ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ 2 ಬಾರಿ ಜೀವಾವಧಿ ಶಿಕ್ಷೆಗೆ ಒಳಗಾಗಿ, ಅಂಡಮಾನಿನ ಕಠಿಣ ಕಾರಾಗೃಹವಾಸ ಮಾಡಿ, ದೇಶಕ್ಕಾಗಿ ಸಾವಿಗೇ ಸವಾಲೆಸೆದ ಅಪ್ರತಿಮ ವೀರ ,ವಿನಾಯಕ ದಾಮೋದರ ಸಾವರ್ಕರ್ .
ಸಾವರ್ಕರ್ 1883 ಮೇ 28 ರಂದು ನಾಸಿಕ್ ಹತ್ತಿರದ ಭಾಗ್ಪುರದಲ್ಲಿ ಜನಿಸಿದರು. ಸಾವರ್ಕರ್ ವಂಶಸ್ಥರು ಪಾರಂಪರಿಕವಾಗಿ ಸಂಸ್ಕ್ರತ ವಿದ್ವಾಂಸರಾಗಿದ್ದರು ಮತ್ತು ಜಾಗೀರಿದಾರರಾಗಿದ್ದರು. ಸಾವರ್ಕರ್ಗೆ ಬಾಬಾರಾವ್ ಮತ್ತು ನಾರಾಯಣ ಎಂಬ ಇಬ್ಬರು ಸೋದರರು ಹಾಗು ಮೈನಾಬಾಯಿ ಎಂಬ ಸೋದರಿ ಇದ್ದರು.
ಇದನ್ನೂ ನೋಡಿ : ‘ವಂದೇ ಮಾತರಂ’ ಎಂಬ ಕ್ರಾಂತಿಕಾರಿಗಳ ಘೋಷವಾಕ್ಯ ಬರೆದವನೀತ!
ಮಕ್ಕಳು ಮಹಾಭಾರತ ,ರಾಮಾಯಣ ಮತ್ತು ಶಿವಾಜಿಯ ಕಥೆಗಳನ್ನು ಕೇಳುತ್ತಾ ಬೆಳೆದರು 10 ವರ್ಷದ ಹೊತ್ತಿಗೆಲ್ಲಾ ವಿನಾಯಕರ ಅನೇಕ ಕವಿತೆಗಳು ಸ್ಥಳಿಯ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಅವರು ಬುದ್ದಿವಂತರಾಗಿದ್ದರು. ನೆನಪಿನ ಶಕ್ತಿ ಆಗಾಧವಾಗಿತ್ತು ಮತ್ತು ಕಲಿಕೆಯ ದಾಹವಿತ್ತು .ಅವರು ಅದ್ಭುತ ಸಂಘಟನಾ ಶಕ್ತಿ ಹೊಂದಿದ್ದರು ಮತ್ತು ʼಮಿತ್ರ ಮೇಳʼ ಎಂಬ ಯುವ ದೇಶಭಕ್ತರ ಪಡೆ ಕಟ್ಟಿದ್ದರು. ಮುಂದೆ ಅದಕ್ಕೆ ʼಅಭಿನವ ಭಾರತʼ ಎಂದು ಮರುನಾಮಕರಣ ಮಾಡಿದರು. ಅದರ ಸಭೆಗಳು ನಿಯಮಿತವಾಗಿ ನಡೆಯುತ್ತಿದ್ದವು ಮತ್ತು ಭಾರತೀಯರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಸಲುವಾಗಿ ಪ್ರಮುಖ ಭಾರತೀಯ ಹಬ್ಬಗಳನ್ನು ಆಚರಿಸಲಾಗುತ್ತಿತ್ತು.
ವಿನಾಯಕರು 16 ವರ್ಷದವರಿದ್ದಾಗ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡರು. ಹಿರಿಯ ಸಹೋದರ ಬಾಬಾರಾವ್ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ವಿನಾಯಕ ಪ್ರಸಿದ್ಧ ಶಿಕ್ಷಣ ತಜ್ಞ ಚಿಪ್ಳೂಂಕರ್ ಅವರ ಮಗಳು ಯಮುನಾಬಾಯಿಯನ್ನು ವಿವಾಹವಾದರು.
