ಬೆಂಗಳೂರು: ಕೊರೊನಾ ಕಾರಣದಿಂದ ನಷ್ಟದಲ್ಲಿರುವ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ನೀಡಲು ರಾಜ್ಯ ಸರ್ಕಾರ 961 ಕೋಟಿ ರೂ ಗಳನ್ನು ನೀಡಲು ನಿರ್ಧರಿಸಿದ್ದು, ಅದರಲ್ಲಿ 426 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸರ್ಕಾರದ ಈ ನಿರ್ಧಾರದಿಂದ ನಾಲ್ಕು ತಿಂಗಳ ವೇತನ ಭರಿಸಲು ಸಾಧ್ಯವಾಗಲಿದೆ. ಕೆಎಸ್ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳ ಜೂನ್ ಮತ್ತು ಜುಲೈ ತಿಂಗಳ ಸಂಬಳಕ್ಕಾಗಿ 426 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.