ಸಾಹಸಿ ಬಟುಕೇಶ್ವರ ದತ್‌ಗೆ ಸಿಹಿಯಾಗಲಿಲ್ಲ ‘ಸ್ವಾತಂತ್ರ್ಯ’

0
234
Tap to know MORE!

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಅದೆಷ್ಟೋ ಜನ ತಮ್ಮನ್ನು ಹೋರಾಟಕ್ಕಾಗಿ ಮುಡಿಪಾಗಿಟ್ಟು ಸ್ವಾತಂತ್ರ್ಯಾ ನಂತರ ತಮ್ಮ ಜೀವನವನ್ನು ಕಷ್ಟದಲ್ಲೇ ಕಳೆದು ಅಸ್ತಿತ್ವವೇ ಇಲ್ಲದಂತೆ ಮರೆಯಾಗಿದ್ದಾರೆ. ಅಂತಹವರಲ್ಲಿ ಬಟುಕೇಶ್ವರ ದತ್ ಒಬ್ಬರು.

ಬಟುಕೇಶ್ವರ ದತ್ 1910 ರ ನವೆಂಬರ್ 18 ರಂದು ಪುರ್ಬಾ ಬರ್ಧಮಾನ್ ಜಿಲ್ಲೆಯ ಓರಿ ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಪದವಿ ಶಿಕ್ಷಣದ ನಂತರ ಚಂದ್ರಶೇಖರ್ ಅಜಾದ್ ಮತ್ತು ಭಗತ್‌‌ ಸಿಂಗ್‌‌ ಅವರೊಂದಿಗೆ ಸಂಪರ್ಕ ಸಾಧಿಸಿ ಕ್ರಾಂತಿಕಾರೀ ಚಟುವಟಿಕೆಗಳಲ್ಲಿ ಪಾಲ್ಗೊಂಡರು .ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್ ಎಸ್ ಆರ್ ಎ) ಯಲ್ಲಿ ಕೆಲಸ ಮಾಡುವಾಗ ಬಾಂಬ್ ತಯಾರಿಕೆಯನ್ನೂ ಕಲಿತರು.

ಇದನ್ನೂ ಓದಿ : ಬ್ರಿಟಿಷ್ ದೌರ್ಜನ್ಯದ ವಿರುದ್ಧ ಮೊದಲ ಬಾಂಬ್ ಎಸೆದ 18ರ ತರುಣ

ಹೊಸ ಕ್ರಾಂತಿಕಾರಿಗಳ ಉದಯವನ್ನು ತಡೆಯುವ ನಿಟ್ಟಿನಲ್ಲಿ ಬ್ರಿಟಿಷ್ ಸರ್ಕಾರ ʼಭಾರತ ರಕ್ಷಣಾ ಕಾಯ್ದೆʼಯನ್ನು ಜಾರಿಗೊಳಿಸಲು ನಿರ್ಧರಿಸಿತು. ಬೇರೆ ಬೇರೆ ದೇಶಗಳ ಕ್ರಾಂತಿ ಚಟುವಟಿಕೆಗಳನ್ನು ಚೆನ್ನಾಗಿ ತಿಳಿದಿದ್ದ ಭಗತ್‌‌ ಸಿಂಗ್‌‌, ಫ್ರೆಂಚ್ ಚೇಂಬರ್ ಆಫ್ ಡೆಪ್ಯೂಟೀಸ್ ಮೇಲೆ ನಡೆದ ದಾಳಿಯ ರೀತಿಯಲ್ಲಿ ಕೇಂದ್ರ ಶಾಸಕಾಂಗ ಸಭೆಯೊಳಗೆ ಬಾಂಬ್ ಸಿಡಿಸಲು ನಿರ್ಧರಿಸಿದರು. ಮೊದಲು ಈ ಕಾರ್ಯಕ್ಕೆ ಸುಖದೇವ್ ಮತ್ತು ದತ್‌ರನ್ನು ನೇವಿಸಲಾಗಿತ್ತು. ನಂತರ ಸುಖದೇವ್ ಬದಲಾಗಿ ಭಗತ್‌‌ ಸಿಂಗ್‌‌ ಸಜ್ಜಾದರು.

ಅಂದು 8 ಎಪ್ರೀಲ್ 1929. ಭಗತ್ ಸಿಂಗ್ ಮತ್ತು ದತ್ ಎರಡು ಬಾಂಬ್‌ಗಳನ್ನು ಅಸೆಂಬ್ಲಿಯೊಳಗೆ ವಿಸಿಟರ್ಸ್ ಗ್ಯಾಲರಿಯಿಂದ ಎಸೆದರು. ಬಾಂಬ್‌ನಿಂದ ಬಂದ ಹೊಗೆ ಸಭಾಂಗಣವನ್ನು ತುಂಬಿತು ಮತ್ತು ಅವರು ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ ಕೂಗುತ್ತಾ ಕರಪತ್ರ ಎಸೆದರು. ವ್ಯಾಪಾರ ಸಂಬಂಧಿ ವಿವಾದಗಳು ಮತ್ತು ಸಾರ್ವಜನಿಕ ಸುರಕ್ಷತಾ ಮಸೂದೆಯನ್ನು ವಿರೋಧಿಸುವುದು ಮತ್ತು ಲಾಲಾ ಲಜಪತ್ ರಾಯ್ ಅವರ ಮರಣವನ್ನು ವಿರೋಧಿಸುವುದು ಕೃತ್ಯದ ಉದ್ದೇಶ ಎಂದು ಕರಪತ್ರದಲ್ಲಿ ಬರೆದಿತ್ತು. ಈ ಕೃತ್ಯದ ಉದ್ದೇಶ ಬ್ರಿಟಿಷ್ ಸರ್ಕಾರವನ್ನು ಹೆದರಿಸುವುದಾಗಿತ್ತು. ಸಿಂಗ್ ರ ಯೋಜನೆಯಂತೆ ಇಬ್ಬರೂ ಬಂಧಿತರಾದರು.

ಭಗತ್‌‌ ಸಿಂಗ್‌‌ ಮತ್ತು ಸುಖದೇವ್ ಅವರೊಂದಿಗೆ ದತ್ ಅವರನ್ನೂ ಕೇಂದ್ರೀಯ ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಳಪಡಿಸಲಾಯಿತು. 1928 ರಲ್ಲಿ ದೆಹಲಿಯ ಸೆಷನ್ಸ್ ನ್ಯಾಯಾಧೀಶರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ಮತ್ತು ಸ್ಫೋಟಕ ಪದಾರ್ಥಗಳ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದರು. ಅವರನ್ನು ಸೆಲ್ಯುಲರ್ ಜೈಲು, ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಬಂಧಿಸಿಡಲಾಯಿತು.

ಜೈಲಿನಿಂದ ಬಿಡುಗಡೆಯಾದ ನಂತರ ದತ್ ಕ್ಷಯರೋಗಕ್ಕೆ ತುತ್ತಾದರು. ಆದರೂ ಅವರು ಮಹಾತ್ಮ ಗಾಂಧಿಯವರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಮತ್ತೆ ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿದ್ದರು. ಭಾರತ ಸ್ವಾತಂತ್ರ್ಯ ಪಡೆದ ನಂತರ ,ಅವರು 1947 ನವೆಂಬರ್‌ನಲ್ಲಿ ಅಂಜಲಿಯೆಂಬವರನ್ನು ವಿವಾಹವಾದರು. ಭಾರತದ ಸ್ವತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಪ್ಪಟ ಕ್ರಾಂತಿಕಾರಿಗೆ ಸ್ವತಂತ್ರ ಭಾರತವು ಯಾವುದೇ ರೀತಿಯ ಗೌರವ ,ಮನ್ನಣೆ ನೀಡಲೇ ಇಲ್ಲ. ಅವರು ತಮ್ಮ ಉಳಿದ ಜೀವನವನ್ನು ರಾಜಕೀಯ ಪ್ರಚಾರದಿಂದ ದೂರವಿಟ್ಟು ಬಡತನದ ಬೇಗೆಯಲ್ಲಿ ಕಳೆದರು. ಸ್ವಾತಂತ್ರ್ಯಾನಂತರ ಜೀವನೋಪಾಯಕ್ಕಾಗಿ ಸಣ್ಣ ಪುಟ್ಟ ಕೆಲಸ ಮಾಡಿ ಬದುಕಿದರು.

ಬಟುಕೇಶ್ವರ ದತ್, 20 ಜುಲೈ 1965 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಧೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು. ಇವರ ಅಂತ್ಯಕ್ರಿಯೆಯನ್ನು ಪಂಜಾಬ್ನ ಫಿರೋಜ್ಪುರ ಬಳಿಯ ಹುಸೇನಿವಾಲದಲ್ಲಿ ನಡೆಸಲಾಯಿತು. ಅಲ್ಲಿ ಇವರ ಒಡನಾಡಿಗಳಾದ ಭಗತ್‌‌ ಸಿಂಗ್‌‌, ರಾಜ್ಗುರು, ಸುಖ್ದೇವ್ ಅವರ ಶವಗಳ ಅಂತ್ಯಕ್ರಿಯೆಯನ್ನೂ ಅಲ್ಲಿಯೇ ನಡೆಸಲಾಗಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಕ್ರಾಂತಿಕಾರಿಯೊಬ್ಬನ ಜೀವನ ಹೀನಾಯವಾಗಿ ಕೊನೆಗೊಂಡದ್ದು ವಿಪರ್ಯಾಸವೇ ಸರಿ…!

ಸುರೇಶ್ ರಾಜ್
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here