ಸಮಾನತೆಯ ಬೆಳಕಿನಲ್ಲಿ

0
140
Tap to know MORE!

 “ಮುಟ್ಟಿಸಿಕೊಳ್ಳದವರಾಗಿ ಹುಟ್ಟಿದ ಅಂಬೇಡ್ಕರ್, ಅಪ್ಪಿಕೊಳ್ಳುವಂತಹ ಸಾಧನೆಯನ್ನೇ ಮಾಡಿ ಹೋದರು.” ಪಯಣದ ಆರಂಭಿಕ ಬಿಂದು ಶೂನ್ಯವಾಗಿರುವುದೇ ಹೆಚ್ಚು.ಶೂನ್ಯವಿದ್ದದ್ದೇ ಮುಂದೆ ಬಹುಮಾನ್ಯವೆನಿಸುವುದು. ಮನದ ಮೂಲೆಯಲ್ಲಿ ಕುದುರಿದ ಇಚ್ಛಾಶಕ್ತಿ ಮಾಡಿಯೇ ತೀರುತ್ತೇನೆಂಬ ಛಲವಾದಾಗ ಸಾಧನೆ‌ ಗರಿಗೆದರುತ್ತದೆ.

ಅಂಬೇಡ್ಕರ್ ಬದುಕಿದ್ದ ಕಾಲದಲ್ಲಿ ಜಾತಿವ್ಯವಸ್ಥೆ ಎಂಬ ದುಷ್ಟ ಜಾಲ ಇನ್ನೆಷ್ಟು ಪರಿಣಾಮಕಾರಿಯಾಗಿದ್ದಿರಬಹುದು ಎಂಬುದನ್ನ ಈ ಕಾಲದಲ್ಲಿ ನಿಂತು ನಿಖರವಾಗಿ ಯೋಚಿಸುವುದು ಕಷ್ಟ! ವಿದ್ಯೆ ಎಂಬ ಬೆಳಕು ಯಾರ ಬದುಕನ್ನೂ ಬೆಳಗಬಲ್ಲುದು ಎಂಬುದಕ್ಕೆ ಸಾಕ್ಷಿಯೇ ಅಂಬೇಡ್ಕರ್.
ಸಂವಿಧಾನ ಶಿಲ್ಪಿ,ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್  ೧೮೯೧ ಏಪ್ರಿಲ್ ೧೪ ರಂದು ರಾಮ್ಜೀರಾವ್ ಮಾಲೋಜಿ ಮತ್ತು ಬೀಮಾಬಾಯಿಯವರ ಮಗನಾಗಿ ಮಧ್ಯಪ್ರದೇಶಲ್ಲಿ ಜನಿಸಿದರು.ಜಾತಿ ಪಧ್ಧತಿಯು ಜಾರಿಯಲ್ಲಿದ್ದ ಆ ಸಮಾಜದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರು.ಬಾಯಾರಿಕೆಯಾದಾಗ ಬಾವಿಯಿಂದ ನೀರು ತೆಗೆದು ಕುಡಿಯುವಂತಿಲ್ಲ,ಮೇಲ್ಜಾತಿಯ ಜನರ ಮನೆಗೆ ಹೋಗುವಂತಿಲ್ಲ,ಅವರಿದ್ದ ಎತ್ತಿನಗಾಡಿ ಹತ್ತುವಂತಿಲ್ಲ,ದೇವಸ್ಥಾನಗಳಿಗೆ ಪ್ರವೇಶವಿಲ್ಲ,ಹೀಗೆ ಹತ್ತು ಹಲವು.

