈ ಸಂತೋಷವೇ ಇಂದಿಗೂ ನಮ್ಮನ್ನು ಪೊರೆಯುತ್ತಿದೆ, ಮುಂದೆ ನಮ್ಮ ಮಕ್ಕಳಿಗೂ ಕೊಂಚ ಉಳಿಸೋಣ
ಹರೀಶ್ ಟಿ. ಜಿ

LEAVE A REPLY

Please enter your comment!
Please enter your name here