ಬಿಎ ಮುಗಿಸಿದ ಬಳಿಕ ಅವರು ಕಾನೂನು ಓದಿದರು . ಬಾಲಗಂಗಾಧರ ತಿಲಕರ ಶಿಫಾರಸಿನಿಂದಾಗಿ ಅವರಿಗೆ ಲಂಡನ್ನಲ್ಲಿ ಅಧ್ಯಯನ ಮಾಡಲು ಶ್ಯಾಮ್ ಜಿ ಕೃಷ್ಣವರ್ಮಾ ನೀಡುತ್ತಿದ್ದ ವಿದ್ಯಾರ್ಥಿವೇತನ ಲಭಿಸಿತು. ವರ್ಮಾ, ಇಂಡಿಯ ಹೌಸ್ ಸೊಸೈಟಿ ನಡೆಸುತ್ತಿದ್ದರು.ಇದು ಬ್ರಿಟನ್ನಲ್ಲಿ ನೆಲೆಸಿದ್ದ ಅಥವಾ ಭೇಟಿ ನೀಡುತ್ತಿದ್ದ ಎಲ್ಲಾ ಭಾರತೀಯರಿಗೆ ಸ್ವತಂತ್ರ ರಾಜಕೀಯ ಮತ್ತು ಇತರ ಚಟುವಟಿಕೆಗಳ ತಾಣವಾಗಿತ್ತು.
ಭಾರತಕ್ಕಾಗಿ ತಮ್ಮ ಭಾವಪೂರ್ಣ ಬರಹಗಳ ಮೂಲಕ ಸಾವರ್ಕರ್ ಐರ್ಲ್ಯಾಂಡ್, ಅಮೆರಿಕ,ರಷ್ಯಾ,ಫ್ರಾನ್ಸ್, ಚೀನಾ,ಜರ್ಮನಿ ಮತ್ತು ಈಜಿಪ್ಟ್ಗಳಲ್ಲಿ ಅಭಿಮಾನಿಗಳನ್ನು ಸಂಪಾದಿಸಿದರು. ಕ್ರಾಂತಿಕಾರಿ ಮದನ್ಲಾಲ್ ಧಿಂಗ್ರಾ ಲಂಡನ್ನಲ್ಲಿ ಇಬ್ಬರು ಇಂಗ್ಲಿಷರನ್ನು ಹತ್ಯೆ ಮಾಡಿದ ಬಳಿಕ ಬ್ರಿಟಿಷರು ಇಂಡಿಯಾ ಹೌಸ್ ನ ಸದಸ್ಯರು, ಅದರಲ್ಲೂ ಸಾವರ್ಕರ್ ಅವರ ಬೆನ್ನು ಹತ್ತಿದರು. ಬಾಬಾರಾವ್ರನ್ನು ರಾಜದ್ರೋಹದ ಆರೋಪದ ಮೇಲೆ ಬಂಧಿಸಲಾಯಿತು. ಅವರ ಕಿರಿಯ ಸಹೋದರ ನಾರಾಯಣನನ್ನೂ ಬಂಧಿಸಿದರು.
ಇದರಿಂದ ಕ್ರೋಧಿತನಾದ ಕನ್ಹೆರೆ ಎಂಬ ತರುಣ ನಾಸಿಕ್ನ ಕಲೆಕ್ಟರ್ ಎಎಂಟಿ ಜಾಕ್ಸನ್ರನ್ನು ಹತ್ಯೆಗೈದ .ಈ ಸಂಬಂಧ 36 ಶಂಕಿತರನ್ನು ಬಂಧಿಸಿ ಸಾವರ್ಕರ್ ವಿರುದ್ಧ ವಾರೆಂಟ್ ಜಾರಿ ಮಾಡಲಾಯಿತು. ಅವರನ್ನು 1910 ಮಾರ್ಚ್ 13 ರಂದು ಲಂಡನ್ನಲ್ಲಿ ಬಂಧಿಸಲಾಯಿತು. ಯೆರವಾಡ ಜೈಲಿಗೆ ತಂದು ರಾಜದ್ರೋಹದ ಮತ್ತು ಶಸ್ತ್ರಾಸ್ತ್ರ ಪೂರೈಸಿದ್ದಕ್ಕೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು .ಜಾಕ್ಸನ್ ಕೊಲೆಗೆ ಪ್ರೇರಣೆ ಒದಗಿಸಿದ್ದಕ್ಕಾಗಿ ಮತ್ತೊಂದು 25 ವರ್ಷ ಶಿಕ್ಷೆ ಹೇರಲಾಯಿತು. ಸಾವರ್ಕರ್ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡರು.
ವಿನಾಯಕ ಸಾವರ್ಕರ್ ರನ್ನು ಡೊಂಗ್ರಿ, ಬೈಕುಲ ಮತ್ತು ಥಾಣೆ ಜೈಲುಗಳಲ್ಲಿಟ್ಟ ಬಳಿಕ 1911 ಜೂನ್ 4ರಂದು ಅಂಡಮಾನ್ ಕಾಲಾಪಾನಿ ಜೈಲಿಗೆ ದೂಡಲಾಯಿತು. ಎಲ್ಲಾ ಖೈದಿಗಳಂತೆ ಸಾವರ್ಕರ್ ಎದೆಯ ಮೇಲೆ ಒಂದು ಟೋಕನ್ ಧರಿಸಬೇಕಿತ್ತು. ಅದರಲ್ಲಿ ಅವರ ಬಿಡುಗಡೆಯ ದಿನಾಂಕ ಬರೆದಿರುತ್ತಿತ್ತು. ಸಾವರ್ಕರ್ ಬಿಡುಗಡೆಯಾಗಬೇಕಾದ ವರ್ಷ 1960 ಆಗಿತ್ತು .ಆಗಿನ್ನೂ 1920 ಇಸವಿ. ಅಷ್ಟು ದಿನ ನೀನು ಬದುಕಿರುತ್ತೀಯಾ? ಎಂದು ಯಾರೊ ಒಬ್ಬರು ಕೇಳಿದಾಗ, ಅಷ್ಟು ವರ್ಷ ಬ್ರಿಟಿಷ್ ಆಳ್ವಿಕೆ ಉಳಿಯುತ್ತದೆಯೇ? ಎಂದು ಮಾರುತ್ತರ ನೀಡಿದ್ದರು ಸಾವರ್ಕರ್!
ಕಾಲಾಪಾನಿ ಜೈಲಿನ ಅಮಾನವೀಯ ವಾತಾವರಣ ಕೆಲವು ದಿಟ್ಟ ಖೈದಿಗಳ ಸಾಹಸದಿಂದ ಭಾರತೀಯರಿಗೆ ಹಾಗೂ ಜಗತ್ತಿಗೆ ತಿಳಿಯಿತು. ಅನೇಕ ರಾಷ್ಟ್ರೀಯ ಮುಖಂಡರು ಸಾವರ್ಕರ್ ಮತ್ತು ಇತರ ರಾಜಕೀಯ ಖೈದಿಗಳ ಬಿಡುಗಡೆಗಾಗಿ ಒತ್ತಾಯಿಸಿದರು. ಅವರ ಪ್ರಯತ್ನಗಳು 1921 ಮೇ 2 ರಂದು ಫಲ ನೀಡಿದವು. ವಿನಾಯಕ ಮತ್ತು ಬಾಬಾರಾವ್ ರನ್ನು ಇತರ ಕೆಲವರೊಂದಿಗೆ ಭಾರತಕ್ಕೆ ಕರೆತರಲಾಯಿತು.
ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಅವರು ಸುಧಾರಣಾ ಚಟುವಟಿಗಳಲ್ಲಿ ತೊಡಗಿಸಿಂಡರು . ದೇಶಕ್ಕಾಗಿ ಹಲವಾರು ಕೆಲಸ ಮಾಡುತ್ತಾ 1966 ಫೆಬ್ರವರಿ 27 ರಂದು ಸಾವರ್ಕರ್ ಕೊನೆಯುಸಿರೆಳೆದರು. ಸಾವರ್ಕರ್ ಅವರ ದಣಿವಿಲ್ಲದ ಹೋರಾಟ, ತ್ಯಾಗ, ವೈಚಾರಿಕತೆ ಮತ್ತು ದೂರದೃಷ್ಟಿ ಪ್ರತಿಯೊಬ್ಬ ಭಾರತೀಯನಿಗೂ ದಾರಿದೀಪ. ವ್ಯಕ್ತಿಗತ ಖ್ಯಾತಿ ಮತ್ತು ಸಂಪತ್ತು ಯಾವತ್ತೂ ಅವರನ್ನು ಸೆಳೆಯಲಿಲ್ಲ .ಅವರು ಇಚ್ಛಾಶಕ್ತಿಯಿಂದ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತರು, ಮತ್ತು ಕೊನೆಗೂ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭಕ್ಕೆ ಸಾಕ್ಷಿಯಾದರು.