ಅಂಬೇಡ್ಕರ್ ವಿದ್ಯಾರ್ಥಿಯಾಗಿದ್ದಾಗ ನಡೆದ ಒಂದು ಘಟನೆ‌ ಹೀಗಿದೆ:- ಒಂದು ದಿನ ತರಗತಿಯಲ್ಲಿ ಅಧ್ಯಾಪಕರು ಗಣಿತದ ಸಮಸ್ಯೆಗಳನ್ನು ‌ಬೋರ್ಡ್ ಮೇಲೆ ಬರೆದು ಪ್ರತಿಯೊಂದು ವಿದ್ಯಾರ್ಥಿಯನ್ನು ಬೋರ್ಡ್ ಬಳಿ ಬಂದು ಸಮಸ್ಯೆಯನ್ನು ಬಿಡಿಸುವಂತೆ ಹೇಳಿದರು.ಎಲ್ಲಾ ವಿದ್ಯಾರ್ಥಿಗಳು ಬೋರ್ಡ್ ಬಳಿ‌ ಹೋಗಿ ಸಮಸ್ಯೆ ಬಿಡಿಸುತ್ತಿದ್ದರು.ಆದರೆ ಅಂಬೇಡ್ಕರ್ ಅವರ ಸರದಿ ಬಂದಾಗ ಅವರಿಗೆ ಆಶ್ಚರ್ಯವೆನಿಸುವ ಒಂದು ಘಟನೆ ನಡೆಯಿತು.ಬೋರ್ಡ್ ಬಳಿ ಹೋಗಲು ಅವರು ಎದ್ದು ನಿಂತಾಗ ಉಳಿದ ಎಲ್ಲಾ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ತಳ್ಳಿಕೊಂಡು ಹೋಗಿ ಬೋರ್ಡ್ ಬಳಿ ಇದ್ದ ತಮ್ಮ ಊಟದ ಬುತ್ತಿಗಳನ್ನು ತಮ್ಮ ಬಳಿಗೇ ತಂದಿಟ್ಟರು.ಕಾರಣವಿಷ್ಟೇ ಅಂಬೇಡ್ಕರರ ಸ್ಪರ್ಶದಿಂದ ತಮ್ಮ ಬುತ್ತಿಗಳು ಮೈಲಿಗೆಯಾಗುವುದು ಎಂಬ ಭಯ.ತರಗತಿಯಲ್ಲಿ ಈ ರೀತಿಯಾಗಿ ಅವಮಾನಿಸಲ್ಪಟ್ಟ ಅಂಬೇಡ್ಕರ್ ಅವರು ಮುಂದೊಂದು ದಿನ ತಾನೇ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶಾಲೆಯನ್ನು ಕಟ್ಟಿಸಿರುವುದು ಇವರ ಸಾಧನೆಗಳಲ್ಲಿ ಒಂದಾಗಿದೆ.ಹಾಗಾದರೆ ನಾವೆಲ್ಲರೂ ಯೋಚಿಸಬೇಕಾಗಿದೆ,ಆ ಪುಟ್ಟ ಬಾಲಕ ಅಂಬೇಡ್ಕರ್ ಅವರಿಗೆ ಆ ಘಟನೆಯು ಎಷ್ಟು ನೋವು ತಂದಿರಬಹುದು ಅಲ್ಲವೇ..? ಆದರೆ ಅವರು ಅದನ್ನು ಮೆಟ್ಟಿ ನಿಂತು ನಮ್ಮ ದೇಶದ ಸಂವಿಧಾನದ ರೂವಾರಿಯಾದರು.ಸಾಧನೆಯೆಂಬುದು ಹಾಗೆಯೆ ನಮ್ಮನ್ನು ಸಮಾಜದಲ್ಲಿ ತಿರಸ್ಕರಿಸಿದವರಿಂದಲೇ ಪುರಸ್ಕರಿಸುವ ಜೀವನ ನಮ್ಮದಾಗಬೇಕು.

ಮುಂದೆ ಲಂಡನ್ನಿನಲ್ಲಿ ಕಾನೂನು ವಿಷಯವನ್ನು ಅಧ್ಯಯನ ಮಾಡಿ ಬ್ಯಾರಿಸ್ಟರ್ ಆಗಿ ತಾಯಿನಾಡಿಗೆ ಮರಳಿದ ಅಂಬೇಡ್ಕರ್ ಅವರ ಮೇಲೆ ಗಾಢವಾದ ಪರಿಣಾಮ ಬೀರುದ ಅಂಶವೆಂದರೆ ಅಮೇರಿಕನ್ನರ ಜೀವನಕ್ರಮ ಹಾಗೂ ನಿಗ್ರೋಗಳಿಗೆ ಸ್ವಾತಂತ್ರ್ಯ ಒದಗಿಸಿರುವ ಅವರ ಸಂವಿಧಾನದ ೧೪ ನೆಯ ತಿದ್ದುಪಡಿ.ಪುಸ್ತಕ ಪ್ರೇಮಿಯಾದ ಅಂಬೇಡ್ಕರ್ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿದ್ದರು.ಹಿಂದೂ ಧಾರ್ಮಿಕ ಗ್ರಂಥಗಳನ್ನೆಲ್ಲಾ ಅಧ್ಯಯನ ಮಾಡಿದರು.ಧಾರ್ಮಿಕವಾಗಿ,ಸಾಮಾಜಿಕವಾಗಿ,ಎಷ್ಟೊಂದು ಅಂಧಾನುಕರಣೆಗಳಿವೆ ಎಂಬುದನ್ನು ಅರಿತರು.ಅವುಗಳನ್ನು ತೊಡೆದು ಹಾಕುವ ಬಗ್ಗೆ ಚಿಂತಿಸತೊಡಗಿದರು.ಗಾಂಧೀಜಿಯವರನ್ನು ಸಂಪರ್ಕಿಸಿದ ಅಂಬೇಡ್ಕರ್ ಅಸ್ಪೃಶ್ಯತೆಯನ್ನು ನಿರ್ಮೂಲ ಮಾಡಲು ವ್ಯಾಪಕ ಆಂದೋಲನದ ಬಗ್ಗರ ಚರ್ಚಿಸಿದರು ಮತ್ತು ಆ ನಿಟ್ಟಿನಲ್ಲಿ ಕಾರ್ಯಗತರಾದರು.

ಭಾರತದ‌ ಸಂವಿಧಾನಕ್ಕೆ ಇವರ ಕೊಡುಗೆ ಅಪಾರವಾದುದು.ದೇಶದ ಆಡಳಿತಕ್ಕೆ ಒಂದು ಸಂವಿಧಾನದ ಅಗತ್ಯತೆಯನ್ನು ಮನಗಂಡು ಡಾ.ರಾಜೇಂದ್ರ ಪ್ರಸಾದ್ ರಚಿಸಿದ ಕರಡು ಸಿದ್ದತಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು.ಏಕೆಂದರೆ‌ ಅಂಬೇಡ್ಕರ್ ಅವರಿಗೆ ಪ್ರಪಂಚದ ವಿವಿಧ ಸಂವಿಧಾನಗಳ ಕುರಿತು ಇದ್ದ ದಟ್ಟ ಜ್ಞಾನ.ಇದನ್ನು ಸವಾಲಾಗಿ‌ ಸ್ವೀಕರಿಸಿದ ಅಂಬೇಡ್ಕರ್ ಸಂವಿಧಾನದ ಕರಡನ್ನು ಸಿಧ್ದತೆಗೊಳಿಸಿದರು.ಅದು ಅಧ್ಬುತವಾಗಿ ಭಾರತದ ಎಲ್ಲಾ ಪ್ರಾಂತ್ಯಗಳು,ವಿಭಾಗಗಳು,ಸಂಸ್ಕೃತಿಗಳ,ಜಾತಿ,ಮತ,ಬಣ್ಣ ಮತ್ತು ಭಾಷೆಗಳ ಆಶೋತ್ತರಗಳನ್ನು ಒಳಗೊಂಡಿತ್ತು.೧೯೫೦ ಜನವರಿ ೨೬ ರಂದು ಅಂಬೇಡ್ಕರ್ ರೂಪಿಸಿದ ಭಾರತದ‌ ಸಂವಿಧಾನ ಜಾರಿಗೆ ಬಂದಿತು.ತಮ್ಮ ಬದುಕನ್ನು ದೀನ ದಲಿತರ ಹಿತರಕ್ಷಣೆಗಾಗಿ ಸವೆಸಿದ ಅಂಬೇಡ್ಕರ್ ೧೯೫೬ ಡಿಸೆಂಬರ್ ೬ ರಂದು ಇಹಲೋಕ ತೊರೆದರು.

“ಬಡತನ ಸಾಧನೆಗೆ ಅಡ್ಡಗಾಲಲ್ಲ ; ಅದು ಮೆಟ್ಟಿಲಾಗಲೂಬಹುದು” ಎಂಬುದನ್ನ ತೋರಿಸಿದ ಧೀಮಂತ ಬಾಬಾ ಸಾಹೇಬರು.ಸಮಾಜದಲ್ಲಿ ಭೇದಭಾವಗಳನ್ನು ತೊರೆದು ಸಮಾನತೆ ತರುವ ಪ್ರಯತ್ನ ಇನ್ನೂ ಸಾಗಬೇಕಿದೆ.ಅದೆಷ್ಟೋ ಅನಿಷ್ಟ ಪಧ್ಧತಿಗಳು ಇನ್ನೂ ಜೀವಂತವಾಗಿದೆ.ಎಲ್ಲರೂ ಸಮಾನರೆಂದು ಭಾವಿಸಿ,ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ದೇಶದ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡುತ್ತಾ ನಾವಿಂದು ಸಾಗಬೇಕಾಗಿದೆ.ಇಂತಹ ಮಹನೀಯರ ತತ್ವಗಳು,ಸಿಧ್ದಾಂತಗಳು ಇಂದಿಗೂ,ಮುಂದಿಗೂ ನಮಗೆಲ್ಲರಿಗೂ ಅನುಕರಣೀಯವಾದುದು ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾದುದು ನಮ್ಮ ಕರ್ತವ್ಯ.ಅವರ ಸಂದೇಶಗಳನ್ನು ಅರಿಯುತ್ತಾ,ಚಿಂತನೆಯೊಂದಿಗೆ ನಮ್ಮ ಬದುಕು ಕಟ್ಟಿಕೊಳ್ಳೋಣ.

✒ರಾಜಶ್ರೀ ಜೆ ಪೂಜಾರಿ

LEAVE A REPLY

Please enter your comment!
Please enter your name here