ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೆಂದರೆ ಏಕೀ ತಾತ್ಸಾರ?

ಸರ್ಕಾರಿ ಆಸ್ಪತ್ರೆ ಎಂದರೆ ಸಾಮಾನ್ಯವಾಗಿ ಹಲವರಲ್ಲಿ ತಾತ್ಸಾರ ಮನೋಭಾವ. ಇತ್ತೀಚೆಗಂತೂ ಸಿಬ್ಬಂದಿಗಳ ಯಾವುದೋ ಒಂದು ತಪ್ಪನ್ನು ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಅವರ ಜೀವನವನ್ನೇ ಜಾಲಾಡಿ ಬಿಡುತ್ತಾರೆ.

ಆದರೆ ನಿಜವಾಗಿಯೂ ಆ ಸಿಬ್ಬಂದಿಗಳು ಮನುಷ್ಯರೇ, ಅವರಿಗೂ ಮನಸ್ಸಿದೆ ಎಂಬುದನ್ನ ಮರೆತುಬಿಡುತ್ತೇವೆ. ಇತ್ತೀಚೆಗೆ ನಾನು ಉಡುಪಿಯಲ್ಲಿ ನಡೆಯುತ್ತಿರುವ ಆರ್ಮಿ ಸೈನಿಕ ಭರ್ತಿ ರಾಲಿಯಲ್ಲಿ ಪಾಲ್ಗೊಳ್ಳಲು ಕೊರೋನಾ ರಿಪೋರ್ಟ್ ಮಾಡಿಸಲು ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ. ನನ್ನಂತೆಯೇ ನೂರಾರು ಜನರು ಕೋರೋನಾ ತಪಾಸಣೆಗೆಂದು ಬಂದಿದ್ದರು. ಅವರಲ್ಲೊಬ್ಬ ಆಚೆ ಈಚೆ ನೋಡದೆ ನೇರವಾಗಿ ಬಂದವನು ತನಗೆ ನೀಡಿದ್ದ ಟೋಕನ್ ಟೇಬಲಿನ ಮೇಲೆ ಕುಟ್ಟಿ, “ಏನ್ ಕೆಲಸ ಮಾಡುತ್ತೀರಿ ನೀವು ಸರ್ಕಾರದ ಆಸ್ಪತ್ರೆಗಳ ಹಣೆಬರಹವೇ ಇಷ್ಟು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತೀರಿ,” ಎನ್ನುತ್ತಲೇ ಮಾತುಗಳನ್ನು ಆರಂಭಿಸಿದ. ಅಲ್ಲಿದ್ದ ಸಿಬ್ಬಂದಿಯ ತಾಳ್ಮೆ ಪರೀಕ್ಷಿಸತೊಡಗಿದ.

ನಿಜ ಹೇಳಬೇಕೆಂದರೆ, ಸರ್ಕಾರದಿಂದ ನಿಯೋಜನೆಗೊಂಡ ಸಿಬ್ಬಂದಿಯೋ ಬೆರಳೆಣಿಕೆಯಷ್ಟು. ಅವರಿಗೋ ಅದು ಬಿಡುವಿಲ್ಲದೆ ಕಾಲ. ಒಂದು ಕಡೆ ಕೋರೋನಾ ಮಹಾಮಾರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದರೆ, ಇನ್ನೊಂದೆಡೆ ಪರೀಕ್ಷೆಗೆಂದು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು. ಇದರ ಮಧ್ಯೆ ಸರ್ಕಾರಿ ಆಸ್ಪತ್ರೆಯಾದ ಕಾರಣ ಹೆರಿಗೆಗಳು, ಅಪಘಾತಕ್ಕೋಳಗದವರು, ಹೊರ ರೋಗಿಗಳು…ಅಬ್ಬಬ್ಬಾ ಎಲ್ಲವನ್ನೂ ಸುಧಾರಿಸುವ ಕಷ್ಟ ಅವರಿಗೇ ಗೊತ್ತು.

ನಾನು ರಿಪೋರ್ಟ್ ಮಾಡಿಸಿದ ಬಳಿಕ ಅಪಘಾತಕ್ಕೊಳಗಾಗಿ ಅಡ್ಮಿಟ್ ಆಗಿದ್ದ ರಾಯಚೂರು ಜಿಲ್ಲೆಯ ಉಮಲೂಟಿ ಗ್ರಾಮದ ಬೀರಪ್ಪ ಕೊಡ್ಲಿ ಎನ್ನುವ ರೋಗಿಯನ್ನು ಮಾತನಾಡಿಸಿದೆ. ನಿಮಗೆ ಇಲ್ಲಿನ ಸಿಬ್ಬಂದಿಗಳ ಬಗ್ಗೆ ಏನು ಅನ್ನಿಸುತ್ತಿದೆ ಎಂದು ಕೇಳಿದೆ, ಅದಕ್ಕವರು, “ನಾನು ಲಾರಿಯ ಚಕ್ರದಡಿಯಲ್ಲಿ ಸಿಲುಕಿ ಎರಡು ಕಾಲುಗಳನ್ನು ಕಳೆದುಕೊಂಡಿದ್ದೇನೆ. ನನ್ನ ಪ್ರಾಣ ಹೋಗುವಷ್ಟು ನೋವಾಗುತ್ತಿತ್ತು. ಯಾವ ಖಾಸಗಿ ಆಸ್ಪತ್ರೆಯಲ್ಲೂ ಅಡ್ಮಿಟ್ ಮಾಡಿಕೊಳ್ಳಲಿಲ್ಲ ಕೊನೆಗೆ ನನ್ನ ಪರಿಚಯದವರೊಬ್ಬರು ಈ ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದರು ಇಲ್ಲಿನ ಸಿಬ್ಬಂದಿಗಳು ನನಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ,” ಎಂದರು.

ಅದೆಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಲೂ ಸೇವಾ ಮನೋಭಾವದಿಂದ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವವರು ಕಾಣಸಿಗುತ್ತಾರೆ. ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯನ್ನು ನಮ್ಮ ಮಾತುಗಳಿಂದ ತಿವಿಯುವ ಬದಲು ಗೌರವಿಸೋಣ. ಅವರ ಮೇಲೆ ತಪ್ಪುಗಳನ್ನು ಹೊರಿಸುವುದು ಬಿಟ್ಟು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳೋಣ.

ಶಂಕರ್‌ ಓಬಳಬಂಡಿ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು