ರಾಜ್ಯದಲ್ಲಿ ನಾಳೆ (ಡಿ.10) ಸಾರಿಗೆ ನೌಕರರ ಧರಣಿ | ರಸ್ತೆಗಿಳಿಯಲ್ಲ ಕೆಎಸ್‌ಆರ್‌ಟಿ‌ಸಿ, ಬಿಎಂಟಿಸಿ ಬಸ್ಸುಗಳು!

0
215
Tap to know MORE!

ಬೆಂಗಳೂರು(ಡಿ.09): ಈ ತಿಂಗಳು ಕರ್ನಾಟಕ ರಾಜ್ಯದಲ್ಲಿ ಸಾಲು-ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿತ್ತು. ಇದಾದ ಬಳಿಕ ಡಿ.8ರಂದು ಅಂದರೆ ನಿನ್ನೆ ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಭಾರತ್​ ಬಂದ್​ಗೆ ಕರೆ ನೀಡಿದ್ದವು. ನಿನ್ನೆ ಕರ್ನಾಟಕ ಸೇರಿ ಹಲವೆಡೆ ಬಂದ್ ಬಿಸಿ ಹೆಚ್ಚಾಗಿತ್ತು. ರೈತರು ಮೆರವಣಿಗೆ, ಜಾಥಾ ಮೂಲಕ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೈತರು ಬಾರುಕೋಲು ಚಳುವಳಿ ನಡೆಸುತ್ತಿದ್ದಾರೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರಾಜ್ಯದ ವಿವಿಧ ಮೂಲೆಗಳಿಂದ ರಾಜಧಾನಿಗೆ ಆಗಮಿಸಿದ್ದಾರೆ. ಈ ಸಾಲು-ಸಾಲು ಪ್ರತಿಭಟನೆಗಳ ನಡುವೆ ನಾಳೆ ಗುರುವಾರ ಮತ್ತೊಂದು ಪ್ರತಿಭಟನೆ ಇದೆ. ಸಾರಿಗೆ ನೌಕರರು ಬೆಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದಾರೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ. ಹೀಗಾಗಿ ಗುರುವಾರ ರಾಜ್ಯದಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ವಿವಿಧ ವಿಭಾಗಗಳ ಸಾರಿಗೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸಾರಿಗೆ ನೌಕರರ ಜಾಥಾ ನಾಳೆ ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದೆ. ಅಲ್ಲಿಂದ ವಿಧಾನಸೌಧದವರೆಗೆ ಸಾರಿಗೆ ನೌಕರರು ಜಾಥಾ ಹೊರಡಲಿದ್ದಾರೆ. ಸಾರಿಗೆ ನೌಕರರ ನಡಿಗೆ- ಸರ್ಕಾರಿ ನೌಕರರಾಗುವ ಕಡೆಗೆ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಲಿದ್ದಾರೆ. ಈ ಕಾಲ್ನಡಿಗೆ ಜಾಥಾದಲ್ಲಿ ಸಾರಿಗೆ ನೌಕರರು ಅವರ ಹೆಂಡತಿ ಮಕ್ಕಳೊಂದಿಗೆ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇನ್ನು, ಕೆಎಸ್​ಆರ್​ಟಿಸಿ, ಬಿಎಂಟಿಸಿ ಹಾಗೂ ಎನ್​​ಇಕೆಆರ್​​ಟಿಸಿ ಸೇರಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಸಾರಿಗೆ ನೌಕರರು ಇದ್ದಾರೆ. ಈ ಜಾಥಾದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಸ್ವಾಮೀಜಿ ಹಾಗೂ ಚಂದ್ರಶೇಖರ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು??

  • ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು.
  • ಸರ್ಕಾರಿ ನೌಕರರಿಗೆ ನೀಡುವಂತಹ ಸವಲತ್ತುಗಳನ್ನು ಸಾರಿಗೆ ನೌಕರರಿಗೂ ನೀಡಬೇಕು.
  • ಕೊರೋನಾ ಸಂದರ್ಭದಲ್ಲಿ ಮೃತಪಟ್ಟ ಸಾರಿಗೆ ನೌಕರರಿಗೆ ಘೋಷಣೆ ಮಾಡಿದ್ದ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕು.

ನಾಳೆ ಸಾರಿಗೆ ನೌಕರರ ಧರಣಿ ಇರುವುದರಿಂದ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ನಾಳೆ ಬಸ್​ ಮೂಲಕ ಹೋಗುವ ಯೋಚನೆ ಹಾಕಿಕೊಂಡಿದ್ದರೆ ಮುಂದೂಡುವುದು ಒಳಿತು. ಯಾವುದೇ ಬಸ್ ರಸ್ತೆಗಿಳಿಯುವುದಿಲ್ಲ.

LEAVE A REPLY

Please enter your comment!
Please enter your name here